ಶಿರಸಿ: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಶಿರಸಿಯಲ್ಲಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ಆಗಮಿಸಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅವರು ಜೆಡಿಎಸ್ ಸೇರುವ ಸಾಧ್ಯತೆ ಇದ್ದು, ಪಕ್ಷ ಅವರಿಗೆ ಮೂಡಿಗೆರೆ ಟಿಕೆಟ್ ನೀಡುವ ಭರವಸೆ ನೀಡಿದೆ ಎನ್ನಲಾಗಿದೆ. ಎಂ.ಪಿ. ಕುಮಾರಸ್ವಾಮಿ ಅವರು ಈಗಾಗಲೆ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹುಚ್ಚು ನಾಯಿ ಓಡಿಸಿದ ರೀತಿ ಓಡಿಸಿದ್ರು
ರಾಜೀನಾಮೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಆದರೆ ಈ ಬಾರಿ ಬಿಜೆಪಿ ಪಕ್ಷದ ಕೆಲ ನಾಯಕರಿಂದಾಗಿ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಪಕ್ಷದ ನಾಯಕರ ನಡೆಗೆ ಬೇಸರವಾಗಿದ್ದು, ಪಕ್ಷ ತೊರೆಯ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ʻʻನನ್ನನ್ನು ಹುಚ್ಚು ನಾಯಿ ಓಡಿಸಿದ ರೀತಿ ಪಕ್ಷದಿಂದ ಓಡಿಸಿದ್ರು. ಇದಕ್ಕೆಲ್ಲಾ ಸಿ.ಟಿ ರವಿ ಹಾಗೂ ಪ್ರಾಣೇಶ್ ಕಾರಣ, ನನ್ನನ್ನು ಹೀನಾಯವಾಗಿ ನಡೆಸಿಕೊಂಡ್ಡಿದ್ದಾರೆ. ಅವರೇ ಜನ ಕಳ್ಸಿ, ಅವ್ರೇ ಜಗಳ ಮಾಡ್ಸಿ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರೋ ರೀತಿ ಮಾಡಿದರು. ಅವರಿಂದ ಬಿಜೆಪಿ ಪಕ್ಷ ಉಳಿಸಲ್ಲ. ಸಿ.ಟಿ ರವಿ ಬಿಜೆಪಿಗೆ ಮಾರಕವಾಗಿ ಪರಿಣಮಿಸುತ್ತಾರೆ. ಮುಂದಿನ ಬಾರಿ ಜನರೇ ಅವ್ರಿಗೆ ತಕ್ಕ ಪಾಠ ಕಲಿಸುತ್ತಾರೆʼʼ ಎಂದರು ಕುಮಾರಸ್ವಾಮಿ.
ʻʻನನಗೆ ಇನ್ನೂ ವಯಸ್ಸಾಗಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಬೇರೆ ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಇಂದು ಸಂಜೆ ವೇಳೆಗೆ ಮುಂದಿನ ನಡೆಯ ಕುರಿತು ತೀರ್ಮಾನಿಸುತ್ತೇನೆ. ಜೆಡಿಎಸ್ ಪಕ್ಷದವರಿಂದಲೂ ಕರೆಬಂದಿದ್ದು, ಸ್ವತಂತ್ರವಾಗಿ ಸ್ವರ್ಧಿಸುವುದೋ ಅಥವಾ ಬೇರೆ ಪಕ್ಷ ಸೇರುವುದೋ ನಿರ್ಧರಿಸುತ್ತೇನೆʼʼ ಎಂದು ತಿಳಿಸಿದರು.
ಸಂಜೆ ಬೆಂಗಳೂರಿನಲ್ಲಿ ಜೆಡಿಎಸ್ ಸೇರ್ಪಡೆ?
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂ.ಪಿ ಕುಮಾರಸ್ವಾಮಿ ಅವರು ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಜೆಡಿಎಸ್ ಸೇಪರ್ಡೆಯಾಗುವುದು ಖಚಿತವಾಗಿದೆ.
ಬೆಂಗಳೂರಿನ ಜೆ.ಪಿ ಭವನದಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದು, ಶಿರಸಿಯಲ್ಲಿ ಸ್ಪೀಕರ್ ಗೆ ರಾಜಿನಾಮೆ ನೀಡಿದ ಕುಮಾರಸ್ವಾಮಿ ಬೆಂಗಳೂರಿನತ್ತ ಹೊರಟಿದ್ದಾರೆ.
ಅವರು ಮೂಡಿಗೆರೆ ಜೆಡಿಎಸ್ ಅಭ್ಯರ್ಥಿ ಆಗುವುದು ಕೂಡಾ ಬಹುತೇಕ ಫಿಕ್ಸ್ ಆಗಿದೆ. ಹೀಗಾಗಿ ಈಗಾಗಲೇ ಘೋಷಿತರಾಗಿರುವ ಬಿ.ಬಿ ನಿಂಗಯ್ಯ ಅವರಿಗೆ ಟಿಕೆಟ್ ಕೈ ತಪ್ಪಬಹುದು. ಜೆಡಿಎಸ್ ಮೊದಲ ಪಟ್ಟಿಯಲ್ಲಿ ಮೂಡಿಗೆರೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಬಿ. ನಿಂಗಯ್ಯ ಹೆಸರು ಘೋಷಣೆ ಆಗಿತ್ತು.
ಇದನ್ನೂ ಓದಿ : Karnataka Elections : ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಫಿಕ್ಸ್ ; ಕೈ ನೀಡಿದ ಆಫರ್ ಏನು? ಸವದಿ ನಿರೀಕ್ಷೆಗಳೇನು?