ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆಗಿರುವ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಮಹತ್ವದ ನಿರ್ಧಾರ ಮಾಡಿತ್ತು. ಇದರಿಂದ ಯಾವುದೇ ಬಂಡಾಯ ಇರಲಾರದು ಎಂದು ಅದು ಭಾವಿಸಿತ್ತು. ಆದರೆ, ಹಿಂದೂ ಹೋರಾಟಗಾರರಿಗೆ ಮಣೆ ನೀಡಬೇಕು ಎಂದು ಆಗ್ರಹಿಸುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಸಿಡಿದೆದ್ದಿದ್ದಾರೆ.
ಬುಧವಾರ ಸಂಜೆ ಪುತ್ತೂರಿನಲ್ಲಿ ಟಿಕೆಟ್ ವಂಚಿತರಾದ ಅರುಣ್ ಕುಮಾರ್ ಪುತ್ತಿಲ ಅವರ ಅಭಿಮಾನಿಗಳು ಸಾಲ್ಮರ ಕೊಟೇಚಾ ಹಾಲ್ ನಲ್ಲಿ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಭೆ ಆಯೋಜಿಸಿದ್ದರು. ಇದರಲ್ಲಿ ಅರುಣ್ ಪುತ್ತಿಲ ಸ್ಪರ್ಧೆಯ ಅನಿವಾರ್ಯತೆಯ ಬಗ್ಗೆ ಚರ್ಚೆ ಆಯಿತು. ಸಭೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದು ಬಿಜೆಪಿಯ ಕಣ್ಣು ಕೆಂಪಾಗುವಂತೆ ಮಾಡಿದೆ. ಎರಡು ದಿನದಲ್ಲಿ ಮುಂದಿನ ನಿರ್ಧಾರ ತಿಳಿಸುವುದಾಗಿ ಪುತ್ತಿಲ ಹೇಳಿದ್ದಾರೆ.
ಅರುಣ್ ಪುತ್ತಿಲ ಏನು ಹೇಳಿದರು?
ಸಭೆಯಲ್ಲಿ ಮಾತನಾಡಿದ ಟಿಕೆಟ್ ಆಕಾಂಕ್ಷಿ, ಹಿಂದು ಸಂಘಟನೆಗಳ ಮುಖಂಡ ಅರುಣ್ ಪುತ್ತಿಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಜ್ವರ ಶುರುವಾಗಿದ್ದು, ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಯೋಚನೆಯಡಿ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ನಡೆಯಬೇಕಿತ್ತು. ಆದರೆ ಕಾರ್ಯಕರ್ತರ ಧ್ವನಿಯ ವಿರುದ್ಧವಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೊರಟಿರುವುದು ವಿಷಾದನೀಯ ಎಂದರು.
ʻʻಹಿಂದೂ ಧರ್ಮದ ರಕ್ಷಣೆಗಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುವವರು, ಹಿಂದೂಗಳ ಮೇಲಿನ ಕೇಸುಗಳನ್ನು ತೆಗೆಯುವ, ಮತಾಂತರ, ಲೌವ್ ಜಿಹಾದಿ, ಗೋವಧೆ ಮುಂತಾದವುಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುವ, ಕಾರ್ಯಕರ್ತರನ್ನು ತುಳಿಯದ ಅಭ್ಯರ್ಥಿ ಪುತ್ತೂರು ವಿಧಾನಸಭಾ ಅಭ್ಯರ್ಥಿಯಾಗಿರಬೇಕು ಎಂಬ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರ ಆಕಾಂಕ್ಷೆ ಮೇರೆಗೆ ನಾನು ಈ ಬಾರಿ ಟಿಕೆಟ್ ಆಕಾಂಕ್ಷಿ ಆಗಿದ್ದೆ ಹೊರತು ಬೇರೆ ಯಾವುದೇ ದುರುದ್ದೇಶಕ್ಕೆ ಅಲ್ಲʼʼ ಎಂದು ಸ್ಪಷ್ಟನೆ ನೀಡಿದ ಅವರು, ಮುಂದಿ ಎರಡು ದಿನಗಳಲ್ಲಿ ನಮ್ಮ ಯೋಚನೆಯನ್ನು ತಿಳಿಸಲಿದ್ದೇವೆ ಎಂದರು. ಸಾಕಾರಗೊಳ್ಳಲಿದೆ ಎಂದು ಅವರು ತಿಳಿಸಿದರು.
ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಸಮಾಜದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಹಿಂದುತ್ವದ ಶಕ್ತಿ ಏನು ಎಂಬುದನ್ನು ಯೋಚನೆ ಮಾಡಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅರುಣ್ ಕುಮಾರ್ ಪುತ್ತಿಲರ ಜತೆ ನಾವಿದ್ದೇವೆ. ಈ ಮೂಲಕ ಹಿಂದುತ್ವ ಏನು ಎಂಬುದನ್ನು ತೋರಿಸಬೇಕಾಗಿದೆ ಎಂದು ಹೇಳಿದರು. ಸಭೆಯಲ್ಲಿ ಹಿಂದೂ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮಠಂದೂರು ಮನೆಗೆ ಬಂದವರಿಗೆ ತರಾಟೆ
ಬುಧವಾರ ಸಂಜೆ ಸಂಜೀವ ಮಠಂದೂರು ಅವರ ಮನೆಗಾಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಕ್ಯಾ. ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಘಟನೆ ನಡೆಯಿತು.
ಮನೆಗೆ ಆಗಮಿಸುತ್ತಿದ್ದಂತೆ ದಾರಿಮಧ್ಯವೇ ತಡೆದ ಕಾರ್ಯಕರ್ತರು, ತಮ್ಮ ಆಕ್ರೋಶ ಹೊರಗೆಡವಿದರು. ಸಂಜೀವ ಮಠಂದೂರು ಅವರನ್ನು ಕಡೆಗಣಿಸಲು ಕಾರಣವೇನು ಎಂದು ಪ್ರಶ್ನಿಸಿದ ಕಾರ್ಯಕರ್ತರು, ಹಾಗಾದರೆ ಮಂಡಲ, ಜಿಲ್ಲೆಯ ಪದಾಧಿಕಾರಿಗಳ ನಿರ್ಣಯಕ್ಕೆ ಬೆಲೆ ಇಲ್ಲವೇ? ಬೆಲೆ ಇಲ್ಲ ಎಂದಾದರೆ ನೀವು ಆ ಹುದ್ದೆಯಲ್ಲಿ ಇರುವುದಾದರೂ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರಾಮಾಣಿಕವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈಗ ಅವರನ್ನು ಕಡೆಗಣಿಸುವುದು ಎಂದಾದರೆ, ಇದರ ಅರ್ಥವೇನು? ಪ್ರಾಮಾಣಿಕರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ ಎಂದಾಯಿತು. ನಾವು ಬಿಜೆಪಿ ಪರವಾಗಿ ಕೆಲಸವೇ ಮಾಡುವುದಿಲ್ಲ. ನೀವೇ ಪ್ರಚಾರ ಕಾರ್ಯ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ ಎಂದು ತಮ್ಮ ಅಸಹನೆ ಹೊರಗೆಡವಿದರು.
ಪುತ್ತೂರು ಬಿಜೆಪಿಯ ಕಾರ್ಯಕರ್ತರೆಂದರೆ ಒಂದು ಕುಟುಂಬದಂತಿದ್ದೇವೆ. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ವರಿಷ್ಠರು ಪ್ರಾಮಾಣಿಕರನ್ನು ಕಡೆಗಣಿಸುವುದಾದರೆ, ನಾವು ಕೆಲಸ ಮಾಡುವುದಾದರೂ ಯಾಕಾಗಿ. ಇದುವರೆಗೆ ಭೇಟಿ ನೀಡದವರು ಈಗ ಯಾಕಾಗಿ ಭೇಟಿ ನೀಡುವುದು ಎಂದು ಪ್ರಶ್ನಿಸಿದರು.