ಉಡುಪಿ: ರಾಜಕೀಯ ಸೇರಿ, ಶಾಸಕರಾಗಿ ದುಡ್ಡು ಮಾಡಿಕೊಂಡರು ಎನ್ನುವ ಮಾತುಗಳು ಧಾರಾಳವಾಗಿ ಕೇಳಿಬರುತ್ತಿರುವ ಕಾಲದಲ್ಲೇ, ಹಣದ ಬಗ್ಗೆ ಯಾವ ವ್ಯಾಮೋಹವನ್ನೂ ತೋರಿಸದೆ ತನ್ನದೇ ಜಮೀನು, ಆಸ್ತಿಯನ್ನು ಮಾರಿ ಜನಸೇವೆ ಮಾಡಿದ ಅಪರೂಪದ ರಾಜಕಾರಣಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕೀಯ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಇದರ ಅಧಿಕೃತ ಘೋಷಣೆಯಾಗಲಿದೆ.
ಕಳೆದ 25 ವರ್ಷಗಳಿಂದ ಕುಂದಾಪುರ ಕ್ಷೇತ್ರದ ಪರ್ಮನೆಂಟ್ ಶಾಸಕರಾಗಿ ಅಜೇಯರಾಗಿ ಉಳಿದಿರುವ ಶ್ರೀನಿವಾಸ ಶೆಟ್ಟಿ ಅವರು ಅಜಾತಶತ್ರು ರಾಜಕಾರಣಿಯಾಗಿರುವ ಜತೆಗೆ ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಹೊಂದಿದವರು. ಅವರು ಕಳೆದ ಚುನಾವಣೆಯ ಸಂದರ್ಭದಲ್ಲೇ ನಿವೃತ್ತಿ ಹೊಂದುತ್ತಾರೆ ಎಂಬ ಸುದ್ದಿ ಇತ್ತು. ಅದು ನಿಜವಾಗಿರಲಿಲ್ಲ. ಈ ಬಾರಿ ಅವರ ಆಪ್ತ ವಲಯದಿಂದಲೇ ಈ ಸುದ್ದಿ ಬಂದಿರುವುದರಿಂದ ಬಹುತೇಕ ನಿಜ ಎಂದು ಹೇಳಲಾಗುತ್ತಿದೆ.
ಬಿಜೆಪಿಯ ಹಿರಿಯ ನಾಯಕ. ಬಿಜೆಪಿ ನಗಣ್ಯವಾಗಿದ್ದ ಕಾಲದಲ್ಲಿ ಧ್ವಜ ಹಿಡಿದು ಮುನ್ನಡೆಸಿದ್ದ ಎ.ಜಿ. ಕೊಡ್ಗಿ ಅವರ ಪಟ್ಟ ಶಿಷ್ಯರು ಶ್ರೀನಿವಾಸ ಶೆಟ್ಟಿ. ಈಗ ಎ.ಜಿ. ಕೊಡ್ಗಿ ಅವರ ಮಗ ಕಿರಣ್ ಕೊಡ್ಗಿ ಶ್ರೀನಿವಾಸ ಶೆಟ್ಟರ ಶಿಷ್ಯರಾಗಿ ಮುನ್ನಡೆಯುತ್ತಿದ್ದಾರೆ. ಈ ಬಾರಿ ಗುರುಪುತ್ರನೂ, ಶಿಷ್ಯನೂ ಆಗಿರುವ ಕಿರಣ್ ಕೊಡ್ಗಿ ಅವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಶ್ರೀನಿವಾಸ ಶೆಟ್ಟಿ ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕಿರಣ್ ಕೊಡ್ಲಿ ಬಹುಕಾಲದಿಂದ ಹಾಲಾಡಿ ಅವರ ಬಲಗೈ ಎಂದೇ ಗುರುತಿಸಿಕೊಂಡವರು. ಹೀಗಾಗಿ ಟಿಕೆಟ್ ಘೋಷಣೆಗೆ ಮೊದಲು ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದಾರೆ ಎನ್ನಲಾಗಿದೆ.
ಕುಂದಾಪುರದಲ್ಲಿ ಒಂದು ಕಚೇರಿಯನ್ನೂ ಇಟ್ಟುಕೊಳ್ಳದೆ, ತನ್ನ ಮನೆಯನ್ನೇ ಪಕ್ಷ ಮತ್ತು ಶಾಸಕರ ಕಚೇರಿಯಾಗಿ ತೆರೆದಿಟ್ಟಿರುವ ಶ್ರೀನಿವಾಸ ಶೆಟ್ಟಿ ಅವರು ತಮಗಿರುವ ಭೂಮಿ ಮಾರಿ ಜನ ಸೇವೆ ಮಾಡಿದ್ದಲ್ಲದೆ ಸಾಲ ಕೂಡಾ ಮಾಡಿದ್ದಾರೆ ಎನ್ನಲಾಗಿದೆ.
