ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Election) ಮಹತ್ವದ ಘಟ್ಟ ಏಪ್ರಿಲ್ 24ರಂದು ಘಟಿಸಲಿದೆ. ಚುನಾವಣೆ ಸ್ಪರ್ಧೆಗೆ ಆಕಾಂಕ್ಷೆ ವ್ಯಕ್ತಪಡಿಸಿ ನಾಮಪತ್ರ ಸಲ್ಲಿಸಿದವರು ಕಣದಿಂದ ಹಿಂದೆ ಸರಿಯಲು ಸೋಮವಾರ ಕೊನೆಯ ದಿನವಾಗಿದೆ (nomination withdrawal last day). ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಬಂಡುಕೋರರಾಗಿ ಕಣಕ್ಕೆ ಇಳಿದಿರುವ ನಾಯಕರನ್ನು ಮನವೊಲಿಸಿ ನಾಮಪತ್ರ ಹಿಂದೆಗೆದುಕೊಳ್ಳುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಸೋಮವಾರ ಸಂಜೆ 3 ಗಂಟೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಅಂತಿಮ ಗಡುವಾಗಿದೆ. ಆ ಬಳಿಕ ರಾಜ್ಯ ಚುನಾವಣೆಯ ಅಂತಿಮ ಕಣದ ಸ್ಪಷ್ಟ ಚಿತ್ರಣ ದೊರೆಯಲಿದೆ.
ಕಳೆದ ಏಪ್ರಿಲ್ 13ರಿಂದ 20ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ನಾಮಪತ್ರ ಪರಿಶೀಲನೆ ನಡೆದು ಇದೀಗ ನಾಮಪತ್ರ ಹಿಂದೆಗೆತಕ್ಕೆ ಅವಕಾಶ ನೀಡಲಾಗಿದೆ. ಅದಾದ ಬಳಿಕ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ.
ನಾನಾ ರಾಜಕೀಯ ಪಕ್ಷಗಳಿಗೆ ಟಿಕೆಟ್ ವಂಚಿತರಿಂದ ಬಂಡಾಯ ಎದುರಾಗಿದೆ. ಹಲವು ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಅವರು ಕಣಕ್ಕಿಳಿದಿದ್ದಾರೆ. ಹೀಗಾಗಿ ಅವರನ್ನು ಮನವೊಲಿಸಲು ಸಂಧಾನ, ಎಚ್ಚರಿಕೆ ಮತ್ತಿತರ ತಂತ್ರಗಳನ್ನು ಬಳಸಲಾಗುತ್ತಿದೆ. ಎಷ್ಟು ಜನ ಬಂಡಾಯದಿಂದ ಹಿಂದಕ್ಕೆ ಸರೀತಾರೆ..? ಎಷ್ಟು ಜನ ಪಕ್ಷದ ಅಭ್ಯರ್ಥಿಗಳ ವಿರುದ್ಧ ಸೆಡ್ಡು ಹೊಡೆದು ಕಣದಲ್ಲಿರುತ್ತಾರೆ ಎನ್ನುವುದು ಸಂಜೆಯ ಹೊತ್ತಿಗೆ ಕ್ಲಿಯರ್ ಆಗಲಿದೆ.
ಎಷ್ಟು ಮಂದಿ ಈಗ ಕಣದಲ್ಲಿದ್ದಾರೆ?
ಈಗಾಗಲೇ 3130 ಅಭ್ಯರ್ಥಿಗಳಿಂದ ಸಲ್ಲಿಕೆಯಾದ 5000 ಕ್ಕೂ ಹೆಚ್ಚು ನಾಮಪತ್ರಗಳು ಕ್ರಮಬದ್ಧವಾಗಿರುವುದನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇದರಲ್ಲಿ 2890 ಪುರುಷ ಅಭ್ಯರ್ಥಿಗಳು ಹಾಗೂ 239 ಮಹಿಳಾ ಅಭ್ಯರ್ಥಿಗಳು ಹಾಗೂ ಇತರೆ ಒಬ್ಬರು ತೃತೀಯ ಲಿಂಗಿ ಇದ್ದಾರೆ.
