Site icon Vistara News

Karnataka Elections : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್‌ವೈ ಗೋಪಾಲಕೃಷ್ಣ; ಕಾಂಗ್ರೆಸ್‌ ಸೇರಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ!

NY Gopalakrishna resigns

#image_title

ಶಿರಸಿ/ವಿಜಯನಗರ: ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ (Karnataka Elections) ರಾಜೀನಾಮೆ ನೀಡಿದ್ದು, ಅದರ ಬೆನ್ನಿಗೇ ರಾಜಕೀಯ ನಿವೃತ್ತಿಯ ಘೋಷಣೆಯನ್ನು ಮಾಡಿದ್ದಾರೆ. ತಾನು ಯಾವುದೇ ಪಕ್ಷ ಸೇರುವುದಿಲ್ಲ, ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದರು.

ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶಿರಸಿಯ ಅವರ ನಿವಾಸದಲ್ಲಿ ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್‌ ಸೇರುವ ಮತ್ತು ಮೊಳಕಾಲ್ಮುರು ಕ್ಷೇತ್ರದಿಂದ ಅಭ್ಯರ್ಥಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆದರು. ಮಾತ್ರವಲ್ಲ, ತಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಪ್ರಕಟಿಸಿದರು.

ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ನಾನು ಯಾವ ಪಕ್ಷವನ್ನೂ ಸೇರೊಲ್ಲ, ರಾಜಕೀಯದಿಂದಲೇ ದೂರವಿರುತ್ತೇನೆ ಎಂದು ಹೇಳಿದರು. ಆದರೆ ಈ ಬಾರಿ ತಮ್ಮ ಮಗನಿಗೆ ಟಿಕೆಟ್‌ ಕೊಡಿಸಲು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಅವರು ಸೂಚ್ಯವಾಗಿ ಹೇಳಿದ್ದಾರೆ.

ʻʻನನಗೆ ವಯಸ್ಸಾಗಿದೆ. ಕ್ಷೇತ್ರದ ಜನರು ಬೇರೆಯವರಿಗೆ ನೀಡಿ ಎನ್ನುತ್ತಿದ್ದಾರೆ. ಜೊತೆಗೆ ಮಕ್ಕಳು ನಮಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಅವರು ಯಾವ ಪಕ್ಷಕ್ಕೆ ಹೋಗುತ್ತಾರೋ ಗೊತ್ತಿಲ್ಲ.ʼʼ ಎಂದು ಎನ್‌.ವೈ ಗೋಪಾಲಕೃಷ್ಣ ಹೇಳಿದರು.

ಮಂತ್ರಿ ಸ್ಥಾನ ನೀಡದ ಬಗ್ಗೆ ಬೇಸರ

ಆರು ಬಾರಿ ಗೆಲುವು ಸಾಧಿಸಿದರೂ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಬಗ್ಗೆ ಎನ್‌ವೈ ಗೋಪಾಲಕೃಷ್ಣ ಅವರಿಗೆ ಬೇಸರ ಇರುವುದು ಸ್ಪಷ್ಟವಾಗಿದೆ. ʻʻನಾಲ್ಕು ಬಾರಿ ಗೆದ್ದವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಆದರೆ ನಾನು ಆರು ಬಾರಿ ಶಾಸಕನಾದರೂ ಮಂತ್ರಿ ಸ್ಥಾನ ನೀಡಿಲ್ಲ. ಬಿಜೆಪಿಯೂ ನೀಡಿಲ್ಲ. ಕಾಂಗ್ರೆಸ್ ಸಹ ನೀಡಿಲ್ಲ. ಇದಕ್ಕೆ ಅಸಮಧಾನವಿದೆʼʼ ಎಮದು ಹೇಳಿದರು.

ʻʻನನಗೆ ಈಗ 73 ವರ್ಷ. ವಯಸ್ಸಾದ ಕಾರಣಕ್ಕೆ, ಆರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೂ ಸೇರೋದಿಲ್ಲ. ಅದಕ್ಕೆ ರಾಜಕೀಯದಿಂದ ದೂರವಿರುತ್ತೇನೆ. ರಾಜಕೀಯ ನಿವೃತ್ತಿ ಪಡೆಯಲೆಂದೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಿದ್ದರೆ ಅವರು ಕರೆಯುವುದು, ಇವರು ಕರೆಯುವ ಗೊಂದಲ ಉಂಟಾಗುತ್ತದೆ. ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದೆಲ್ಲ ಸುದ್ದಿಯಾಗಿದೆ. ಆದರೆ, ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲʼʼ ಎಂದಿದ್ದಾರೆ.

ಹಾಗಿದ್ದರೆ ಮುಂದಿನ ಕಥೆ ಏನು?

ಇದುವರೆಗಿನ ಮಾಹಿತಿ ಪ್ರಕಾರ ಎನ್‌ವೈ ಗೋಪಾಲಕೃಷ್ಣ ಅವರು ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಸ್ವತಃ ಗೋಪಾಲಕೃಷ್ಣ ಅವರೇ ಬೇರೆ ಪಕ್ಷ ಸೇರುವ, ಸ್ಪರ್ಧಿಸುವ ಸಾಧ್ಯತೆಯನ್ನು ನಿರಾಕರಿಸಿರುವುದರಿಂದ ಮುಂದೇನು ಎಂಬ ಕುತೂಹಲ ಮೂಡಿದೆ. ಒಂದು ಸಾಧ್ಯತೆಯ ಪ್ರಕಾರ, ಎನ್‌.ವೈ. ಗೋಪಾಲಕೃಷ್ಣ ಅವರ ಪುತ್ರ ಮೊಳಕಾಲ್ಮುರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ. ಅದಕ್ಕಾಗಿಯೇ ಗೋಪಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಸ್ಪಷ್ಟ.

ಆರು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು

ಎನ್‌. ಯಲ್ಲಪ್ಪ ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮುರುವಿನಿಂದ (1993ರಿಂದ 2013) ಶಾಸಕರಾಗಿದ್ದು, 2014ರಲ್ಲಿ ಕಾಂಗ್ರೆಸ್‌ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು.

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ನಂತರ 2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಕೂಡ್ಲಿಗಿಯಿಂದ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ : Karnataka Elections : ಬಿಜೆಪಿಯ ಮತ್ತೊಂದು ವಿಕೆಟ್‌ ಪತನ, ಕೂಡ್ಲಿಗಿ ಶಾಸಕ ಎನ್‌.ವೈ ಗೋಪಾಲಕೃಷ್ಣ ಕಾಂಗ್ರೆಸ್‌ಗೆ

Exit mobile version