ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಈ ಬಾರಿ ಟಿಕೆಟ್ ವಂಚಿತರಾದ ಸಿಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ ಮತ್ತು ಜಾತ್ಯತೀತ ಜನತಾ ದಳ ಸೇರಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಬುಧವಾರ ರಾತ್ರಿ ಪ್ರಕಟವಾದ ಕಾಂಗ್ರೆಸ್‌ನ ಕೊನೆಯ ಪಟ್ಟಿಯಲ್ಲಿ ಮಂಗಳೂರು ಉತ್ತರದ ಟಿಕೆಟ್‌ನ್ನು ಇನಾಯತ್ ಅಲಿ ಅವರಿಗೆ ನೀಡಿದ್ದಾಗಿ ಪ್ರಕಟಿಸಲಾಗಿತ್ತು. ಇದನ್ನು ಕಂಡು ರಾತ್ರೋರಾತ್ರಿಯೇ ಕೆರಳಿ ನಿಂತ ಮೊಯ್ದಿನ್ ಬಾವಾ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಯು.ಟಿ. ಖಾದರ್ ವಿರುದ್ಧ ವಾಗ್ದಾಳಿ ನಡೆಸಿದರು.
ʻʻಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿದ್ದಾರೆ. ಆರು ತಿಂಗಳ ಹಿಂದೆ ಜಿಲ್ಲೆಗೆ ಬಂದ ಗುತ್ತಿಗೆದಾರನಿಗೆ ಟಿಕೆಟ್ ಮಾರಾಟ ಮಾಡಿದ್ದಾರೆʼʼ ಎಂದು ಆರೋಪಿಸಿದ್ದಾರೆ.
ʻʻಮಂಗಳೂರು ಉತ್ತರದಲ್ಲಿ ಹನ್ನೊಂದು ಜನ ಆಕಾಂಕ್ಷಿಗಳು ಇದ್ದರು. ರಾಹುಲ್ ಗಾಂಧಿಯವರು ಕಳುಹಿಸಿದ ಸರ್ವೇ ಟೀಂ ಆಧಾರದಲ್ಲಿ ಟಿಕೆಟ್ ಅಂತ ಹೇಳಿದ್ದರು. ಯಾವುದೇ ಪ್ರಭಾವ ಇಲ್ಲದೇ ಟಿಕೆಟ್ ಕೊಡೋದಾಗಿ ಹೇಳಿದ್ದರು. ಕೇಂದ್ರೀಯ ಚುನಾವಣಾ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ಸಮೀಕ್ಷೆ ರಿಪೋರ್ಟ್ ನನಗೆ ತೋರಿಸಿದ್ದರು. ಅವರಲ್ಲಿ ಶೇಕಡಾ 78 ಜನರು ನನಗೆ ಆಶೀರ್ವಾದ ಮಾಡಿದ್ದರು, 7% ಈಗಿನ ಅಭ್ಯರ್ಥಿ ಪರ ಇತ್ತು. ಹೀಗಾಗಿ ಮೋಹನ್ ಪ್ರಕಾಶ್ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಅಂದಿದ್ದರು. ಆದರೆ ರಾಹುಲ್ ಗಾಂಧಿ ಕೋಲಾರಕ್ಕೆ ಬಂದಾಗ ಮತ್ತೆ ಇನಾಯತ್ ಆಲಿ ಲಾಬಿ ಮಾಡಿದರು. ಆದರೂ ರಾಹುಲ್ ಗಾಂಧಿ ಗಮನ ಕೊಟ್ಟಿಲ್ಲ. ಇದಾದ ಬಳಿಕ ಡಿಕೆಶಿಯವರು ಖರ್ಗೆ ಅವರ ಜೊತೆ ಹೋಗಿ ನನ್ನ ಹೆಸರು ತಡೆದಿದ್ದಾರೆʼʼ ಎನ್ನುವುದು ಮೊಯ್ದಿನ್ ಬಾವಾ ಆರೋಪ.
ಡಿ.ಕೆ. ಶಿವಕುಮಾರ್ ನನ್ನನ್ನು ವೈರಿಯಂತೆ ಕಾಡಿದ್ದಾರೆ
ʻʻವಾಮಮಾರ್ಗ ಉಪಯೋಗಿಸಿ ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ. ಒಬ್ಬ ಗುತ್ತಿಗೆದಾರನಿಗೆ ಅಧ್ಯಕ್ಷರು ಅಭ್ಯರ್ಥಿತನ ನೀಡಿದ್ದಾರೆ. ಇದು ಟಿಕೆಟ್ ಮಾರಾಟ, ಕಾಂಗ್ರೆಸ್ ಪಕ್ಷಕ್ಕೆ ಇದು ಅಪಮಾನ. ಡಿಕೆಶಿ ನನ್ನನ್ನು ವೈರಿಯಾಗಿ ಕಾಡಿ ಇನಾಯತ್ ಆಲಿಗೆ ಟಿಕೆಟ್ ಕೊಟ್ಟಿದ್ದಾರೆʼʼ ಎಂದಿದ್ದಾರೆ.
