ಬೆಂಗಳೂರು: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ! 2019ರಲ್ಲಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವಲ್ಲಿ ತೆರೆಮರೆಯಲ್ಲಿಯೇ ಮೆಗಾ ಕಾರ್ಯಾಚರಣೆ ನಡೆಸಿದ ವ್ಯಕ್ತಿಯೊಬ್ಬರು ಈಗ ಜೆಡಿಎಸ್ ಪಾಳಯವನ್ನು ಸೇರಿದ್ದಾರೆ. ಸ್ವತಃ ಎಚ್.ಡಿ. ಕುಮಾರಸ್ವಾಮಿ ಅವರೇ ಅವರನ್ನು ಧ್ವಜ ಕೊಟ್ಟು ಸ್ವಾಗತಿಸಿದ್ದಾರೆ. ಅವರು ಕೂಡಾ ಖುಷಿಯಿಂದಲೇ ಹಸಿರು ಶಾಲು ಹೊದ್ದುಕೊಂಡಿದ್ದಾರೆ. ಇನ್ನು ಅವರು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ (Karnataka Elections) ಜೆಡಿಎಸ್ ಅಭ್ಯರ್ಥಿ.
ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿ ಎಲ್ಲೆಡೆ ಸುದ್ದಿಯಾಗಿದ್ದ, ಭಾರಿ ಚರ್ಚೆಯಲ್ಲಿದ್ದ ಹೆಸರು ಎನ್.ಆರ್. ಸಂತೋಷ್. ಸರ್ಕಾರ ಉರುಳಿಸುವಲ್ಲಿ ಭಾರಿ ಕಾರ್ಯಾಚರಣೆ ನಡೆಸಿದ್ದ ಅವರು ಶನಿವಾರ ಪದ್ಮನಾಭ ನಗರದ ದೇವೇಗೌಡರ ಮನೆಯಲ್ಲಿ ಜೆಡಿಎಸ್ ಸೇರಿದರು.
ಬಿಜೆಪಿ ಮೇಲೆ ಅಸಮಾಧಾನ
ಎನ್.ಆರ್. ಸಂತೋಷ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅತ್ಯಂತ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಅಂದು 17 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಜಿಗಿಯುವ ಬಹು ದೊಡ್ಡ ಕಾರ್ಯಾಚರಣೆಯ ವೇಳೆ ಶಾಸಕರನ್ನು ಬಂದೋಬಸ್ತ್‌ನಲ್ಲಿ ಇಡುವುದು, ಅತ್ಯಂತ ಗೌಪ್ಯವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು, ಅವರಿಗೆ ಹೊರಗಿನ ಯಾವ ಸಂಪರ್ಕವೂ ಸಿಗದಂತೆ ಮಾಡುವುದು ಸೇರಿದಂತೆ ಎಲ್ಲ ತೆರೆಮರೆಯ ಕಾರ್ಯಾಚರಣೆಯ ಸೂತ್ರಧಾರನಾಗಿ ಸಂತೋಷ್ ಕೆಲಸ ಮಾಡಿದ್ದರು. ಕೆಲವೊಂದು ಶಾಸಕರನ್ನು ವಿಮಾನ ಹತ್ತಿಸುವುದು, ಇಳಿಸುವುದು ಮೊದಲಾದ ಕಾರ್ಯಾಚರಣೆಗಳಲ್ಲಿ ಸಂತೋಷ್ ಭಾಗವಹಿಸಿದ್ದರ ವಿಡಿಯೊಗಳು ಹರಿದಾಡಿದ್ದವು.
ಸಮ್ಮಿಶ್ರ ಸರ್ಕಾರ ಉರುಳಿ ಯಡಿಯೂರಪ್ಪ ಅವರು ಅಧಿಕಾರಕ್ಕೇರಿದ ಬಳಿಕ ಸಂತೋಷ್ ಅವರು ಬಿಎಸ್‌ವೈ ಅವರಿಗೆ ಅಧಿಕೃತ ಆಪ್ತ ಸಹಾಯಕರಾಗಿದ್ದರು. ಆದರೆ, ಬಳಿಕ ಅವರನ್ನು ಅಧಿಕಾರ ಕೇಂದ್ರದಿಂದ ದೂರ ಇಡಲಾಗಿತ್ತು. ಆದರೆ, ಬಿಎಸ್‌ವೈ ಅವರ ಅಂತರಂಗದ ಬಳಗದಲ್ಲೇ ಇದ್ದರು.
