Site icon Vistara News

Karnataka Elections : ಒದ್ದೆಯಾದ ಮೋದಿ ಕಟೌಟನ್ನು ತನ್ನ ಶಾಲಿನಿಂದ ಒರೆಸಿದ ಸಾಮಾನ್ಯ ಕಾರ್ಯಕರ್ತ; ದೃಶ್ಯ ನೋಡಿ ಅಮಿತ್‌ ಶಾ ಕೂಡಾ ಫಿದಾ!

Modi cutout wiping

#image_title

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿಸಿರುವ ಕ್ರೇಜ್‌ ಸಣ್ಣದಲ್ಲ. ದೇಶದ ಉದ್ದಗಲಕ್ಕೂ ಅಪಾರ ಅಭಿಮಾನ, ಗೌರವ ಮತ್ತು ಅದೆಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಸಂಪಾದಿಸಿದ್ದಾರೆ ಎನ್ನುವುದಕ್ಕೆ ಶುಕ್ರವಾರ ದೇವನಹಳ್ಳಿಯಲ್ಲಿ ಕಂಡ ದೃಶ್ಯವೇ ಸಾಕ್ಷಿಯಾಗಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ (Karnataka Elections) ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರು ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ದಾರಿಯಲ್ಲಿ ವಿಜಯಪುರದಲ್ಲಿ ಒಂದುವರೆ ಕಿ.ಮೀ. ರೋಡ್‌ ಶೋ ಮಾಡಬೇಕಾಗಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಅದಕ್ಕೆ ಕೆಲವು ಕಡೆ ಕೇಸರಿ ಬಟ್ಟೆ ಕಟ್ಟಲಾಗಿತ್ತು. ಅಲ್ಲಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಕಟೌಟ್‌ಗಳನ್ನು ಇಡಲಾಗಿತ್ತು.

ಅದರೆ, ಸಂಜೆಯ ಹೊತ್ತಿಗೆ ಮಳೆ ಬಂದ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರ ರೋಡ್‌ ಶೋವನ್ನು ರದ್ದು ಮಾಡಲಾಗಿತ್ತು. ಅವರು ತಮಗಾಗಿ ಮಾಡಿದ್ದ ರೋಡ್‌ ಶೋ ವ್ಯವಸ್ಥೆಯನ್ನು ನೋಡುತ್ತಲೇ ಬೆಂಗಳೂರು ನಗರ ಪ್ರವೇಶ ಮಾಡಿದರು.

ಈ ನಡುವೆ, ಮಳೆ ಬಂದು ನಿಂತ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಪ್ರಧಾನಿ ಮೋದಿ ಅವರ ಕಟೌಟ್‌ಗಳನ್ನು ತಮ್ಮದೇ ಬಿಳಿ ಶಾಲಿನಿಂದ ಒರೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಬಿಳಿ ಷರಟು, ಬಿಳಿ ಪಂಚೆ ಮತ್ತು ಬಿಳಿ ಶಾಲು ಹೊತ್ತಿದ್ದ ಸುಮಾರು 60ರ ಆಸುಪಾಸಿನ ವ್ಯಕ್ತಿ ಮೋದಿ ಅವರ ಕಟೌಟ್‌ಗಳನ್ನು ಒಂದೊಂದಾಗಿ ಒರಸುತ್ತಾ ಹೋಗುತ್ತಿದ್ದರು.

