Site icon Vistara News

Karnataka Elections : ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌ ; ಕೈ ನೀಡಿದ ಆಫರ್‌ ಏನು? ಸವದಿ ನಿರೀಕ್ಷೆಗಳೇನು?

Laxman savadi

#image_title

ಬೆಳಗಾವಿ/ಬೆಂಗಳೂರು: ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಸಿಗದೆ ಸಿಟ್ಟಾಗಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ವಿಧಾನ ಪರಿಷತ್‌ ಸ್ಥಾನಕ್ಕೆ ಮತ್ತು ಕಮಲ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪ್ರಕ್ರಿಯೆಗಳೆಲ್ಲ ಶುಕ್ರವಾರ ಸಂಜೆ ನಡೆಯುವ ಸಾಧ್ಯತೆಗಳಿವೆ. ಅವರ ರಾಜೀನಾಮೆಯನ್ನು ಸ್ವೀಕರಿಸಬೇಕಾಗಿರುವ ಬಸವರಾಜ ಹೊರಟ್ಟಿ ಅವರು ಸಂಜೆಯ ಹೊತ್ತಿಗೆ ಬೆಂಗಳೂರು ತಲುಪಲಿದ್ದಾರೆ.

ಈ ನಡುವೆ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಪಕ್ಷ ಸೇರುವ ನಿಟ್ಟಿನಲ್ಲಿ ಚರ್ಚೆ ಆರಂಭಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಬೆಂಗಳೂರು ತಲುಪಿರುವ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ರಹಸ್ಯ ಸ್ಥಳದಲ್ಲಿ ಭೇಟಿ ಮಾಡುತ್ತಿದ್ದಾರೆ. ಶಿವಕುಮಾರ್‌ ಜತೆಗೆ ಚರ್ಚೆ ನಡೆಸಿದ ಬಳಿಕ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಚರ್ಚೆ ನಡೆಸಲಿದ್ದಾರೆ. ಎರಡೂ ನಾಯಕರ ಜತೆಗಿನ ಚರ್ಚೆ ವೇಳೆ ಕಾಂಗ್ರೆಸ್‌ ಸೇರ್ಪಡೆಯ ಆಫರ್‌ ಮತ್ತು ಷರತ್ತುಗಳ ಬಗ್ಗೆ ಚರ್ಚೆ ನಡೆಯಲಿದೆ. ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಸೇರುವ ನಿಟ್ಟಿನಲ್ಲಿ ಮೊದಲ ಪ್ರಯತ್ನ ನಡೆಸಿದವರು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಎಂದು ತಿಳಿದುಬಂದಿದೆ.

ಮೊದಲು ಹಂಗು ಕಳಚಿಕೊಳ್ಳಬೇಕು ಎಂದ ಸವದಿ

ಗುರುವಾರ ರಾತ್ರಿ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಲಕ್ಷ್ಮಣ ಸವದಿ, ʻʻಬೆಂಗಳೂರಿಗೆ ಹೋಗಿ ಸಾಧಕ, ಬಾಧಕ ಚರ್ಚೆ ಮಾಡಿ ಒಂದು ನಿರ್ಣಯಕ್ಕೆ ಬರುತ್ತೇನೆ. ವಿಧಾನ ಪರಿಷತ್ ಸ್ಥಾನ ಪಕ್ಷಕ್ಕೆ ರಾಜೀನಾಮೆ ಕೊಡಬೇಕು. ಇನ್ನೂ ಬಿಜೆಪಿಯ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು, ಕಾಂಗ್ರೆಸ್, ಜೆಡಿಎಸ್ ನಿಂದ ಆಹ್ವಾನ ಇದೆ. ಸಂಜೆಯ ವೇಳೆಗೆ ಒಂದು ನಿರ್ಧಾರ ಆಗಲಿದೆ. ಏಪ್ರಿಲ್ 17 ಇಲ್ಲವೇ 18ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆʼʼ ಎಂದು ಹೇಳಿದರು.

ಯಾವುದೇ ಪಕ್ಷದ ಜತೆಗೆ ಚರ್ಚೆ ಮಾಡಿದರೂ ಯಾವುದೇ ವೈಯಕ್ತಿಕ ಬೇಡಿಕೆಗಳನ್ನು ಇಡುವುದಿಲ್ಲ. ಅಥಣಿ ಕೆಲ ಪ್ರದೇಶ ನೀರಾವರಿಯಿಂದ ವಂಚಿತಗೊಂಡಿದೆ, ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಆಸೆ, ವೈಯಕ್ತಿಕ ಬೇಡಿಕೆ ಅಲ್ಲ, ನೀರಾವರಿ ಬೇಡಿಕೆ ಇಡುತ್ತೇನೆ‌ ಎಂದು ಹೇಳಿದ್ದರು ಸವದಿ.

