Site icon Vistara News

Karnataka Elections : ಚಿತ್ರದುರ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತ ರಘು ಆಚಾರ್‌ ಜೆಡಿಎಸ್‌ ಸೇರ್ಪಡೆ?

Raghu Achar- Veerendra puppy

#image_title

ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ (karnataka Elections) ಚಿತ್ರದುರ್ಗದ ಕಾಂಗ್ರೆಸ್‌ ಟಿಕೆಟ್‌ ವಂಚಿತರಾದ ಮಾಜಿ ಎಂಎಲ್‌ಸಿ ರಘು ಆಚಾರ್‌ ಅವರ ಬಂಡಾಯವನ್ನು ನಿವಾರಿಸುವ ಪ್ರಯತ್ನ ವಿಫಲವಾಗಿದ್ದು, ಅವರು ಜೆಡಿಎಸ್‌ ಸೇರಲು ಪ್ರಯತ್ನ ಆರಂಭಿಸಿದ್ದಾರೆ.

ಎರಡನೇ ಪಟ್ಟಿಯಲ್ಲಿ ಚಿತ್ರದುರ್ಗದ ಟಿಕೆಟ್‌ ಪ್ರಕಟವಾಗಿದ್ದು, ಅದರಲ್ಲಿ ಚಿತ್ರದುರ್ಗಕ್ಕೆ ವೀರೇಂದ್ರ ಪಪ್ಪಿ ಅವರ ಹೆಸರಿತ್ತು. ಇದರಿಂದ ಕೆರಳಿದ ರಘು ಆಚಾರ್‌ ಅವರು ʻನಾನು ದುರ್ಗದಿಂದ ಸ್ಪರ್ಧೆ ಮಾಡೋದು ಖಚಿತ. ನಾನು ಏಪ್ರಿಲ್‌ 17ಕ್ಕೆ ನಾಮಪತ್ರ ಸಲ್ಲಿಸುವುದು ಪಕ್ಕಾʼʼ ಎಂದು ಘೋಷಿಸಿದ್ದರು. ಟಿಕೆಟ್‌ ಪಡೆದಿರುವ ವೀರೇಂದ್ರ ಪಪ್ಪಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿರುವ ರಘು ಆಚಾರ್‌ ಅವರು, ಕಾಂಗ್ರೆಸ್‌ ಮುಖಂಡರ ಮೇಲೆ ಕಿಡಿ ಕಾರಿದ್ದರು

ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ವೀರೇಂದ್ರ ಪಪ್ಪಿ ಅವರು ರಘು ಆಚಾರ್‌ ಅವರ ಮನೆಗೆ ಭೇಟಿ ನೀಡಿದ್ದು, ಈ ವೇಳೆ ರಘು ಆಚಾರ್‌ ಶುಭವಾಗಲಿ ಎಂದೇ ಹಾರೈಸಿದ್ದಾರೆ. ಆದರೆ, ಸ್ಪರ್ಧೆ ಮಾಡುವ ವಿಚಾರದಲ್ಲಿ ಮುಲಾಜಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಜಿಲ್ಲಾದ್ಯಕ್ಷ ಎಂ.ಕೆ. ತಾಜಪೀರ್, ಕೆ.ಸಿ.ವಿರೇಂದ್ರ ಪಪ್ಪಿ ಅವರು ರಘು ಆಚಾರ್‌ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ, ತಾಜಪೀರ್‌ ಅವರನ್ನು ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು. ಕಾಂಗ್ರೆಸ್ ಮುಖಂಡರ‌ ಭೇಟಿ ಬಳಿಕ ಹೇಳಿಕೆ ನೀಡಿದ ರಘು ಆಚಾರ್‌, ʻʻಸ್ನೇಹಿತನಾಗಿ ಕೆ.ಸಿ.ವಿರೇಂದ್ರ ಪಪ್ಪಿಗೆ ಶುಭ ಹಾರೈಸಿದ್ದೇನೆ. ಸ್ನೇಹ ಸಂಬಂಧ ಬೇರೆ, ರಾಜಕೀಯ ಬೇರೆʼʼ ಎಂದರು.

ʻʻʻಎ.17ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ರಾಜಕೀಯವಾಗಿ ಕೆ.ಸಿ.ವಿರೇಂದ್ರ ಜತೆ ಜಿದ್ದಾಜಿದ್ದಿಯಿದೆʼʼ ಎಂದ ಅವರು ಮುಂದಿನ ನಡೆಯ ಬಗ್ಗೆ ಬೆಂಬಲಿಗರ ಜತೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.