ಅವರು ಒಂದು ಕಟೌಟನ್ನು ಒರೆಸಿದಾಗ ಶಾಲಿನಲ್ಲಿ ಸೇರಿಕೊಂಡ ನೀರನ್ನು ಹಿಂಡಿ ಮತ್ತೊಂದು ಕಟೌಟನ್ನು ಒರೆಸಲು ಹೋಗುತ್ತಿದ್ದಾಗ ವಿಡಿಯೊಗ್ರಾಫರ್‌ ಒಬ್ಬರು ಅವರನ್ನು ತಡೆದು, ʻಈ ರೀತಿ ಒರೆಸಲು ನಿಮಗೆ ಹಣ ಕೊಟ್ಟಿದ್ದಾರಾ?ʼ ಎಂದು ಕೇಳಿದ್ದಾರೆ. ಆಗ ಆ ವ್ಯಕ್ತಿ ಸಿಟ್ಟು ಮಾಡಿಕೊಂಡು ʻಯಾವ ನನ್ಮಗನಿಂದಲೂ ಒಂದು ರೂಪಾಯಿ ತಗೊಳ್ಳಲ್ಲ ನಾನುʼ ಎಂದಿದ್ದಾರೆ.

ʻಪ್ರೀತಿ, ವಿಶ್ವಾಸ, ನಮ್ಮ ಮೋದಿ ಜನಕ್ಕೆ ಏನೂ ಕೆಲಸ ಮಾಡಿಲ್ಲ ಅಂತೀಯಾ..ʼ ಎಂದು ಕೇಳುತ್ತಾರೆ. ಜತೆಗೆ ತನ್ನ ಶಾಲನ್ನು ಸೆರಗಿನನಂತೆ ಮಾಡಿಕೊಂಡು ʻದೇವ್ರು ಮೋದಿ ದೇವ್ರು.. ನನಗೆ ವಯಸ್ಸಾಗಿ ಹೋಗಿಬಿಟ್ಟಿದೆʼ ಅನ್ನುತ್ತಾರೆ. ಮುಂದೆ ಮತ್ತೊಂದು ಕಟೌಟನ್ನು ಕ್ಲೀನ್‌ ಮಾಡಲು ಹೋಗಿದ್ದಾರೆ.

ಈ ವಿಡಿಯೊವನ್ನು ಕರ್ನಾಟಕ ಬಿಜೆಪಿ ತನ್ನ ಟ್ವಿಟರ್‌ ಖಾತೆಯನ್ನು ಹಂಚಿಕೊಂಡಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ದೇಶದ ಜನತೆ ತಮ್ಮ ಮನೆಯವರಲ್ಲಿ ಒಬ್ಬನೆಂದು ಭಾವಿಸಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಈ ಪರಿಯ ಪ್ರೀತಿ, ಗೌರವಕ್ಕೆ ಪಾತ್ರರಾದ ವ್ಯಕ್ತಿತ್ವ ಮತ್ತೊಂದಿಲ್ಲ. ಇಂದು ದೇವನಹಳ್ಳಿಯಲ್ಲಿ ಜರುಗಲಿದ್ದ ಪಕ್ಷದ ರೋಡ್ ಶೋಗೂ ಮುನ್ನ, ಮಳೆ ಬಂದಾಗ ಕಂಡ ಅಪೂರ್ವ ದೃಶ್ಯ. ಎಂದು ಬರೆದಿದೆ.

ಸಂತಸ ಹಂಚಿಕೊಂಡ ಅಮಿತ್‌ ಶಾ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಈ ಟ್ವೀಟನ್ನು ರಿಟ್ವೀಟ್‌ ಮಾಡಿ, ʻʻಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಕದಲಿಸಲಾಗದ ನಂಬಿಕ ಮತ್ತು ಅವರ ಕಡೆಗಿನ ನಿಸ್ವಾರ್ಥ ಮಮಕಾರ.. ಇದು ಬಿಜೆಪಿ ಗಳಿಸಿಕೊಂಡಿರುವುದು. ಇದುವೇ ಅದರ ಶಕ್ತಿ. ದೇವನಹಳ್ಳಿಯ ಈ ಅದ್ಭುತ ವಿಡಿಯೊವನ್ನು ನೋಡಿʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ : Amit Shah: ಚುನಾವಣೆಯಲ್ಲಿ ಗೆಲ್ಲಲೇಬೇಕು; ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಫುಲ್‌ ಕ್ಲಾಸ್

Exit mobile version