ದಾವಣಗೆರೆ: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ. ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಹಿನ್ನೆಲೆಯಲ್ಲಿ ಆರು ವರ್ಷಗಳ ಅವಧಿಯಲ್ಲಿ ಉಚ್ಚಾಟನೆ ಶಿಕ್ಷೆ ವಿಧಿಸಲಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾಗಿದ್ದ ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರು 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಕೆಎಸ್‌ಡಿಎಲ್‌ನ ಕಚ್ಚಾವಸ್ತುಗಳ ಖರೀದಿಯ ಟೆಂಡರ್ ವಿಚಾರದಲ್ಲಿ ಈ ಲಂಚ ನೀಡಲಾಗಿದೆ ಎಂದು ಹೇಳಲಾಗಿತ್ತು. ಲೋಕಾಯುಕ್ತ ಈ ಪ್ರಕರಣವನ್ನು ಬಯಲಿಗೆಳೆದು ಪ್ರಶಾಂತ್ ಮಾಡಾಳ್, ವಿರೂಪಾಕ್ಷಪ್ಪ ಮಾಡಾಳ್ ಸೇರಿದಂತೆ ಹಲವರ ಮನೆಗಳಿಗೆ ದಾಳಿ ಮಾಡಿ ಸುಮಾರು 8 ಕೋಟಿ ರೂ. ವಶಪಡಿಸಿಕೊಂಡಿತ್ತು. ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಅವರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಇಷ್ಟೆಲ್ಲ ಆವಾಂತರಗಳು ನಡೆದ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಮಾಡಾಳ್ ಅವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವುದು ಖಚಿತವಾಗಿತ್ತು. ಆದರೆ, ಅವರ ಪುತ್ರ ಮಲ್ಲಿಕಾರ್ಜುನ ಮಾಡಾಳ್ ಅವರು ತಮಗೆ ಟಿಕೆಟ್ ಬೇಕೆಂದು ಭಾರಿ ಪ್ರಯತ್ನ ನಡೆಸಿದ್ದರು. ದೊಡ್ಡ ಮಟ್ಟದಲ್ಲಿ ವಾಹನ ಜಾಥಾ ನಡೆಸಿದ್ದ ಅವರು ವರಿಷ್ಠರ ಗಮನವನ್ನು ಸೆಳೆದಿದ್ದರು.
ಆದರೆ, ವರಿಷ್ಠರು ಅವರ ಬೇಡಿಕೆಗೆ ಮಣೆ ಹಾಕದೆ ಟಿಕೆಟ್ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಮಲ್ಲಿಕಾರ್ಜುನ ಅವರು ಸ್ವಾಭಿಮಾನ ಸಮಾವೇಶ ನಡೆಸಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಇದನ್ನು ಸಹಿಸದ ಬಿಜೆಪಿ ಶಿಸ್ತು ಸಮಿತಿ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಹೊರಹಾಕಿದೆ.
ಪಕ್ಷೇತರವಾಗಿ ನಾಮಪತ್ರ ಸಲ್ಲಿಕೆ ಮಾಡಿ ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುವ ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿರೂಪಾಕ್ಷಪ್ಪ ಮಾಡಾಳ್ ಅವರು ಬಿಜೆಪಿಯಲ್ಲಿ ದಾವಣಗೆರೆ ಭಾಗದಲ್ಲಿ ವರ್ಚಸ್ವಿ ನಾಯಕರಾಗಿದ್ದರು. ಈ ಬಾರಿ ಅವರು ತಮ್ಮ ಸ್ಥಾನವನ್ನು ಮಲ್ಲಿಕಾರ್ಜುನ ಮಾಡಾಳ್ ಅವರಿಗೆ ಬಿಟ್ಟುಕೊಡುತ್ತಾರೆ ಎಂಬ ಸುದ್ದಿ ಇತ್ತು. ಮಲ್ಲಿಕಾರ್ಜುನ್ ಕೂಡಾ ಅದಕ್ಕೆ ಸಿದ್ಧರಾಗುತ್ತಿದ್ದರು. ಅಷ್ಟು ಹೊತ್ತಿಗೆ ಲಂಚ ಪ್ರಕರಣ ಹೊರಬಿತ್ತು. ಬಿಜೆಪಿ ಇಲ್ಲಿ ಎಚ್.ಎಸ್. ಶಿವಕುಮಾರ್ ಅವರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ : Karnataka Elections : 3 ದಿನ ಹಿಂದಷ್ಟೇ ಬಿಜೆಪಿ ಬಿಟ್ಟು ಬಂದ ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕ, ರಮ್ಯಾಗೂ ಸ್ಥಾನ