ಶಶಿಧರ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ಇನ್ನೂ ಚುನಾವಣೆ ಘೋಷಣೆ ಆಗಿಲ್ಲ, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ (Karnataka Elections) ಮದಗಜಗಳ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ದೇವರ ಹರಕೆ ಹೆಸರಿನಲ್ಲಿ ಕಾಂಗ್ರೆಸ್ ಹಾಲಿ ಶಾಸಕ ನಾಗೇಂದ್ರ ಅವರು ಶ್ರೀರಾಮುಲು ಹುಟ್ಟೂರು ಜೋಳದರಾಶಿ ಸಮೀಪದ ದೇವಸ್ಥಾನದಲ್ಲಿ ಬಾಡೂಟ ಮಾಡಿಸಿದ ಬೆನ್ನಲ್ಲೇ ನಾನು ಬಳ್ಳಾರಿ ಗ್ರಾಮೀಣದಿಂದಲೇ ಸ್ಪರ್ಧೆ ಮಾಡುತ್ತೇನೆಂದು ರಾಮುಲು ಘೋಷಣೆ ಮಾಡಿ, ಬಳ್ಳಾರಿ ಗ್ರಾಮೀಣ ಚುನಾವಣೆ ಕಣವನ್ನು ಈಗಿನಿಂದಲೇ ರಂಗೇರುವಂತೆ ಮಾಡಿದ್ದಾರೆ.
ಒಂದು ಕಾಲದಲ್ಲಿ ಆಪ್ತರಾಗಿ ಕ್ಷೇತ್ರ ತ್ಯಾಗ ಮಾಡಿದ್ದರು!
ಒಂದು ಕಾಲದಲ್ಲಿ ಶ್ರೀರಾಮುಲು ಮತ್ತು ಬಿ.ನಾಗೇಂದ್ರ ಆಪ್ತ ಮಿತ್ರರು. 2008ರಿಂದ ಶ್ರೀ ರಾಮುಲಿಗಾಗಿ ಜನಾರ್ದನ ರೆಡ್ಡಿಯ ಅಣತಿಯಂತೆ ಬಳ್ಳಾರಿ ಗ್ರಾಮೀಣ ಕ್ಷೇತ್ರ ತ್ಯಾಗ ಮಾಡಿ 2008ರಲ್ಲಿ ಕೂಡ್ಲಿಗೆ ಹೋಗಿ ನಾಗೇಂದ್ರ ಸ್ಪರ್ಧಿಸಿ ಗೆಲುವು ಸಾಧಿಸಿದರು. 2013ರಲ್ಲಿ ರಾಮುಲು ಬಿಎಸ್ ಆರ್ ಕಟ್ಟಿದಾಗ ನಾಗೇಂದ್ರ ಬಿಜೆಪಿಯಿಂದ ಸ್ಪರ್ಧಿಸದೆ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸಿ, ಗೆಳೆಯ ರಾಮುಲು ನಡೆಗೆ ಸಹಮತ ತೋರಿದ್ದರು. ಆದರೆ 2018ರಲ್ಲಿ ಬಳ್ಳಾರಿ ಗ್ರಾಮೀಣದಿಂದ ನಾಗೇಂದ್ರ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ರಾಮುಲು ಮೊಳಕಾಲ್ಮೂರಿನಿಂದ ಬಿಜೆಪಿಯಿಂದ ಸ್ಪರ್ಧಿಸಿದ್ದರು.
ಈಗ ರಾಜಕೀಯ ಎದುರಾಳಿಗಳು
ಶ್ರೀರಾಮುಲು ಈ ಬಾರಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬ ನಿಖರತೆ ಇರಲಿಲ್ಲ. ಆದರೆ ಗ್ರಾಮೀಣದಿಂದಲೇ ಸ್ಪರ್ಧೆ ಮಾಡಲಿದ್ದಾರೆಂಬ ಸುಳಿವು ಸಿಕ್ಕ ಬೆನ್ನಲ್ಲೇ ಹಾಲಿ ಶಾಸಕ ನಾಗೇಂದ್ರ ಅವರು ರಾಮುಲು ಊರು ಜೋಳದರಾಶಿ ಸಮೀಪದ ಕುಂಟು ಮಾರೆಮ್ಮ ದೇವಸ್ಥಾನದಲ್ಲಿ ದೇವರ ಹರಕೆ ಹೆಸರಿನಲ್ಲಿ ಸಾವಿರಾರು ಜನ ಮುಖಂಡರು ಮತ್ತು ಕಾರ್ಯಕರ್ತರಿಗೆ ಬಾಡೂಟ ವ್ಯವಸ್ಥೆ ಮಾಡಿ, ಎದುರಾಳಿ ಸಚಿವ ರಾಮುಲು ಅವರಿಗೆ ಟಾಂಗ್ ಕೊಡುವ ಪ್ರಯತ್ನ ಮಾಡಿದ್ದಾರೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಇಡೀ ರಾಜ್ಯದ ಗಮನ ಸೆಳೆಯುವ ಕ್ಷೇತ್ರ
ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಫರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಶ್ರೀರಾಮುಲು ಅವರನ್ನು ಈ ಬಾರಿ ಕ್ಷೇತ್ರಕ್ಕೆ ಕಟ್ಟಿಹಾಕುವ ಎಲ್ಲ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆ ಹಾಲಿ ಶಾಸಕ ನಾಗೇಂದ್ರ ಅವರು ರಾಮುಲು ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಕೇವಲ ಅಭ್ಯರ್ಥಿಗಳ ಮಟ್ಟಿಗೆ ಕ್ಷೇತ್ರ ಗಮನ ಸೆಳೆಯದೆ, ರಾಜ್ಯ ನಾಯಕರೊಬ್ಬರ ಭವಿಷ್ಯತ್ತಿನ ಪ್ರಶ್ನೆಯಾಗಿದೆ. ಇನ್ನು ಸಿದ್ದುಗೆ ಟಕ್ಕರ್ ನೀಡಿದ್ದ ರಾಮುಲು ಆಪ್ತಮಿತ್ರ ವಿರುದ್ಧ ಸ್ಪರ್ಧೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಜನಾರ್ದನ ರೆಡ್ಡಿಯ ನಡೆ ಇನ್ನೂ ನಿಗೂಢ!
ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿಯವರ ಕೆಆರ್ ಪಿಪಿಯಿಂದ ಯಾರು ಸ್ಪರ್ಧೆ ಮಾಡುತ್ತಾರೆಂಬುದು ನಿಗೂಢವಾಗಿದೆ. ಈ ಹಿಂದೆ ಶ್ರೀರಾಮುಲು ಮತ್ತು ನಾಗೆಂದ್ರ ಇಬ್ಬರಿಗೂ ಜನಾರ್ದನ ರೆಡ್ಡಿ ಆಪ್ತರಾಗಿದ್ದವರು. ಇವರ ಮಧ್ಯೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆಪ್ತ ಮಿತ್ರರಿಗೆ ಟಾಂಗ್ ನೀಡ್ತಾರಾ ಅಥವಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜಾಣ ಮೌನ ವಹಿಸುತ್ತಾರಾ? ಏಕೆಂದರೆ ರೆಡ್ಡಿಯವರು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರಿಗೆ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದಾರೆ, ಪ್ರಚಾರವು ಅಬ್ಬರದಿಂದ ಸಾಗಿದೆ. ಆದರೆ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಬಿರುಸಿನ ಓಡಾಟ ರೆಡ್ಡಿ ಪಕ್ಷದಿಂದ ಕಾಣುತ್ತಿಲ್ಲ.
ರಾಮುಲು ಅವರಿಗೆ ಗ್ರಾಮೀಣ ಕ್ಷೇತ್ರವು ಸುಲಭದ ತುತ್ತಲ್ಲ. ಕ್ಷೇತ್ರದಲ್ಲಿ ಯಾರಿಗಾದರೂ ಪ್ರಯಾಸದ ಗೆಲುವು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಇಬ್ಬರು ನಾಯಕರು ಏನಂತಾರೆ?
ಕಳೆದ ಹಲವಾರು ವರ್ಷಗಳಿಂದ ಗ್ರಾಮೀಣ ಕ್ಷೇತ್ರದಲ್ಲಿ ಸೇವೆ ಮಾಡಿರುವೆ. ಈಗ ಮತ್ತೊಮ್ಮೆ ಅಲ್ಲಿಂದಲೇ ಸ್ಪರ್ಧೆ ಮಾಡುವೆ. ಈ ಬಗ್ಗೆ ಹೈ ಕಮಾಂಡ್‌ಗೂ ತಿಳಿಸಿದ್ದು, ಬಹುತೇಕ ಎಲ್ಲರ ಅಪೇಕ್ಷೆ ಮೇರೆಗೆ ಬಳ್ಳಾರಿ ಗ್ರಾಮೀಣದಿಂದಲೇ ಸ್ಪರ್ಧೆ ಮಾಡುವೆ ಎಂದಿದ್ದಾರೆ ಸಚಿವ ಶ್ರೀರಾಮುಲು.
ನನ್ನ ತವರು ಕ್ಷೇತ್ರವಿದು, ಗ್ರಾಮೀಣ ಕ್ಷೇತ್ರದ ಸುಭಿಕ್ಷೆಗಾಗಿ ದೇವರಿಗೆ ಹರಕೆ ತೀರಿಸಿದ್ದೇನೆ. ಇಲ್ಲಿ ಏನೇ ಸಂಕಲ್ಪ ಮಾಡಿದರೂ ಆಗುತ್ತೆ, ನಮ್ಮ ತಂದೆ ಕಾಲದಿಂದಲೂ ಹರಕೆ ತೀರಿಸುತ್ತಾ ಬಂದಿದ್ದೇವೆ, ಚುನಾವಣೆಗೂ ಹರಕೆಗೂ ಸಂಬಂಧವಿಲ್ಲ ಎನ್ನುವುದು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗೇಂದ್ರ ಮಾತು.