ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ (Karnataka Elections 2023) ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ವಿರುದ್ಧ ಕಾಂಗ್ರೆಸ್ ಪರಿಶ್ರಮ ನೀಟ್ ಅಕಾಡೆಮಿಯ ಮುಖ್ಯಸ್ಥ ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸಿದೆ. ಈ ನಡುವೆ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಆರ್.ಎಲ್. ಜಾಲಪ್ಪ ಅವರ ಮೊಮ್ಮಗ ವಿನಯ ಶ್ಯಾಂ ಅವರು ಶನಿವಾರವೇ ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಗಾಢ ಪ್ರಭಾವ ಹೊಂದಿರುವ ಡಾ. ಕೆ. ಸುಧಾಕರ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂಬ ಪ್ರಯತ್ನದಲ್ಲಿ ಅವರ ವಿರುದ್ಧ ಯುವ ಮುಖಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿತ್ತು. ಮೊದಲು ಯುವ ಕಾಂಗ್ರೆಸ್ ನಾಯಕ ರಕ್ಷಾ ರಾಮಯ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಬಳಿಕ ಕೊತ್ತೂರು ಮಂಜುನಾಥ್ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರೂ ಹಿಂದೆ ಸರಿದಿದ್ದರು. (ಈಗ ಕೊತ್ತೂರು ಜಿ. ಮಂಜುನಾಥ್ ಅವರಿಗೆ ಕೋಲಾರದ ಟಿಕೆಟ್ ನೀಡಲಾಗಿದೆ).
ಮುಂದಿನ ಹುಡುಕಾಟದಲ್ಲಿ ಕಾಂಗ್ರೆಸ್‌ಗೆ ಎರಡು ಪ್ರಮುಖ ಹೆಸರುಗಳು ಎದುರಾಗಿದ್ದವು. ಒಂದು ರಾಜ್ಯದಲ್ಲಿ ಜನಪ್ರಿಯವಾಗುತ್ತಿರುವ ಪರಿಶ್ರಮ ನೀಟ್ ಅಕಾಡೆಮಿಯ ಮುಖ್ಯಸ್ಥ ಪ್ರದೀಪ್ ಈಶ್ವರ್.ಇವರು ಪ್ರಾಧ್ಯಾಪಕರಾಗಿದ್ದು, ರಾಜ್ಯದಲ್ಲಿ ನಡೆಯುವ ವೈದ್ಯಕೀಯ ಪ್ರವೇಶ ಪರೀಕ್ಷೆ – ನೀಟ್‌ಗಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಾರೆ. ಅವರ ಅಕಾಡೆಮಿಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ನೀಟ್‌ನಲ್ಲಿ ಉತ್ತಮ ರ‍್ಯಾಂಕ್ ದೊರೆತು ಅವರಿಗೆ ಮೆಡಿಕಲ್ ಸೀಟು ದೊರೆಯುತ್ತದೆ ಎಂಬ ನಂಬಿಕೆ ಇದೆ. ನೀಟ್ ರಿಸಲ್ಟ್ ಬಂದಾಗ ಇದು ದಾಖಲಾಗಿದೆ ಕೂಡಾ.
ಇನ್ನೊಬ್ಬರು ಹಿರಿಯ ರಾಜಕಾರಣಿ ಆರ್.ಎಲ್. ಜಾಲಪ್ಪ ಅವರ ಮೊಮ್ಮಗ ವಿನಯಶ್ಯಾಂ. ವಿನಯಶ್ಯಾಂ ಅವರು ಟಿಕೆಟ್ ಪ್ರಬಲ ಅಕಾಂಕ್ಷಿಯಾಗಿದ್ದರು. ಅಂತಿಮವಾಗಿ ಕಾಂಗ್ರೆಸ್ ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಿದೆ. ಇದನ್ನು ಅರಿತಿದ್ದ ವಿನಯ್ ಶ್ಯಾಂ ಶನಿವಾರವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈ ಬಂಡಾಯವನ್ನು ಪಕ್ಷ ಹೇಗೆ ತಣಿಸುತ್ತದೆ ಎಮದು ಕಾದು ನೋಡಬೇಕಾಗಿದೆ.
ಪ್ರದೀಪ್ ವರ್ಸಸ್ ಸುಧಾಕರ್ ಸ್ಪರ್ಧೆಗೆ ಇದೆ ದೊಡ್ಡ ಇತಿಹಾಸವೇ
ನಿಜವೆಂದರೆ ಪ್ರದೀಪ್ ಈಶ್ವರ್ ಅವರು ಡಾ. ಕೆ. ಸುಧಾಕರ್ ಅವರ ವಿರುದ್ಧ ಕಣಕ್ಕಿಳಿಯುವ ಆಸಕ್ತಿ ತೋರಲು ದೊಡ್ಡ ಕಾರಣವೂ ಇದೆ. ಪ್ರದೀಪ್ ಈಶ್ವರ್ ಕೂಡಾ ಡಾ. ಸುಧಾಕರ್ ಅವರ ಸ್ವಗ್ರಾಮ ಪೆರೇಸಂದ್ರವರೇ ಆಗಿದ್ದಾರೆ. ಅವರಿಬ್ಬರ ನಡುವೆ ಏನೋ ವೈಮನಸ್ಸು ಬೆಳೆದು ಸಚಿವ ಸುಧಾಕರ್ ಕಿರುಕುಳದಿಂದ ಪ್ರದೀಪ್ ಈಶ್ವರ್ ಜೈಲು ಸೇರಿದ್ದರು ಎನ್ನಲಾಗಿದೆ. ಸುಧಾಕರ್ ಕಾಟಕ್ಕೆ ಬೇಸತ್ತು ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಪರಿಶ್ರಮ ನೀಟ್ ಅಕಾಡೆಮಿ ಸ್ಥಾಪಿಸಿ ಸಾಕಷ್ಟು ಹೆಸರು ಸಂಪಾದಿಸಿದ್ದು ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ.
ಪ್ರದೀಪ್ ಈಶ್ವರ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಪ್ಲ್ಯಾನ್ ಹಿಂದೆ ಇನ್ನೊಂದು ತಂತ್ರವೂ ಇದೆ. ಪ್ರದೀಪ್ ಅವರು ಬಲಿಜ ಸಮುದಾಯದವರು. ಚಿಕ್ಕಬಳ್ಳಾಪುರದಲ್ಲಿ ಬಲಿಜ ಮತದಾರರ ಸಂಖ್ಯೆಯೂ ದೊಡ್ಡದಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಿದೆ ಎನ್ನಲಾಗಿದೆ.
ಇದನ್ನೂ ಓದಿ : Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್?