ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ (Karnataka Elections) ಭಾರತೀಯ ಜನತಾ ಪಕ್ಷ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನ ಸ್ಥಾನ ನೀಡಲಾಗಿದೆ. ಅದರೆ, ಅಚ್ಚರಿ ಎಂದರೆ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಜತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಜತೆಗೆ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದ, ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಪ್ರಕಟಿಸಿದ ಚಿತ್ರ ನಟ ಸುದೀಪ್ ಅವರ ಹೆಸರನ್ನೂ ಹಾಕಿಲ್ಲ.
ಯಾರೆಲ್ಲ ಸ್ಟಾರ್ ಪ್ರಚಾರಕರು?
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್, ಇತರ ನಾಯಕರಾದ ಮನ್ಸುಖ್ ಮಂಡಾವಿಯಾ, ಅಣ್ಣಾಮಲೈ, ಅರುಣ್ ಸಿಂಗ್, ಡಿ.ಕೆ. ಅರುಣಾ, ಸಿ.ಟಿ ರವಿ, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾನ್, ಹೇಮಂತ್ ಬಿಸ್ವಾ ಶರ್ಮಾ, ದೇವೇಂದ್ರ ಫಡ್ನವಿಸ್, ಪ್ರಭಾಕರ್ ಕೋರೆ, ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ, ಭಗವಂತ್ ಖೂಬಾ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ, ಬಸನ ಗೌಡ ಪಾಟೀಲ್ ಯತ್ನಾಳ್, ಉಮೇಶ್ ಜಾಧವ್, ಚಲವಾದಿ ನಾರಾಯಣ ಸ್ವಾಮಿ, ಎನ್. ರವಿಕುಮಾರ್, ಜಿ.ವಿ. ರಾಜೇಶ್, ಜಗ್ಗೇಶ್, ಶ್ರುತಿ, ತಾರಾ ಅನುರಾಧ ಅವರನ್ನು ಸ್ಟಾರ್ ಪ್ರಚಾರಕರಾಗಿ ಅವಕಾಶ ನೀಡಲಾಗಿದೆ.
ನಿರೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ, ನಡ್ಡಾ ಅವರಿಗೆ ಟಾಪ್ 2 ಸ್ಥಾನ ಸಿಕ್ಕಿದೆ. ರಾಜ್ಯದ ನಾಯಕರ ಹೆಸರು ಆರನೇ ಕ್ರಮಾಂಕದಿಂದ ಬರುತ್ತದೆ. ಇದರಲ್ಲಿ ಬಿ.ಎಸ್ ಯಡಿಯೂರಪ್ಪ ಅವರೇ ಪ್ರಮುಖ. ಅವರ ನಂತರ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಶಿ ಬರುತ್ತಾರೆ.
ಬಿ.ವೈ ವಿಜಯೇಂದ್ರ ಹೆಸರಿಲ್ಲ
ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಬಿ.ವೈ. ವಿಜಯೇಂದ್ರ ಅವರಿಗೆ ಸ್ಟಾರ್ ಪ್ರಚಾರಕರ ಸ್ಥಾನ ನೀಡಲಾಗಿಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ಅಭ್ಯರ್ಥಿಗಳು ವಿಜಯೇಂದ್ರ ಅವರು ಆಗಮಿಸಬೇಕು ಎಂದು ಕೋರಿಕೆ ಮಂಡಿಸುತ್ತಿದ್ದಾರೆ. ಆದರೆ ಬಿಜೆಪಿ ನಾಯಕತ್ವ ಅವರ ಹೆಸರನ್ನು ಪರಿಗಣಿಸಿಲ್ಲ.
ವಿಜಯೇಂದ್ರ ಅವರು ಶಿಕಾರಿಪುರದ ಅಭ್ಯರ್ಥಿ ಎಂಬ ನೆಲೆಯಲ್ಲಿ ಈ ಸ್ಟಾರ್‌ಗಿರಿ ನಿರಾಕರಿಸಿದೆ ಎಂದು ಹೇಳುವ ಹಾಗಿಲ್ಲ. ಎರಡು ಕಡೆ ಸ್ಪರ್ಧೆ ಮಾಡಬೇಕಾಗಿರುವ ಆರ್. ಅಶೋಕ್ ಅವರು ಕೂಡಾ ಸ್ಟಾರ್ ಪ್ರಚಾರಕರೇ ಆಗಿದ್ದಾರೆ.
ಉಳಿದಂತೆ ಚಿತ್ರ ನಟರಾದ ರಾಜ್ಯಸಭಾ ಸದಸ್ಯ ಜಗ್ಗೇಶ್, ಶ್ರುತಿ, ತಾರಾ ಅನುರಾಧ ಅವರಿದ್ದಾರೆ. ಚಿತ್ರ ನಟ ಸುದೀಪ್ ಅವರು ತಾನು ಬೊಮ್ಮಾಯಿ ಹೇಳಿದ ಕಡೆ ಪ್ರಚಾರ ಮಾಡುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಆದರೆ, ಅವರನ್ನು ಬಿಜೆಪಿಯ ಸ್ಟಾರ್ ಪ್ರಚಾರಕ ಎಂದು ಪರಿಗಣಿಸಿಲ್ಲ.