ಬೀದರ್: ಒಂದು ಕಡೆ ಚುನಾವಣೆಯ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಹಣ, ವಸ್ತು, ಚಿನ್ನಾಭರಣ ಸಾಗಾಟ ನಡೆಯುತ್ತಿದ್ದರೆ, ಅದರ ನಡುವೆಯೇ ಮಾದಕ ದ್ರವ್ಯಗಳ ಸಾಗಾಟವೂ ಹೆಚ್ಚಾಗಿರುವುದು ಕಂಡುಬಂದಿದೆ. ಹಾಗಿದ್ದರೆ ಈ ಮಾದಕ ದ್ರವ್ಯಗಳು ಕೂಡಾ ಚುನಾವಣೆಯ ಹಿನ್ನೆಲೆಯಲ್ಲಿ ಬಳಕೆಯಾಗುತ್ತಿದೆಯೇ ಎಂಬ ಸಂಶಯ ಮೂಡಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಿರುವುದರಿಂದ ಈ ಅಕ್ರಮಗಳಲ್ಲಿ ಕೆಲವು ಬಯಲಿಗೆ ಬರುತ್ತಿದೆ.
ಬೀದರ್ ಜಿಲ್ಲೆಯಲ್ಲಿ ಹುಮನಾಬಾದ್ ತಾಲೂಕಿನ ತಾಳಮಡಗಿ ಗಾಂಧಿ ನಗರದಿಂದ ನಿಂಬೂರ ಕ್ರಾಸ್ ಬಳಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಟಾಟಾ ಸುಮೋ ವಾಹನದಲ್ಲಿ ಸಾಗಿಸುತ್ತಿದ್ದ ಸುಮಾರು 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಾಂಜಾ ಪತ್ತೆಯಾಗಿದೆ.
ಇದೊಂದು ಅಂತಾರಾಜ್ಯ ಡ್ರಗ್ಸ್ ಮಾರಾಟ ಜಾಲದ ಕೃತ್ಯವೆಂದು ನಂಬಲಾಗಿದ್ದು, ಬೀದರ್ ಪೊಲೀಸರು ಮಹಾರಾಷ್ಟ್ರಕ್ಕೆ ಸೇರಿದ ನಾಲ್ವರನ್ನು ಬಂಧಿಸಿದ್ದಾರೆ.
MH 43-D-7935 ನೋಂದಣಿ ಸಂಖ್ಯೆಯ ಟಾಟಾ ಸೊಮೊ ವಾಹನದಲ್ಲಿ ಅನಧಿಕೃತ ಗಾಂಜಾ ಸಾಗಾಟ ನಡೆಯುತ್ತಿತ್ತು. ಮನ್ನಾಖೆಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ವಿವರ ನೀಡಿದ್ದಾರೆ. ಸುಮಾರು 2 ಕೆಜಿಯ 50 ಪ್ಯಾಕೆಟ್ ಗಾಂಜಾ ವಾಹನದಲ್ಲಿತ್ತು.
ಸರ್ಕಾರಿ ಬಸ್ಸಲ್ಲಿ ಸ್ಕೂಲ್ ಬ್ಯಾಗಲ್ಲಿ ಗಾಂಜಾ ಸಾಗಾಟ!
ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ನಲ್ಲಿ ಸ್ಕೂಲ್ ಬ್ಯಾಗ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ ಬಸ್ಸಿನಲ್ಲಿದ್ದ ಸ್ಕೂಲ್‌ಬ್ಯಾಗ್‌ನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ. ಬಳಿಕ ಅದು ಯಾರ ಬ್ಯಾಗ್ ಎಂದು ಹುಡುಕಿದಾಗ ಅದು ಸೈಯದ್ ಅಬ್ದುಲ್ ಮನಾನ್ ಎಂಬಾತನಿಗೆ ಸೇರಿದ್ದೆಂದು ತಿಳಿಯಿತು.
ಆರೋಪಿ ಮನಾನ್ ಬೀದರ್‌ನಿಂದ ಗಾಂಜಾ ಖರೀದಿಸಿ ಕಲಬುರಗಿಗೆ ಬಸ್ಸಿನಲ್ಲಿ ತೆಗೆದುಕೊಂಡು ಬರ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಚೀಲದಲ್ಲಿ ಒಟ್ಟು 8 ಕೆಜಿ ಗಾಂಜಾ ಇರುವುದು ಪತ್ತೆಯಾಯಿತು. ಮಕ್ಕಳ ಸ್ಕೂಲ್ ಬ್ಯಾಗನ್ನು ಯಾರೂ ಚೆಕ್ ಮಾಡಲಾರರು ಎಂಬ ಧೈರ್ಯದಲ್ಲಿ ಆರೋಪಿ ಈ ರೀತಿಯ ಪ್ಲ್ಯಾನ್ ಮಾಡಿದ್ದಾನೆ ಎಂದು ನಂಬಲಾಗಿದೆ.
ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Karnataka Election 2023: ಕುತಂತ್ರ, ತಂತ್ರ ಎಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಗೊತ್ತಿದೆ: ಚೆಲುವರಾಯಸ್ವಾಮಿ