ಈ ನಡುವೆ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಎನ್.ಆರ್. ಸಂತೋಷ್ ಅವರು ಹಾಸನ ಜಿಲ್ಲೆ ಅರಸೀಕರೆ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಆಸಕ್ತಿ ವಹಿಸಿದ್ದರು. ಅಲ್ಲಿ ಸಾಕಷ್ಟು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಾ ತಾನೇ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರು. ಅವರಿಗೇ ಟಿಕೆಟ್ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು.
ಆದರೆ, ಬಿಜೆಪಿ ಪಟ್ಟಿ ಬಿಡುಗಡೆಯಾದಾಗ ಅದರಲ್ಲಿ ಎನ್.ಆರ್. ಸಂತೋಷ್ ಹೆಸರು ಇರಲಿಲ್ಲ. ಇದರಿಂದ ಆಕ್ರೋಶಿತರಾದ ಸಂತೋಷ್ ಅವರು ಜೆಡಿಎಸ್ ನಾಯಕರ ಬೆನ್ನು ಬಿದ್ದಿದ್ದು, ಕೊನೆಗೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನ ಸಮಯದಲ್ಲಿ ಬಹಿರಂಗವಾಗಿ ಸಂತೋಷ್ ಹೆಸರು ಪ್ರಸ್ತಾಪವಾಗಿತ್ತು. ಶಾಸಕರು ಸದನದಲ್ಲೂ ಹೆಸರು ಹೇಳಿದ್ದರು. ಆದರೆ, ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧ ಜಿದ್ದಿಗೆ ಬಿದ್ದ ಎನ್.ಆರ್ ಸಂತೋಷ್ ಶುಕ್ರವಾರ ಸಂಜೆಯೇ ಜೆಡಿಎಸ್ ನಾಯಕರನ್ನು ಭೇಟಿಯಾಗಿದ್ದರು. ಆದರೆ, ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನ ಆಗಿರಲಿಲ್ಲ. ಶನಿವಾರ ಅವರನ್ನು ಜೆಡಿಎಸ್ ತನ್ನ ತೆಕ್ಕೆಗೆ ಎಳೆದುಕೊಂಡಿದೆ ಮತ್ತು ಅರಸೀಕೆರೆ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದೆ.
ಅಶೋಕ್ ಬಾಣಾವರ ಮನವೊಲಿಕೆ
ಈ ನಡುವೆ ಈಗಾಗಲೇ ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಎಂದು ಪ್ರಚಾರದಲ್ಲಿದ್ದ ಅಶೋಕ್ ಬಾಣಾವರ ಅವರನ್ನು ಸಮಾಧಾಪಡಿಸುವ ಕೆಲಸವನ್ನು ಎಚ್.ಡಿ. ರೇವಣ್ಣ ಅವರು ವಹಿಸಿಕೊಂಡಿದ್ದಾರೆ. ಈ ಮೊದಲು ಅರಸಿಕೆರೆಯಲ್ಲಿ ಬಾಣವಾರ ಅಶೋಕ್‌ಗೆ ಟಿಕೆಟ್ ಎಂದು ಪಕ್ಷದೊಳಗೆ ಚರ್ಚೆಯಾಗಿತ್ತು. ಅರಸಿಕೆರೆಯಲ್ಲಿ ನಡೆದ ಸಮಾವೇಶದಲ್ಲಿ ಕೂಡ ಅಶೋಕ್ ಬಾಣವಾರ ಎಂದು ಪರೋಕ್ಷವಾಗಿ ತಿಳಿಸಿದ್ದರು ಕುಮಾರಸ್ವಾಮಿ.
ಚುನಾವಣೆ ಗೆಲ್ಲುವುದು ಮುಖ್ಯ. ಹಾಗಾಗಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಅವಶ್ಯಕತೆ ಇದೆ ಎಂದು ಬಾಣಾವರ ಅವರನ್ನು ಸಮಾಧಾನ ಮಾಡಲಾಗುತ್ತಿದೆ. ಅರಸೀಕೆರೆಯಲ್ಲಿ ಎನ್ ಆರ್ ಸಂತೋಷ್ ಕಣಕ್ಕಿಳಿಸುವ ಮೂಲಕ ಶಿವಲಿಂಗೇಗೌಡ್ರ ಮಣಿಸಲು ಜೆಡಿಎಸ್ ಪ್ಲಾನ್ ಹಾಕಿದೆ.
ಇದನ್ನೂ ಓದಿ : Karnataka Election 2023: ಹಾಲಾಡಿ ಶ್ರೀನಿವಾಸ ಶೆಟ್ಟಿ ಆಶೀರ್ವಾದ ಪಡೆದ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