ಸಿ.ಎಂ. ಇಬ್ರಾಹಿಂ ಅವರ ಜತೆ ಮಾತುಕತೆ

ಈ ನಡುವೆ ರಘು ಆಚಾರ್‌ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಆಗ ಅವರು ಕುಮಾರಸ್ವಾಮಿ ಅವರ ಜತೆ ಮಾತನಾಡುವಂತೆ ಸಲಹೆ ನೀಡಿದ್ದಾರೆ. ಅವರಿಬ್ಬರ ಮಾತುಕತೆಯ ಆಡಿಯೊ ವೈರಲ್‌ ಆಗಿದೆ.

ಈ ನಡುವೆ, ಜೆಡಿಎಸ್‌ ಮುಖಂಡ ಶರವಣ ಅವರು ಶುಕ್ರವಾರ ಸಂಜೆಯೇ ಚಿತ್ರದುರ್ಗ ಜೆಡಿಎಸ್‌ ಕಚೇರಿಗೆ ಆಗಮಿಸುತ್ತಿದ್ದು ಪಕ್ಷದ ಸಭೆಯ ಬಳಿಕ ರಘು ಅಚಾರ್‌ ಅವರ ಮನೆಗೆ ಭೇಟಿ ನೀಡುವ ಸಾಧ್ಯತೆ ಇದೆ.

ಕತ್ತು ಕೊಯ್ದರು ಎಂದ ರಘು ಆಚಾರ್‌

ತಮಗೆ ಟಿಕೆಟ್‌ ಸಿಗದಿರುವ ಬಗ್ಗೆ ಕಾಂಗ್ರೆಸ್‌ ನಾಯಕರ ಮೇಲೆ ಸಿಟ್ಟಾಗಿರುವ ರಘು ಆಚಾರ್‌ ಅವರು, ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ವಿಧಾನ ಪರಿಷತ್‌ ಸದಸ್ಯ ಆಗೋದು ಬೇಡ. ವಿಧಾನಸಭೆಗೆ ಸ್ಪರ್ಧೆ ಮಾಡಿ ಎಂದು ಹೇಳಿದ್ದರು. ಹೀಗೆ ಹೇಳಿಕೊಂಡು ಬಂದು ಅರ್ಧ ದಾರಿಯಲ್ಲಿ ನನ್ನ ಕತ್ತು ಕೊಯ್ದಿದ್ದಾರೆ. ನನಗೆ ಜಾತಿ ಇಲ್ಲವೆಂಬ ಸಣ್ಣ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಈ ಜಿಲ್ಲೆಯ ಜನ ಇದಕ್ಕೆ ಉತ್ತರಿಸುತ್ತಾರೆ. ನನಗೊಬ್ಬನಿಗೆ ಅಲ್ಲ, ಗೋಪಿಕೃಷ್ಣನಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳಿದ್ದರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. 197 ಸಣ್ಣ ಸಮುದಾಯಗಳಿಗೆ ಕಾಂಗ್ರೆಸ್ ಒಂದು ಸ್ಥಾನವನ್ನೂ ನೀಡಿಲ್ಲ. ಆ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಗೌರವ ಇದೆಯೋ ಇಲ್ಲವೊ ಗೊತ್ತಿಲ್ಲ. ಸಾಮಾಜಿಕ ನ್ಯಾಯ ಮರೆತು ಕಾಂಗ್ರೆಸ್ ತೀರ್ಮಾನ ತೆಗೆದುಕೊಂಡಿದೆ. ಇಡೀ ರಾಜ್ಯ ಸುತ್ತುತ್ತೇನೆ. ವಿಶ್ವಕರ್ಮ ಸಮಾಜದವರು ಕಾಂಗ್ರೆಸ್‌ಗೆ ಮತ ಹಾಕದಂತೆ ಹೋರಾಟ ಮಾಡುತ್ತೇನೆ. ಮಾರ್ಚ್ 17ರಂದು ಚಿತ್ರದುರ್ಗದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ರಘು ಆಚಾರ್‌ ತಿಳಿಸಿದ್ದರು.

ಇದನ್ನೂ ಓದಿ : BJP Karnataka: ದೆಹಲಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಟಿಕೆಟ್‌ ಆಯ್ಕೆ ಪೂರ್ವಭಾವಿ ಸಭೆ ರದ್ದು

Exit mobile version