ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ಈ ಬಾರಿ ಹಲವು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. 2008ರ ಬಳಿಕ ಮತ್ತೆ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಮತದಾರನ ತೀರ್ಮಾನದ ಬಗ್ಗೆ ಕುತೂಹಲ ಮೂಡಿಸಿದೆ. ಈ ಕುತೂಹಲಕ್ಕೆ ಕಾರಣ ಮೂರೂ ಸ್ಪರ್ಧಿಗಳೂ ಮೂಲ ಬಿಜೆಪಿಗರು ಅನ್ನುವುದು!
ಇಲ್ಲಿ ಬಿಜೆಪಿ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲಿಗೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಿದೆ. ಅವರ ವಿರುದ್ಧ ಕಣಕ್ಕಿಳಿಯಲು ಕಾಂಗ್ರೆಸ್ ಟಿಕೆಟ್ ಪಡೆದಿರುವುದು ಮಾಜಿ ಬಿಜೆಪಿಗ ಅಶೋಕ್ ರೈ, ಬಿಜೆಪಿ ವಿರುದ್ಧ ಬಂಡಾಯವಾಗಿ ಕಣಕ್ಕಿದಿರುವುದು ಹಿಂದು ಸಂಘಟನೆಗಳ ನಾಯಕ ಅರುಣ್ ಕುಮಾರ್ ಪುತ್ತಿಲ.
ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಶಕ್ತಿ ಕೇಂದ್ರ. ದಿವಂಗತ ರಾಮ ಭಟ್ ಅವರ ಮೂಲಕ ವಿಧಾನ ಸೌಧದಲ್ಲಿ ಮೊದಲ ಬಿಜೆಪಿ ಶಾಸಕರನ್ನು ಕ್ಷೇತ್ರ ಇದು. ಆದರೆ ಈ ಕ್ಷೇತ್ರದಲ್ಲೇ ಇಂದು ಬಿಜೆಪಿ ಒಡೆದ ಮನೆಯಾಗಿದೆ ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರ ತವರಿನಲ್ಲೇ ಬಿಜೆಪಿಯಲ್ಲಿ ಬಂಡಾಯವೆದ್ದಿದೆ. ಹೀಗಾಗಿ ಪಕ್ಷದ ಕಟ್ಟಾ ಬೆಂಬಲಿಗರಾಗಿದ್ದವರು ಇಂದು ಬಿಜೆಪಿಗೇ ಸವಾಲೆಸೆದು ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಹಲವಾರು ವರ್ಷಗಳಿಂದ ಪಕ್ಷಕ್ಕೆ ಸಾಕಷ್ಟು ತ್ಯಾಗ ಮಾಡಿರೋ ಮುಂಚೂಣಿ ನಾಯಕರೇ ಈಗ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಲು ಹೊರಟಿದ್ದಾರೆ!
ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಆಪ್ತ ಅಶೋಕ್ ರೈ ಬಿಜೆಪಿ ನಿರ್ಲಕ್ಷ್ಯದ ವಿರುದ್ಧ ಅಸಮಧಾನಗೊಂಡು ಕೈ ಪಾಳಯ ಸೇರಿಕೊಂಡಿದ್ದಾರೆ. ಕೈ ಪಾಳಾಯದಲ್ಲಿ ವಿರೋಧ ವ್ಯಕ್ತವಾದರೂ ಕೊನೆಗೂ ಟಿಕೆಟ್ ಗಿಟ್ಟಿಸಿಕೊಂಡ ಅಶೋಕ್ ಕುಮಾರ್ ರೈ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಹಲವಾರು ವರ್ಷಗಳಿಂದ ಪಕ್ಷಕ್ಕೆ ಬೇಕಾದುದನ್ನೆಲ್ಲ ಕೊಟ್ಟರೂ ಕೊನೆಗೆ ನನಗೆ ವಂಚಿಸಿದ ಕಾರಣಕ್ಕೆ ಕೈ ಹಿಡಿಯಬೇಕಾಯಿತು. ಆದರೆ ಇಲ್ಲಿ ನನ್ನ ಕೈ ಬಿಡದ ನಾಯಕರು ನನಗೆ ಅವಕಾಶ ಕೊಟ್ಟು ಗೌರವಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕ್ಷೇತ್ರದಲ್ಲಿ ಗೆಲುವು ತಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸುವುದು ಖಂಡಿ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಬೆಳ್ಳಿಪ್ಪಾಡಿ.