ಬೆಂಗಳೂರು: ರಾಜ್ಯದಲ್ಲಿ ನಾಮಪತ್ರ ಪ್ರಕ್ರಿಯೆ ಏಪ್ರಿಲ್ 24ಕ್ಕೆ ಮುಕ್ತಾಯವಾಗಿ ಕಣ ಅಂತಿಮವಾಗಲಿದೆ. ಅದಾದ ಬಳಿಕವೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ಧುಮುಕಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಅದರ ಜತೆಗೆ ಬಿಜೆಪಿಯ ಪ್ರಚಾರ ಕಾರ್ಯ ಈ ಬಾರಿ ಮಿಲಿಟರಿ ಹೋಟೆಲ್‌ನಿಂದ ಆರಂಭವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ನಿವಾಸದ ಮುಂದೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಬಾರಿ ಮಿಲಿಟರಿ ಹೋಟೆಲ್‌ನಿಂದಲೇ ಪ್ರಚಾರ ಆರಂಭಿಸಲಾಗುವುದು ಎಂದರು.
ʻʻಅಶೋಕ್ ಅವರು ಕನಕಪುರದಿಂದ ಕಣಕ್ಕೆ ಇಳಿಯಲಿದ್ದಾರೆ. ನಮ್ಮೂರಲ್ಲಿ ಒಳ್ಳೊಳ್ಳೆಯ ಮಿಲಿಟರಿ ಹೋಟೆಲ್‌ಗಳಿವೆ. ಅಲ್ಲಿ ಊಟ ಮಾಡ್ಕೊಂಡು ಹೋಗ್ಲಿʼʼ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಶೋಕ್ ಸ್ಪರ್ಧೆಯನ್ನು ಗೇಲಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ಬೊಮ್ಮಾಯಿಯವರು, ʻʻನಮ್ಮ ಪ್ರಚಾರ ಮಿಲಿಟರಿ ಹೊಟೇಲಿಂದಲೇ ಆರಂಭವಾಗಲಿದೆ. ಅಲ್ಲಿ ಸ್ಥಳೀಯ ಸಾಮಾನ್ಯ ಜನರಿರುತ್ತಾರೆ. ಅಂಥ ಸಾಮಾನ್ಯ ಜನರನ್ನು ಡಿಕೆಶಿ ಭೇಟಿ ಮಾಡುವುದಿಲ್ಲ. ಸಾಮಾನ್ಯ ಜನರನ್ನು ಭೇಟಿ ಮಾಡಲು ಅಶೋಕ್ ತೆರಲಿದ್ದಾರೆ. ಇದರಲ್ಲಿ ತಪ್ಪೇನಿದೆ? ಮಿಲಿಟರಿ ಹೊಟೇಲ್‌ಗೆ ಯಾಕೆ ಹೋಗಬಾರದುʼʼ ಎಂದು ಪ್ರಶ್ನಿಸಿದರು.
ʻʻವಲಸೆ ಹೋದವರನ್ನು ವಾಪಸ್ಸು ಕರೆತರುವ ಕೆಲಸ ಮಾದುತ್ತಿದ್ದು, ಜಿಲ್ಲಾ, ಹೋಬಳಿ ಮಟ್ಟದಲ್ಲಿ ಆ ಕೆಲಸ ಮಾಡಲಾಗುತ್ತಿದೆʼʼ ಎಂದರು.