ಸವದಿ ಸೇರ್ಪಡೆಯಿಂದ ಅನುಕೂಲ ಎಂದ ಹೆಬ್ಬಾಳ್ಕರ್‌

ಈ ನಡುವೆ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು, ʻʻಲಕ್ಷ್ಮಣ ಸವದಿ ಅವರು ಇಂದು ನಾಯಕರ ಜತೆಯಾಗಿ ಚರ್ಚೆ ಮಾಡ್ತಾರೆ. ಆಮೇಲೆ ಪಕ್ಷ ಸೇರ್ಪಡೆ ತೀರ್ಮಾನ ಆಗುತ್ತದೆ. ಅವರು ಕಾಂಗ್ರೆಸ್‌ಗೆ ಬರೋದ್ರಿಂದ ಪಕ್ಷಕ್ಕೆ ಬಹಳಷ್ಟು ಅನುಕೂಲಕ ಆಗಲಿದೆ. ಅವರು ಹಿರಿಯರು, ಅನುಭವಿಗಳು, ಡಿಸಿಎಂ ಸ್ಥಾನದವರೆಗೂ ಹೋಗಿ ಬಂದವರು, ಅವರು ಪಕ್ಷಕ್ಕೆ ಬರೋದ್ರಿಂದ ನಮ್ಮ‌ ಪಕ್ಷಕ್ಕೆ ಸೀಟುಗಳು ಜಾಸ್ತಿ ಬರೋದಕ್ಕೆ ಸಹಾಯ ಆಗುತ್ತದೆ. ಉತ್ತರ ಕರ್ನಾಟಕದಲ್ಲಿ ಒಂದು ಇಂಪ್ಯಾಕ್ಟ್ ಮಾತ್ರ ಖಂಡಿತ ಆಗುತ್ತದೆʼʼ ಎಂದು ಹೆಬ್ಬಾಳ್ಕರ್‌ ಹೇಳಿದರು.

ಲಕ್ಷ್ಮಣ ಸವದಿ ಜತೆಗೆ ಹೆಬ್ಬಾಳ್ಕರ್‌ ಅವರ ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರು ಬೆಂಗಳೂರಿಗೆ ಪ್ರಯಾಣಿಸಿರುವ ಬಗ್ಗೆ ಮಾತನಾಡಿದ ಅವರು, ʻʻಅವನಿಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ. ನಾನು ನನ್ನ ಎಲೆಕ್ಷನ್ ನಲ್ಲಿ ಬ್ಯುಸಿ ಇದೀನಿʼʼ ಎಂದರು.

ರಹಸ್ಯ ಸ್ಥಳದಲ್ಲಿ ಡಿಕೆಶಿ- ಲಕ್ಷ್ಮಣ ಸವದಿ ಮಾತುಕತೆ

ಲಕ್ಷ್ಮಣ್‌ ಸವದಿ ಅವರು ಬೆಂಗಳೂರಿಗೆ ಬರುತ್ತಿದ್ದಂತೆಯೇ ಇತ್ತ ಡಿ.ಕೆ. ಶಿವಕುಮಾರ್‌ ಅವರು ಬೆಳಗ್ಗೆ ಏಳು ಗಂಟೆಗೇ ಮನೆ ಬಿಟ್ಟು ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರು ತಮ್ಮ ಗನ್ ಮ್ಯಾನ್ ಮತ್ತು ಡ್ರೈವರ್ ಬಿಟ್ಟು ಮಗಳ ಕಾರಿನ ಡ್ರೈವರ್ ಕರೆದುಕೊಂಡು ಹೋಗಿದ್ದಾರೆ ಶಿವಕುಮಾರ್‌. ಮಾತುಕತೆಯ ವೇಳೆ ಕಾಂಗ್ರೆಸ್‌ ಸೇರ್ಪಡೆಯ ಷರತ್ತು ಮತ್ತು ಆಫರ್‌ಗಳ ಬಗ್ಗೆ ಚರ್ಚೆ ನಡೆಯಲಿದೆ.

ಹಾಗಿದ್ದರೆ ಕಾಂಗ್ರೆಸ್‌ ಕೊಟ್ಟಿರುವ ಆಫರ್‌ಗಳೇನು?

– ಅಥಣಿ ಟಿಕೆಟ್‌ ಮಿಸ್‌ ಆದ ಸಿಟ್ಟಿನಲ್ಲಿರುವ ಲಕ್ಷ್ಮಣ ಸವದಿಗೆ ಕಾಂಗ್ರೆಸ್‌ ಕೆಲವು ಆಫರ್‌ಗಳನ್ನು ಇಟ್ಟಿದೆ ಎಂದು ಹೇಳಲಾಗಿದೆ. ಒಂದು ವೇಳೆ ಅಥಣಿಯಿಂದಲೇ ಸ್ಪರ್ಧೆ ಮಾಡುವುದಾದರೆ ಅದಕ್ಕೂ ಅವಕಾಶವಿದೆ. ಯಾಕೆಂದರೆ ಕಾಂಗ್ರೆಸ್‌ ಇನ್ನೂ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿಲ್ಲ.
– ಲಕ್ಷ್ಮಣ ಸವದಿ ಅವರೇ ನಿಲ್ಲಬಹುದು, ಇಲ್ಲವೇ ನಿಮ್ಮ ಪುತ್ರ ಚಿದಾನಂದಗೆ ಬೇಕಾದರೂ ಟಿಕೆಟ್ ಕೊಡುತ್ತೇವೆ.
– ವಿಧಾನ ಸಭಾ ಗೆ ಸ್ಪರ್ಧೆ ಮಾಡುವುದಿಲ್ಲ ಎಂದಾದರೆ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿ.
– ಮುಂದೆ ಲೋಕಸಭಾ ಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿ ನಿಲ್ಲಲು ಅವಕಾಶವಿದೆ.
– ಕಾಂಗ್ರೆಸ್ ಸರ್ಕಾರ ಬಂದ್ರೆ ನಿಮ್ಮನ ಎಂ ಎಲ್ ಸಿ ಮಾಡಿ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ.

ಇದನ್ನೂ ಓದಿ : Karnataka Elections : ಲಕ್ಷ್ಮಣ ಸವದಿ ಬಳಿಕ ಮತ್ತೊಬ್ಬ ಬೆಳಗಾವಿ ಬಿಜೆಪಿ ನಾಯಕನಿಗೆ ಕಾಂಗ್ರೆಸ್‌ ಗಾಳ; ಕೈಪಾಲಾಗ್ತಾರಾ ಅನಿಲ್‌ ಬೆನಕೆ?

Exit mobile version