ಬಿಜೆಪಿ- 224, ಕಾಂಗ್ರೆಸ್- 223, ಜೆಡಿಎಸ್- 211, ಎಎಪಿ- 212, ಬಿಎಸ್‍ಪಿ- 137, ಸಿಪಿಐಎಂ- 4, ಎನ್‍ಪಿಪಿ- 4, ನೊಂದಾಯಿತ, ಮಾನ್ಯತೆರಹಿತ ಪಕ್ಷಗಳು- 736, ಸ್ವತಂತ್ರ ಅಭ್ಯರ್ಥಿಗಳು- 1379 ಕಣದಲ್ಲಿದ್ದಾರೆ.
ಕಣದಿಂದ ಹಿಂದೆ ಸರೀತಾರಾ ಶಾರದಾ ಶೆಟ್ಟಿ?
ಕುಮಟಾ: ಕುಮಟಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಾರದಾ ಮೋಹನ ಶೆಟ್ಟಿ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚಿದ್ದು, ತಾವು ಸಲ್ಲಿಸಿದ ನಾಮಪತ್ರ ಇಂದು ವಾಪಸ್ ಪಡೆಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕಾರ್ಯಕರ್ತರ ಒತ್ತಾಯದ ಮೇರೆಗೆ ಬಂಡಾಯವಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಅವರಿಗೆ ಚುನಾವಣೆಯಲ್ಲಿ ತೀವ್ರ ತೊಂದರೆಯಾಗುವ ಸಾಧ್ಯತೆ ಎದುರಾಗಿತ್ತು.
ಹಾಗಾಗಿ ಕಾಂಗ್ರೆಸ್ ಮುಖಂಡರೆಲ್ಲ ಸೇರಿ ಶಾರದಾ ಶೆಟ್ಟರ ಮನವೊಲಿಸಿ ನಾಮಪತ್ರವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿತ್ಯ ಕರೆ ಮಾಡಿ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ನಿಂದಲೂ ತೀವ್ರ ಒತ್ತಡವಿದ್ದ ಕಾರಣ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಾರದಾ ಶೆಟ್ಟರು ಇಂದು ನಾಮಪತ್ರ ವಾಪಸ್ ಪಡೆಯುವ ಮೂಲಕ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಇಂದು ನಾಮಪತ್ರ ವಾಪಸ್ ಪಡೆದು ಸಂಜೆ ಬೆಂಗಳೂರು ಪ್ರಯಾಣಿಸಿ, ನಾಳೆ ಕಾಂಗ್ರೆಸ್ ಪ್ರಭಾವಿ ಮುಖಂಡರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ರಾಮದುರ್ಗದಲ್ಲಿ ಯಾದವಾಡ ಮನವೊಲಿಕೆ ಯಶಸ್ವಿ
ಬೆಳಗಾವಿಯ ರಾಮದುರ್ಗ ಕ್ಷೇತ್ರದ ಟಿಕೆಟ್ ವಂಚಿತ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಮನವೊಲಿಕೆ ಯಶಸ್ವಿಯಾಗಿದ್ದು, ಅವರು ಸೋಮವಾರ ನಾಮಪತ್ರ ವಾಪಸ್ ಪಡೆಯಲಿದ್ದಾರೆ.
ಮಹಾದೇವಪ್ಪ ಯಾದವಾಡ ಅವರು ಟಿಕೆಟ್ ಸಿಗದಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಎರಡು ದಿನದ ಹಿಂದೆ ಮಹಾದೇವಪ್ಪ ಯಾದವಾಡ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈರಣ್ಣ ಕಡಾಡಿ ಭೇಟಿ ನೀಡಿದ್ದರು. ಮಹದೇವಪ್ಪ ಯಾದವಾಡ ಅವರು ಭಾನುವಾರ ರಾಮದುರ್ಗ ಕ್ಷೇತ್ರದ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ : Yogi Adityanath: ಏಪ್ರಿಲ್ 26ರಂದು ಕರಾವಳಿಯಲ್ಲಿ ಯೋಗಿ ‘ಅಲೆ’, ಅಬ್ಬರದ ಪ್ರಚಾರಕ್ಕೆ ಬಿಜೆಪಿ ಸಿದ್ಧತೆ