Site icon Vistara News

Karnataka Elections : ಈಶ್ವರಪ್ಪ, ಶೆಟ್ಟರ್‌ ಫುಲ್‌ ಟೀಮ್‌ ತೆಗೀತೇವೆ; 20 ತಿಂಗಳ ಹಿಂದಿನ ನಳಿನ್‌ ಮಾತು ನಿಜವಾಯ್ತು! ಆಡಿಯೊ ಮತ್ತೆ ವೈರಲ್!

Nalin kumar Kateel

#image_title

ಮಂಗಳೂರು: 20 ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin kumar Kateel Audio) ಅವರು ಆಡಿದ ಮಾತು ನಿಜವಾಗಿದೆ. ಕೆ.ಎಸ್‌. ಈಶ್ವರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರ ಟೀಮನ್ನು ತೆಗೆಯಲಾಗುತ್ತದೆ ಮತ್ತು ಹೊಸ ಟೀಮ್‌ ಮಾಡಲಾಗುತ್ತದೆ ಎಂದು ಅವರು ಆವತ್ತೇ ಹೇಳಿದ್ದರು. ಅಂದರೆ ಇವರಿಬ್ಬರನ್ನು ತೆಗೆಯುವ ಪ್ಲ್ಯಾನ್‌ 20 ತಿಂಗಳ ಹಿಂದೆಯೇ ಇತ್ತಾ ಎನ್ನುವ ಪ್ರಶ್ನೆ ಮೂಡಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Elections) ಸಂಬಂಧಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ಬಿಜೆಪಿ ಹೈಕಮಾಂಡ್‌ ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರಿಗೆ ಕರೆ ಮಾಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ಸೂಚಿಸಿದೆ. ಕೆ.ಎಸ್‌. ಈಶ್ವರಪ್ಪ ಅವರು ಶಿಸ್ತಿನ ಸಿಪಾಯಿಯಾಗಿ ʻʻನಾನು ಈ ಬಾರಿ ಸ್ಪರ್ಧಿಸುವುದಿಲ್ಲ. ನನ್ನನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬೇಡಿʼ ಎಂದು ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಇತ್ತ ಜಗದೀಶ್‌ ಶೆಟ್ಟರ್‌ ಮಾತ್ರ ಸ್ವಲ್ಪ ಪ್ರತಿರೋಧ ತೋರಿದ್ದಾರೆ. ತಾನೇ ಸ್ಪರ್ಧೆ ಮಾಡುವುದಾಗಿ ಹಠ ಹಿಡಿದಿದ್ದಾರೆ. ಆದರೆ, ಇದು ಸಫಲವಾಗುವ ಸಾಧ್ಯತೆ ಕಡಿಮೆ ಕಡಿಮೆ ಇದೆ. ಇದಿಷ್ಟೇ ಅಲ್ಲ, 20ಕ್ಕೂ ಅಧಿಕ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆಯಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಅಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದ ಮಾತು ನಿಜವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

https://vistaranews.com/wp-content/uploads/2023/04/WhatsApp-Audio-2023-04-11-at-18.05.29.mp3
ಆಡಿಯೊದಲ್ಲಿ ನಳಿನ್‌ ಕುಮಾರ್‌ ಆಡಿರುವ ಮಾತುಗಳನ್ನು ಕೇಳಿ

ಅಂದು ಆಡಿಯೋದಲ್ಲಿ ನಳಿನ್‌ ಹೇಳಿದ್ದೇನು?

2021ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಹೊಸ ಮುಖ್ಯಮಂತ್ರಿ ನೇಮಕಕ್ಕೆ ಸಿದ್ಧತೆ ನಡೆಯುತ್ತಿದ್ದ ಹೊತ್ತಿನಲ್ಲಿ ರೆಕಾರ್ಡ್‌ ಆದ ಆಡಿಯೊ ಇದು. ನಳಿನ್‌ ಕುಮಾರ್‌ ಅವರು ತಮ್ಮ ಆಪ್ತರೊಬ್ಬರೊಂದಿಗೆ ಆತ್ಮೀಯವಾಗಿ ಮತ್ತು ಲೋಕಾಭಿರಾಮವಾಗಿ ಮಾತನಾಡಿದ್ದಾರೆ.