ʻʻಇನಾಯತ್ ಆಲಿ ಬಿಜೆಪಿ ವಿರುದ್ಧ ಹೋರಾಟ ಮಾಡಿಲ್ಲ. ನನ್ನ ಅಭಿಮಾನಿಗಳಿಗೆ ಹಣದ ಆಮಿಷ ಒಡ್ಡಿದ್ದಾರೆ. ಹೊರಗಡೆಯಿಂದ ಜನ ತಂದು ದುಡ್ಡಿನ ಆಮಿಷ ಒಡ್ಡಿದರುʼʼ ಎಂದು ಆರೋಪಿಸಿದ ಮೊಯ್ದಿನ್ ಬಾವಾ, ಇನಾಯತ್ ಆಲಿ ಎರಡು ಕೋಟಿ ರೂ. ನ್ಯಾಶನಲ್ ಹೆರಾಲ್ಡ್ ಗೆ ಕೊಟ್ಟಿದ್ದಾರಂತೆ. ಇದನ್ನು ಡಿಕೆಶಿ ಸಿಇಸಿ ಸಭೆಯಲ್ಲಿ ರಾಹುಲ್ ಗಾಂಧಿ ಎದುರಲ್ಲೇ ಹೇಳಿದ್ದಾರೆ ಎಂದರು.
ʻʻಕರಾವಳಿ ಭಾಗದ ಕೆಲವರು ವ್ಯವಸ್ಥಿತವಾಗಿ ನನ್ನ ಟಿಕೆಟ್ ತಪ್ಪಿಸಿದ್ದಾರೆ. ಕರಾವಳಿಯಲ್ಲಿ ಏಕೈಕ ಶಾಸಕರಾಗಿ ಮೆರೆಯಬೇಕೆಂಬ ವ್ಯಕ್ತಿ ಟಿಕೆಟ್ ತಪ್ಪಿಸಿದ್ದಾರೆʼʼ ಎಂದು ಯು.ಟಿ. ಖಾದರ್ ಹೆಸರು ಹೇಳದೆ ಆರೋಪಿಸಿದರು.
ʻʻʻಶಿವಮೊಗ್ಗದಲ್ಲಿ ಕಾಂಗ್ರೆಸ್ಸನ್ನು ಮುಳುಗಿಸಿದ ಎಂಎಲ್ಸಿ ಟಿಕೆಟ್ ತಪ್ಪಿಸಿದ್ದಾರೆʼʼ ಎಂದು ಮಂಜುನಾಥ ಭಂಡಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ರಾಜೀನಾಮೆ, ಜೆಡಿಎಸ್‌ಗೆ ಸೇರ್ಪಡೆ
ʻʻಈ ಎಲ್ಲರ ಕುತಂತ್ರಗಳಿಂದ ಬೇಸತ್ತಿರುವ ನಾನು ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾರ್ಯಕರ್ತರ ಒತ್ತಾಯದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರುತ್ತಿದ್ದೇನೆ. ಮಾನ್ಯ ಕುಮಾರಣ್ಣ ಮತ್ತು ದೇವೇಗೌಡರ ಆಶೀರ್ವಾದ ನನಗೆ ಇದೆ. ಮಂಗಳೂರು ಉತ್ತರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆʼʼ ಎಂದು ಬಾವಾ ಅವರು ಪ್ರಕಟಿಸಿದರು.
ಮೊಯ್ದಿನ್ ಬಾವಾ ಅವರು ಜೆಡಿಎಸ್‌ನಿಂದ ಕಣಕ್ಕಿಳಿದರೆ ಒಂದಿಷ್ಟು ಕಾಂಗ್ರೆಸ್ ಮತಗಳನ್ನು ಸೆಳೆಯಬಹುದು ಎಂಬ ಅಭಿಪ್ರಾಯವಿದೆ.
ಇದನ್ನೂ ಓದಿ : Karnataka Election 2023 : ಕಾಂಗ್ರೆಸ್ ಪ್ರಚಾರಕರ ಪಟ್ಟಿಯಲ್ಲಿ ಇಮ್ರಾನ್ ಪ್ರತಾಪ್ ಗಡಿ; ಶೋಭಾ ಕರಂದ್ಲಾಜೆ ಆಕ್ರೋಶ