ಭಟ್ಕಳ: ಹಾಲಿ ಸಚಿವರಾಗಿರುವ ಕೆ.ಸಿ. ನಾರಾಯಣ ಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳ ನಡುವೆಯೇ ಮಂಡ್ಯ ಭಾಗದಲ್ಲಿ ಇನ್ನೂ ಹತ್ತಾರು ಮುಖಂಡರು ಬಿಜೆಪಿ ಸೇರಲಿದ್ದಾರೆ (Karnataka Elections) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಟ್ಕಳದಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಯಾತ್ರೆಯ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಮಂಡ್ಯ ಭಾಗದಲ್ಲಿ ರಾಜಕೀಯ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ‘ಕಾದು ನೋಡಿ. ಇನ್ನೂ ಹತ್ತಾರು ನಾಯಕರು ಬಿಜೆಪಿಗೆ ಬರಲಿದ್ದಾರೆ’ ಎಂದು ತಿಳಿಸಿದರು.
ʻʻಕಾಂಗ್ರೆಸ್ ಪಕ್ಷ ಜನರ ಮನಸ್ಸಿನಿಂದ ದೂರವಾಗಿದೆ. ಕರಾವಳಿಯಲ್ಲಿ ಕಳೆದ ಬಾರಿ ಅದು ಒಂದೇ ಒಂದು ಸ್ಥಾನ ಪಡೆದಿತ್ತು. ಈ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಮುಕ್ತವಾಗುವುದು ಖಚಿತ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಪಾರ್ಟಿ ಗಟ್ಟಿ ಇದೆ ಎಂದರೆ ಆಂತರಿಕವಾಗಿ ಸಣ್ಣಪುಟ್ಟ ವ್ಯತ್ಯಾಸ ಇರುವುದು ಸಹಜ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅದನ್ನು ಸರಿ ಮಾಡುವ ಶಕ್ತಿ ಬಿಜೆಪಿಗೆ ಇದೆʼʼ ಎಂದರು.
ʻʻಉರಿಗೌಡ- ನಂಜೇಗೌಡರ ಕುರಿತ ಚರ್ಚೆ ನಡೆಯಲಿ. ಸತ್ಯಾಸತ್ಯತೆಗಳು ಹೊರಬರಲಿ. ವಿರೋಧ ಪಕ್ಷಗಳು ಆರೋಪ ಮಾಡಲೇ ಇರುವುದಲ್ಲವೇʼʼ ಎಂದು ಕೇಳಿದರು ನಳಿನ್ ಕುಮಾರ್ ಕಟೀಲ್. ಇತಿಹಾಸದಲ್ಲಿ ಹತ್ತಾರು ತಿರುಚುವಿಕೆ ಆಗಿದೆ ಎಂದು ನುಡಿದರು.
ಬಳಿಕ ಅದ್ದೂರಿ ರೋಡ್ ಶೋದಲ್ಲಿ ಸಾವಿರಾರು ಜನರು, ಕಾರ್ಯಕರ್ತರು ಮತ್ತು ಮುಖಂಡರು ಪಾಲ್ಗೊಂಡಿದ್ದರು.
ಮಂಡ್ಯದಲ್ಲಿ ಮೊದಲ ಬಾರಿಗೆ ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇಲ್ಲಿ ಗೆದ್ದ ಕೆ.ಸಿ. ನಾರಾಯಣ ಗೌಡ ಅವರು ಸಂಪುಟದಲ್ಲಿ ಸಚಿವರಾಗಿದ್ದರು. ಅವರು ಈಗ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ ದೊಡ್ಡ ರ‍್ಯಾಲಿ, ಮಂಡ್ಯದ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿ ಸೇರಿರುವುದರಿಂದ ಈ ಭಾಗದಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಇದೇ ನೆಲೆಯಲ್ಲಿ ಹಲವು ನಾಯಕರು ಬಿಜೆಪಿ ಕಡೆಗೆ ಬರುತ್ತಾರೆ ಎಂಬ ನಿರೀಕ್ಷೆ ಕಮಲ ಪಕ್ಷದಲ್ಲಿದೆ.
ಇದನ್ನೂ ಓದಿ : Tippu sultan: ಉರಿಗೌಡ, ನಂಜೇಗೌಡ ಕುರಿತ ಚರ್ಚೆ ತಕ್ಷಣ ನಿಲ್ಲಿಸಿ: ನಿರ್ಮಲಾನಂದನಾಥ ಸ್ವಾಮೀಜಿ ಫರ್ಮಾನು