Site icon Vistara News

Karnataka Elections: ಬೊಮ್ಮಾಯಿ ಹಗರಣ ಬಿಚ್ಚಿಡ್ತೀನಿ ಎಂದ ಓಲೆಕಾರ್‌, ದಾಖಲೆ ಕೊಟ್ಟು ಮಾತಾಡಲಿ ಎಂದ ಸಿಎಂ

Nehru Olekar Bommai

#image_title

ಹಾವೇರಿ/ಉಡುಪಿ: ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್‌ ಮಿಸ್‌ ಆಗಿರುವ ಬಿಜೆಪಿ ಶಾಸಕ ನೆಹರು ಓಲೆಕಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಬೊಮ್ಮಾಯಿ ಮಾಡಿರುವ ಎಲ್ಲ ಹಗರಣ ಬಿಚ್ಚಿಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ ಅವರು, ನೆಹರು ಓಲೆಕಾರ್‌ ಅವರು ದಾಖಲೆ ಕೊಟ್ಟು ಮಾತನಾಡಲಿ ಎಂದಿದ್ದಾರೆ. ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್‌ ಅನ್ನು ಗವಿಸಿದ್ಧಪ್ಪ ಅವರಿಗೆ ನೀಡಲಾಗಿದೆ.

ಟಿಕೆಟ್‌ ವಂಚಿತ ನೆಹರು ಓಲೆಕಾರ್‌ ಹೇಳಿದ್ದೇನು?

ಟಿಕೆಟ್‌ ಸಿಗದೆ ಬೇಸರಗೊಂಡಿರುವ ನೆಹರು ಓಲೆಕಾರ್‌ ಅವರು, ಹಾವೇರಿಯಲ್ಲಿ ನನ್ನನ್ನು ಬಿಟ್ಟು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎನ್ನುವ ನಿರೀಕ್ಷೆಯಲ್ಲಿದ್ದೆ. ಬಸವರಾಜ ಬೊಮ್ಮಾಯಿ ಬದಲಾವಣೆ ಮಾಡಿ ಬೇರೆಯವರಿಗೆ ಟಿಕೆಟ್ ಕೊಡಿಸಿದ್ದಾರೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಅವರು ಎದುರಿಸುತ್ತಾರೆ ಎಂದರು.

ʻʻʻನನ್ನ ಟಿಕೆಟ್ ಮಿಸ್ಸಾಗಲು ಬಸವರಾಜ ಬೊಮ್ಮಾಯಿ ಕಾರಣ. ರಾಜಕೀಯವಾಗಿ ನನ್ನನ್ನು ಮುಗಿಸಲು ಬೊಮ್ಮಾಯಿ ಹೀಗೆ ಮಾಡಿದ್ದಾರೆ. ಇವತ್ತು‌ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದಿನ‌ ನಿರ್ಧಾರ ಮಾಡುತ್ತೇವೆʼʼ ಎಂದು ಹೇಳಿದರು

ಅದರ ಜತೆಗೆ ಅತ್ಯಂತ ಪ್ರಮುಖವಾಗಿ, ʻʻಬಸವರಾಜ ಬೊಮ್ಮಾಯಿ ಮಾಡಿರುವ ಹಗರಣಗಳ ದಾಖಲೆಯನ್ನು ಮುಂದಿನ‌‌ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ. ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಮುಗಿಸುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಿದ್ದಾರೆ. ನನ್ನ ಮೇಲಿರುವ ಪ್ರಕರಣದಿಂದಾಗಿ ನನಗೆ ಟಿಕೆಟ್ ತಪ್ಪಿಲ್ಲ. ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಅವರನ್ನು ಆಸಕ್ತಿ ವಹಿಸಿ ಬೊಮ್ಮಾಯಿ ಕಳುಹಿಸಿದ್ದರು. ಈ ವಿಚಾರವನ್ನು ಬಹಿರಂಗಪಡಿಸುತ್ತೇನೆʼʼ ಎಂದು ಹೇಳಿದರು.‌

ಕೋರ್ಟ್‌ನಲ್ಲಿ ಪ್ರಕರಣ ಏನಿತ್ತು?

ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ನೆಹರೂ ಓಲೆಕಾರ್‌ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದಲ್ಲದೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಕ್ರಿಮಿನಲ್‌ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದ ಜನಪ್ರತಿನಿಧಿಗಳ ಶಾಸಕತ್ವ/ಸಂಸತ್‌ ಸದಸ್ಯತ್ವ ಸ್ವಯಂ ಆಗಿ ರದ್ದಾಗುವ ವಿಚಾರ ರಾಹುಲ್‌ ಗಾಂಧಿ ಪ್ರಕರಣದಲ್ಲಿ ಬಯಲಾದಾಗ ನೆಹರೂ ಓಲೆಕಾರ್‌ ಕೂಡಲೇ ಮೇಲ್ಮನವಿ ಸಲ್ಲಿಸಿದ್ದರು. ಮುಂದೆ ಕೋರ್ಟ್‌ ಶಿಕ್ಷೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಹೀಗಾಗಿ ಕಾನೂನು ಪ್ರಕಾರ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಇರಲಿಲ್ಲ. ಬಿಜೆಪಿ ಆಂತರಿಕ ಸಮೀಕ್ಷೆ ಮತ್ತಿತರ ವಿಚಾರಗಳನ್ನು ಆಧರಿಸಿ ಟಿಕೆಟ್‌ ನಿರಾಕರಿಸಿದೆ ಎನ್ನಲಾಗಿದೆ.

ಬೊಮ್ಮಾಯಿ ಪ್ರತಿಕ್ರಿಯೆ ಹೇಗಿತ್ತು?

ʻʻನೆಹರೂ ಓಲೆಕಾರ್ ಯಾವ ಆರೋಪ ಬೇಕಾದ್ರೂ ಮಾಡಲಿ. 1500 ಕೋಟಿ ಅಲ್ಲ, ಯಾವುದೇ ಆರೋಪ ಇದ್ದರೂ ದಾಖಲೆ ಸಮೇತ ಮಾಡಲಿ. ಹೇಳಿಕೆಗಳಿಂದ ಹಗರಣ ಆಗಲ್ಲ, ದಾಖಲೆ ಸಹಿತ ಮಾಡಲಿ, ಸತ್ಯಾಸತ್ಯತೆ ಹೊರಬರಲಿʼʼ ಎಂದು ಮಂಗಳೂರಿನಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಹೇಳಿದರು.

ʻʻರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ. ಆಗುತ್ತಾ ಇರುತ್ತದೆ. ಬಂಡಾಯ ಸರಿಪಡಿಸ್ತಾ ಇದ್ದೇವೆ. ಕಾರ್ಯಕರ್ತರು ಮತ್ತು ಪಕ್ಷ ಗಟ್ಟಿ ಇರೋದ್ರಿಂದ ಡ್ಯಾಮೇಜ್ ಆಗಲ್ಲʼʼ ಎಂದು ಹೇಳಿದರು.

ಇದನ್ನೂ ಓದಿ : CM Basavaraj Bommai: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಬೊಮ್ಮಾಯಿ ದಂಪತಿ; ಸಿಎಂ ಜತೆ ಕಾಣಿಸಿಕೊಂಡ ರಿಷಬ್‌ ಶೆಟ್ಟಿ

Exit mobile version