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೇಟ್ ಸಿಗೋದು ಡೌಟ್ ಅನ್ನೋದು ಮೊದಲೇ ಗೊತ್ತಿತ್ತು. ಹೀಗಾಗಿ ಕಳೆದ ಮೂವತ್ತು ವರ್ಷಗಳಿಂದ ಹಿಂದೂ ಸಂಘಟನೆಯಲ್ಲಿದ್ದ ಅರುಣ್ ಕುಮಾರ್ ಪುತ್ತಿಲ ಟಿಕೆಟ್ ರೇಸ್ ನಲ್ಲಿದ್ದರು. ಅರುಣ್ ಕುಮಾರ್ ಜೊತೆ ಪುತ್ತೂರಿನಲ್ಲೆ ಬಿಜೆಪಿಗಾಗಿ ದುಡಿದ ಕೆಲ ನಾಯಕರೂ ಆಕಾಂಕ್ಷಿ ಪಟ್ಟಿಯಲ್ಲಿ ಇದ್ದರು. ಆದ್ರೆ ಬಿಜೆಪಿ, ಕ್ಷೇತ್ರದ ಅಭ್ಯರ್ಥಿ ಆಗಿ ಸುಳ್ಯ ಕ್ಷೇತ್ರದ ಆಶಾ ತಿಮ್ಮಪ್ಪ ಅವರ ಹೆಸರು ಘೊಷಣೆ ಮಾಡಿತ್ತು. ಈ ವಿಚಾರ ಪುತ್ತೂರು ಬಿಜೆಪಿಯನ್ನು ಬಂಡಾಯದತ್ತ ದೂಡಿದೆ
ಟಿಕೇಟ್ ನಿರೀಕ್ಷೆಯಲ್ಲಿದ್ದ ಅರುಣ್ ಕುಮಾರ್ ಪುತ್ತಿಲ ಈಗ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೆ ಇಳಿದಿದ್ದಾರೆ. ಇವರ ಜೊತೆ ಇತರ ಆಕಾಂಕ್ಷಿಗಳೂ ಪುತ್ತಿಲ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇದುವರೆಗೂ ಹಿಂದುತ್ವದ ಆಧಾರದಲ್ಲೇ ಇಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಅದು ನಮ್ಮಂತಹ ಹಿಂದುತ್ವ ಹೋರಾಟಗಾರರ ಪ್ರಯತ್ನದಿಂದ ಸಿಕ್ಕ ಗೆಲುವು. ಹಿಂದುತ್ವ ಮರೆಯುತ್ತಿರುವ ಬಿಜೆಪಿಗೆ ಹಿಂದುತ್ವದ ಆದಾರದಲ್ಲೆ ಗೆಲುವು ಸಾಧಿಸಿ ಬೆಂಬಲ ನೀಡ್ತೇನೆ ಅನ್ನುವುದು ಅರುಣ್ ಪುತ್ತಿಲ ಅವರ ಸ್ಪರ್ಧೆಯ ಹಿಂದೆ ಇರುವ ಅಜೆಂಡಾ.
ಬಿಜೆಪಿಯ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ 80ರ ದಶಕದಿಂದ ಬಿಜೆಪಿಯಲ್ಲಿ ಸಕ್ರಿಯ ರಾಜಕಾರಣದಲ್ಲಿ ಇದ್ದವರು. ಗ್ರಾಮ ಪಂಚಾಯತ್ ನಿಂದ ಆರಂಭಗೊಂಡು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಸದ್ಯ ಬಿಜೆಪಿ ಪಕ್ಷದಲ್ಲೇ ಇವರ ಅಭ್ಯರ್ಥಿತನದ ಬಗ್ಗೆ ಅಪಸ್ವರ ಇದೆ. ಬಿಜೆಪಿ ಕಟ್ಟಾಳುಗಳು ಪಕ್ಷಕ್ಕಾಗಿ ಮತ ಚಲಾಯಿಸಿದರೂ, ಹಿಂದುತ್ವ ಹಾಗೂ ಟ್ರಸ್ಟ್ ಮೂಲಕ ಸಹಾಯ ಹಸ್ತ ನೀಡಿದ ಅಶೋಕ್ ರೈ ಹಾಗೂ ಅರುಣ್ ಪುತ್ತಿಲ ನಡುವೆ ಮತ ವಿಭಜನೆಯ ಎಲ್ಲಾ ಸಾಧ್ಯತೆ ಇದೆ. ಹೀಗಾಗಿ ಪುತ್ತೂರಿನ ಮೂರು ಬಿಜೆಪಿಗರ ನಡುವೆ ಗೆಲ್ಲೊದ್ಯಾರು ಅನ್ನುವುದೇ ಮತದಾರನಿಗಿರುವ ಕುತೂಹಲ.
ಇದನ್ನೂ ಓದಿ : Karnataka Elections : ಸುಳ್ಯ ಅಸೆಂಬ್ಲಿ ಕಣದಲ್ಲಿ ಈ ಬಾರಿ ಇಬ್ಬರು ಮಹಿಳೆಯರು; ಪುತ್ತೂರು ಬಿಜೆಪಿ ಅಭ್ಯರ್ಥಿ ಕೂಡಾ ಸುಳ್ಯದವರೆ!