2021ರ ಜುಲೈ 18ರಂದು ನಳಿನ್‌ ಅವರು ಈ ಮಾತುಗಳನ್ನು ಹೇಳಿದ್ದರು. ಇದರಲ್ಲಿ ರಾಜ್ಯ ರಾಜಕಾರಣದ ವಿಚಾರದಲ್ಲಿ ಆಗುತ್ತಿರುವ ಬದಲಾವಣೆ, ಹೈಕಮಾಂಡ್‌ನ ನಿಲುವುಗಳ ಬಗ್ಗೆ ಅವರು ಮಾತನಾಡಿದ್ದಾರೆ.

ʻʻಯಾರಿಗೂ ಹೇಳ್ಬೇಡಿ, ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಅವರ ಟೀಮನ್ನು ಫುಲ್‌ ತೆಗೆಯೋದು. ಎಲ್ಲ ಹೊಸ ಟೀಮ್‌ ಮಾಡುತ್ತಿದ್ದೇವೆʼʼ ಎಂದು ನಳಿನ್‌ ಕುಮಾರ್‌ ಆವತ್ತು ಆಡಿಯೋದಲ್ಲಿ ಹೇಳಿದ್ದರು.

ಅದೇ ಹೊತ್ತಿಗೆ ʻʻಇನ್ನು ಯಾರೇ ಆದರೂ ನಮ್ಮ ಕೈಯಲ್ಲೇ ಇನ್ನುʼʼ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದ ಚುಕ್ಕಾಣಿ ತಮ್ಮದೇ ಕೈಯಲ್ಲಿರುತ್ತದೆ ಎಂದಿದ್ದರು.

ಆಗ ಮುಖ್ಯಮಂತ್ರಿ ಆಯ್ಕೆ ಸಂಬಂಧ ಚರ್ಚೆ ಜೋರಾಗಿತ್ತು. ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದರ ಕುತೂಹಲವಿತ್ತು. ನಳಿನ್‌ ಅವರು ಆಡಿಯೊದಲ್ಲಿ ಈ ವಿಷಯವನ್ನೂ ಉಲ್ಲೇಖಿಸುತ್ತಾರೆ. ಎಲ್ಲವನ್ನೂ ದಿಲ್ಲಿ ನಾಯಕರೇ ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದ್ದರು.

ʻʻಮುಖ್ಯಮಂತ್ರಿ ಸ್ಥಾನಕ್ಕೆ ಮೂವರ ಹೆಸರಿದೆ. ಯಾವುದಾದರೂ ಆಗಬಹುದಾದ ಚಾನ್ಸ್‌ ಇದೆ. ಇಲ್ಲಿಯವರನ್ನು ಯಾರನ್ನೂ ಮಾಡುವುದಿಲ್ಲ. ದಿಲ್ಲಿಯಿಂದಲೇ ಹಾಕ್ತಾರೆʼʼ ಎಂದಿದ್ದರು ನಳಿನ್‌.

ಆಗಿನ ಆ ಆಡಿಯೋಗೂ ಇವತ್ತು ನಡೆಯುತ್ತಿರುವ ವಿದ್ಯಮಾನಗಳಿಗೂ ತಾಳೆ ಹಾಕಿ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ : Karnataka Elections : ಈಶ್ವರಪ್ಪ, ಶೆಟ್ಟರ್‌ ಮಾತ್ರವಲ್ಲ ಇನ್ನೂ 20 ಹಾಲಿ ಬಿಜೆಪಿ ಶಾಸಕರಿಗೆ ಟಿಕೆಟ್‌ ಇಲ್ಲ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

Exit mobile version