Site icon Vistara News

Karnataka Elections : ಲಕ್ಷ್ಮಣ ಸವದಿ ನಾಳೆ ಮೇಲ್ಮನೆ, ಬಿಜೆಪಿಗೆ ವಿದಾಯ; ಕಾಂಗ್ರೆಸ್‌ ಸೇರ್ಪಡೆಗೆ ವೇದಿಕೆ ರೆಡಿ

Laxman Savadi

#image_title

ಬೆಳಗಾವಿ: ವಿಧಾನಸಭಾ ಚುನಾವಣೆ (Karnataka Elections) ಟಿಕೆಟ್‌ ವಂಚಿತ ಮಾಜಿ ಸಚಿವ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಅವರು ವಿಧಾನ ಪರಿಷತ್‌ ಸ್ಥಾನಕ್ಕೆ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಅಥಣಿಯಲ್ಲಿ ನಡೆದ ಬೃಹತ್‌ ಸಭೆಯಲ್ಲಿ ಘೋಷಿಸಿದ್ದು, ಅದರ ಬೆನ್ನಿಗೇ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದಾರೆ.

ʻʻನಾಳೆಯೇ ಪಕ್ಷದ ಪ್ರಾಥಮಿಕ ಸದಸ್ಯತ್ವ, ಬಿಜೆಪಿ ರಾಜ್ಯ ಉಪಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆʼʼ ಎಂದು ಅವರು ಬೆಳಗಾವಿಯಲ್ಲಿ ತಿಳಿಸಿದರು.

ಅವರು ಶುಕ್ರವಾರವೇ ಜೆಡಿಎಸ್ ಹಾಗೂ ಕಾಂಗ್ರೆಸ್‌ ಮುಖಂಡರನ್ನು ಭೇಟಿ ‌ಮಾಡಲಿದ್ದಾರೆ. ಅಥಣಿ ಮತಕ್ಷೇತ್ರಕ್ಕೆ ಹೆಚ್ಚಿ‌ನ‌ ಅನುದಾನ ನೀಡುವ ಪಕ್ಷವನ್ನು ಸೇರುತ್ತೇನೆ ಎಂದಿದ್ದಾರೆ. ಅದರ ಜತೆಗೇ ಪಕ್ಷದೊಳಗೆ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ರೆ ಯಾವ ಪಕ್ಷಕ್ಕೂ ಸೇರಲ್ಲ ಎಂದೂ ಹೇಳಿದ್ದಾರೆ.

ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಕ್ಷ್ಮಣ ಸವದಿ ಅವರ ಬೇಡಿಕೆಯನ್ನು ಬಿಜೆಪಿ ಮನ್ನಿಸಿಲ್ಲ. ಅವರ ವಿರೋಧದ ನಡುವೆಯೇ ರಮೇಶ್‌ ಜಾರಕಿಹೊಳಿ ಆಪ್ತರಾಗಿರುವ ಹಾಲಿ ಶಾಸಕ ಮಹೇಶ್‌ ಕುಮಟಳ್ಳಿ ಅವರಿಗೇ ಮತ್ತೆ ಟಿಕೆಟ್‌ ನೀಡಿದೆ. ಇದು ಸವದಿಯನ್ನು ಕೆರಳಿಸಿದೆ.

ಗುರುವಾರ ಅಥಣಿಯಲ್ಲಿ ಅಭಿಮಾನಿಗಳ ಬೃಹತ್‌ ಸಮಾವೇಶವನ್ನು ಆಯೋಜಿಸಿದ ಅವರು ರಮೇಶ್‌ ಜಾರಕಿಹೊಳಿ ಮಾತ್ರವಲ್ಲ ಬಿಜೆಪಿಯ ರಾಜ್ಯ ನಾಯಕತ್ವವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಭಾವುಕವಾಗಿಯೇ ಮಾತನಾಡಿದ ಅವರು, ʻಚುನಾವಣೆ ಆಗೋವರೆಗೂ ಹಾರ ತುರಾಯಿ ತರಬೇಡಿʼ ಎಂಬ ಮನವಿಯನ್ನೂ ಮಾಡಿದರು.

ʻʻಚುನಾವಣೆ ಗೆದ್ದರೆ ಮಾತ್ರ ನಾನು ಹಾರ ಹಾಕಿಸಿಕೊಳ್ಳುತ್ತೇನೆ. ಇಲ್ಲವಾದರೆ ನನ್ನ ಹೆಣದ‌ ಮೇಲೆ ಹಾರ ಹಾಕಿ. ಒಂದು ವೇಳೆ ನೀವು ನನ್ನನ್ನು ಗೆಲ್ಲಿಸದಿದ್ದರೆ ನನ್ನ ಹೆಣದ‌ ಮೇಲೆ ತಂದು ಹಾಕಿʼʼ ಎಂದು ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಿದರು. ಗೆಲ್ಲುವವರೆಗೆ ಹಾರ ಹಾಕಿಸಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದರು.

ಕಾಂಗ್ರೆಸ್‌ಗೆ ಕರೆತರಲು ಯತ್ನ ಎಂದ ರಾಯರೆಡ್ಡಿ

ʻʻಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಆ ಪ್ರಯತ್ನದಲ್ಲಿ ನಾನೂ ಪ್ರಮುಖ ಪಾತ್ರ ವಹಿಸಿರುವೆʼʼ ಎಂದು ಮಾಜಿ ಸಚಿವ ಹಾಗೂ ಕುಕನೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮಾತನಾಡಿದ ಅವರು, ʻʻಲಕ್ಷ್ಮಣ ಸವದಿ ಒಬ್ಬ ಗೌರವಾನ್ವಿತ, ಸಜ್ಜನ ಹಾಗೂ ಸ್ವಾಭಿಮಾನಿ ವ್ಯಕ್ತಿ. ಬಿಜೆಪಿಯವರು ಅಥಣಿ ಕ್ಷೇತ್ರದಲ್ಲಿ ಸವದಿ ಅವರಿಗೆ ಟಿಕೇಟ್ ಕೊಡಬೇಕಿತ್ತು. ಬಿಜೆಪಿ ತಮ್ಮ ಸ್ವಾರ್ಥ ವಿಚಾರಗಳನ್ನಿಟ್ಟುಕೊಂಡು ಜನಪ್ರಿಯ ನಾಯಕರಾದ ಲಕ್ಷ್ಮಣ ಸವದಿಗೆ ಟಿಕೇಟ್ ಕೊಡದೆ ಅನ್ಯಾಯ ಮಾಡಿದೆ. ಹೀಗಾಗಿ ಸವದಿ ಬಿಜೆಪಿಗೆ ಹಾಗೂ ನಾಳೆ ಪರಿಷತ್ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ತೀರ್ಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿದೆ. ಈ ಪ್ರಯತ್ನದಲ್ಲಿ ನಾನೂ ಪ್ರಮುಖ ಪಾತ್ರ ವಹಿಸಿರುವೆʼʼ ಎಂದರು.

Exit mobile version