ಲಿಂಗಾಯತ ಸಿಎಂ ಬಗ್ಗೆ ಘೋಷಣೆ ಆಗಿಲ್ಲ
ಲಿಂಗಾಯತ ಡ್ಯಾಮೇಜ್ ಕಂಟ್ರೋಲ್‌ಗಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯ ಬಗ್ಗೆ ಕೇಳಿದಾಗ, ʻʻಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್ ನವರ ಅಪಪ್ರಚಾರಕ್ಕೆ ಹೇಗೆ ಪ್ರತ್ತುತ್ತರ ನೀಡಬೇಕು ಎಂದು ಮಾತನಾಡಿಕೊಂಡಿದ್ದೇವೆ. ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲʼʼ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನದ್ದು ಲಿಂಗಾಯತ ವಿರೋಧಿ ನಡೆ
ʻʻಕಾಂಗ್ರೆಸ್ 1967ರಿಂದ ಈ ವರೆಗೆ 50 ವರ್ಷದಲ್ಲಿ ಒಬ್ಬ ಲಿಂಗಾಯತರನ್ನು ಕಾಂಗ್ರೆಸ್ ಸಿಎಂ ಮಾಡಿಲ್ಲ. ಮಧ್ಯೆ ವಿರೇಂದ್ರ ಪಾಟೀಲರು ಒಂಭತ್ತು ತಿಂಗಳು ಮುಖ್ಯಮಂತ್ರಿಗಳಾಗಿದ್ದರೂ ವಿರೇಂದ್ರ ಪಾಟೀಲರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಲಾಗಿದೆ. ರಾಜಶೇಖರ ಮೂರ್ತಿಯವರನ್ನು ನಡೆಸಿಕೊಂಡ ರೀತಿಯೂ ಸರಿಯಲ್ಲ. ಲಿಂಗಾಯತ ಧರ್ಮವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಮತಬ್ಯಾಂಕ್‌ಗಾಗಿ ಧರ್ಮ ಒಡೆಯಲು ಹೋಗಿದ್ದನ್ನು ಜನ ಮರೆಯೋಲ್ಲʼʼ ಎಂದು ಹೇಳಿದರು. ಕಾಂಗ್ರೆಸ್‌ನವರು ದಲಿತರು, ಹಿಂದುಳಿದವರು, ಲಿಂಗಾಯತರಿಗೆ ಮೋಸ ಮಾಡಿದ್ದಾರೆ ಎಂದು ಸಿಎಂ ಆರೋಪಿಸಿದರು.
ಸಿದ್ದರಾಮಯ್ಯಗೆ ಭಯ ಹುಟ್ಟಿಕೊಂಡಿದೆ
ʻʻಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆʼʼ ಎಂದು ಬೊಮ್ಮಾಯಿ ಹೇಳಿದರು.
ವರುಣಾದಲ್ಲಿ ಬಿಜೆಪಿ ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿವೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿ, ಸಿದ್ದರಾಮಯ್ಯ ಅವರಿಗೆ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದಾರೆ ಎಂಬ ಭಯವಿದ್ದು, ಅವರಿಬ್ಬರೂ ಸೇರಿಕೊಂಡಿದಾರೆ ಎಂಬ ಭಯ ಬಂದಿದೆ ಎಂದರು.
ಸ್ವಂತ ಬಲದಿಂದ ಗೆಲ್ಲುತ್ತೇನೆ
ʻʻಯಾರು ಯಾರೊಂದಿಗೆ ಸೇರಿಕೊಂಡರೂ ಸಿದ್ದರಾಮಯ್ಯ ಅವರಿಗೆ ಸ್ವಂತ ಬಲ ಇದ್ದರೆ ಗೆಲ್ಲುತ್ತಾರೆ. ಇಲ್ಲದಿದ್ದರೆ ಗೆಲ್ಲುವುದಿಲ್ಲ. ನನ್ನ ಕ್ಷೇತ್ರ ಶಿಗ್ಗಾಂವಿಯಲ್ಲೂ ಕಾಂಗ್ರೆಸ್- ಜೆಡಿಎಸ್ ಸೇರಿಕೊಂಡಿದ್ದಾರೆ. ಇದರಿಂದ ನನಗೇನೂ ಭಯವಿಲ್ಲʼʼ ಎಂದರು.
ʻʻಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದ್ದು ನನ್ನ ಮೇಲೆ ವ್ಯತ್ಯಾಸ ಆಗುವುದಿಲ್ಲʼʼ ಎಂದ ಸಿಎಂ, ʻʻಎಲ್ಲರೂ ಕಾಂಗ್ರೆಸ್ ಗೆ ಪ್ರಯತ್ನ ಮಾಡುತ್ತಿದ್ದರು. ಕಾಂಗ್ರೆಸ್ ನ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದನ್ನು ನಾನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎನ್ನಲಾ? ನಾನು ಈ ಥರ ಆರೋಪ ಎಲ್ಲ ಮಾಡುವುದಿಲ್ಲʼʼ ಎಂದರು. ಯಾರು ಯಾರ ಜತೆಗಾದರೂ ಸೇರಿಕೊಳ್ಳಲಿ. ನಾನು ನನ್ನ ಸ್ವಂತ ಬಲದಿಂದ ಗೆಲ್ಲುತ್ತೇನೆ ಎಂದರು.
ಇದನ್ನೂ ಓದಿ : ಬಿಎಸ್‌ವೈ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯ; ಲಿಂಗಾಯತ ಸಿಎಂ ಅಜೆಂಡಾ, ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