ಇಂದಿಗೂ ವಾಜಪೇಯಿಯವರ ಹಾಗೆಯೇ ಮದುವೆಯೂ ಆಗದೆ ತನ್ನ ಅನ್ನವನ್ನು ತಾನೇ ಮೇಯಿಸಿ ಉಣ್ಣುವಷ್ಟು ಸರಳತೆಯನ್ನು ಮೈಗೂಡಿಸಿಕೊಂಡಿರುವ ಶಾಸಕರು ತಮ್ಮಲ್ಲಿ ಕಷ್ಟ ಹೇಳಿಕೊಂಡು ಬಂದವರಿಗೆ ಏನಾದರೂ ಕೊಟ್ಟು ಕಳುಹಿಸುವಷ್ಟು ಸಹೃದಯಿ. ಯಾವುದೇ ಕಮಿಷನ್ ಮೇಲೆ ಆಸೆಪಡದವರು ಎನ್ನುವುದು ಅಲ್ಲಿನ ಜನ ಹೇಳುವ ಮಾತು.
ಮಂತ್ರಿ ಸ್ಥಾನ ಕೊಡದೆ ಅಪಮಾನ ಆಗಿತ್ತು
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕುಂದಾಪುರಕ್ಕೆ ಸೀಮಿತವಾದ ಶಾಸಕರಾಗಿದ್ದರು. ಅದರಲ್ಲೂ ಮನೆಗೇ ಸೀಮಿತವಾಗಿದ್ದೇ ಹೆಚ್ಚು. ಆದರೆ, ಅವರಿಗಿರುವ ವರ್ಚಸ್ಸು, ಒಳ್ಳೆಯತನಗಳಿಗೆ ಪೂರಕವಾಗಿ ಮಂತ್ರಿ ಸ್ಥಾನ ಕೊಡುವುದು ಗೌರವ ಎಂಬ ಮಾತು ಹಿಂದಿನಿಂದಲೂ ಇತ್ತು. ಅದಕ್ಕೊಂದು ಪೂರಕವಾದ ವಾತಾವರಣ ಸೃಷ್ಟಿಯಾಗಿಯೂ ಇತ್ತು. ಅವರನ್ನು ಮಂತ್ರಿ ಮಂಡಲ ವಿಸ್ತರಣೆಯ ದಿನ ಬೆಂಗಳೂರಿಗೆ ಕರೆಸಲಾಗಿತ್ತು. ಶ್ರೀನಿವಾಸ ಶೆಟ್ಟರು ಒಲ್ಲದ ಮನಸ್ಸಿನಿಂದಲೇ ಹೋಗಿದ್ದರು. ಅಂತಿಮವಾಗಿ ಅವರನ್ನು ಈಗ ಪ್ರಮಾಣ ವಾಚನಕ್ಕೆ ಕರೆಯುತ್ತಾರೆ ಎಂದು ಕಾಯುತ್ತಿದ್ದರೆ ಅವರ ಬದಲು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕರೆದು ಮಂತ್ರಿ ಸ್ಥಾನ ಕೊಡಲಾಗಿತ್ತು!
ಇದಾದ ಬಳಿಕ ಸ್ವಲ್ಪ ಮಟ್ಟಿಗೆ ಅಸಹಕಾರ ತೋರಿದ್ದ ಶ್ರೀನಿವಾಸ ಶೆಟ್ಟರು ಮುಂದಿನ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲುವಂತೆ ನೋಡಿಕೊಂಡಿದ್ದರು. ತಾವೂ ಪಕ್ಷೇತರರಾಗಿಯೇ ನಿಂತು ಸಾಮರ್ಥ್ಯ ಪ್ರದರ್ಶಿಸಿದ್ದರು. ಬಳಿಕ ಮತ್ತೆ ಬಿಜೆಪಿ ಜತೆ ಕೈ ಜೋಡಿಸಿದ್ದರು.
ಈಗ ರಾಜಕೀಯ ನಿವೃತ್ತಿಯನ್ನು ಘೋಷಿಸಿರುವ ಅವರು ಕ್ಷೇತ್ರದ ಟಿಕೆಟನ್ನು ಕಿರಣ್ ಕೊಡ್ಗಿ ಅವರಿಗೆ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಶ್ರೀನಿವಾಸ ಶೆಟ್ಟರನ್ನು ಬಿಟ್ಟರೆ ಬೇರೆ ಯಾರಿಗೇ ಆದರೂ ಪ್ರಬಲ ಪೈಪೋಟಿ ನೀಡುವ ಸ್ಥಿತಿಯಲ್ಲಿ ಕಾಂಗ್ರೆಸ್ ಇರುವುದರಿಂದ ಪಕ್ಷ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಾಗಿದೆ. ಮಾಜಿ ಸಚಿವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೂ ಆಗಿರುವ ಜಯಪ್ರಕಾಶ್ ಶೆಟ್ಟಿ ಅವರ ಹೆಸರೂ ಕೇಳಿಬರುತ್ತಿದೆ.