Site icon Vistara News

Karnataka Elections : ಕಾಂಗ್ರೆಸ್‌ 2ನೇ ಪಟ್ಟಿ ಏ. 5ಕ್ಕೆ? ರಾಹುಲ್‌ ಗಾಂಧಿ ಕೋಲಾರ ಪ್ರತಿಭಟನೆ ಏಪ್ರಿಲ್‌ 5ರ ಬದಲು ಏ.9

Cnogress Abhiyana

Congress party news

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗಾಗಿ (Karnataka Elections) 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಮುನ್ನಡೆಯಲ್ಲಿರುವ ಕಾಂಗ್ರೆಸ್‌ ತನ್ನ ಎರಡನೇ ಪಟ್ಟಿಯನ್ನು ಏಪ್ರಿಲ್‌ 5 ಅಥವಾ 6ರಂದು ಪ್ರಕಟಿಸುವ ಸಾಧ್ಯತೆ ಇದೆ. ಈ ನಡುವೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಕೋಲಾರ ಭೇಟಿ ಏಪ್ರಿಲ್‌ ಐದರ ಬದಲಾಗಿ ಏಪ್ರಿಲ್‌ 9ಕ್ಕೆ ಮರುನಿಗದಿಯಾಗಿದೆ.

ಗುರುವಾರ ತಡರಾತ್ರಿವರೆಗೆ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಎರಡನೇ ಹಂತದ ಟಿಕೆಟ್ ಘೋಷಣೆಯ ಬಗ್ಗೆ ಭಾರಿ ಚರ್ಚೆ ನಡೆಯಿತು. ಇನ್ನು 100 ಕ್ಷೇತ್ರಗಳ ಟಿಕೆಟ್‌ ಘೋಷಣೆ ಆಗಬೇಕಾಗಿದೆ. ಇದೀಗ ಸ್ಕ್ರೀನಿಂಗ್‌ 60-62 ಕ್ಷೇತ್ರಗಳ ಟಿಕೆಟ್‌ ಬಹುತೇಕ ಅಂತಿಮಗೊಳಿಸಿದೆ. ಇದರಲ್ಲಿ 25ರಿಂದ 30 ಕ್ಷೇತ್ರಗಳಿಗೆ ಒಂದೇ ಹೆಸರು ಫೈನಲ್‌ ಮಾಡಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಎರಡು ಹೆಸರು ಶಿಫಾರಸು ಆಗಲಿದೆ. ಎರಡು ಹೆಸರುಗಳಿರುವ ಕ್ಷೇತ್ರಗಳ ಕುರಿತ ತೀರ್ಮಾನವನ್ನು ಹೈಕಮಾಂಡ್ ಗೆ ಬಿಡಲು ತೀರ್ಮಾನಿಸಲಾಗಿದೆ. ಏಪ್ರಿಲ್ 5 ಅಥವಾ 6 ರಂದು ಟಿಕೆಟ್ ಸೆಕೆಂಡ್ ಲಿಸ್ಟ್ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ.

ರಾಹುಲ್‌ ಗಾಂಧಿ ಭೇಟಿಯ ಪೂರ್ವಭಾವಿ ಸಭೆ

ಈ ನಡುವೆ ಏಪ್ರಿಲ್‌ 5ರಂದು ಕೋಲಾರಕ್ಕೆ ರಾಹುಲ್‌ ಗಾಂಧಿ ಭೇಟಿಯ ಕುರಿತು ಚರ್ಚೆ ನಡೆಸಲು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿ‌ಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪಸ್ರಾದ್, ಪರಮೇಶ್ವರ್, ಕೆಪಿಸಿಸಿ ಕಾರ್ಯಧ್ಯಕ್ಷರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರಿನ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವ ಅನರ್ಹಗೊಳ್ಳುವುದಕ್ಕೆ ಕಾರಣವಾದ ವಿವಾದಿತ ಭಾಷಣ ನಡೆದ ಕೋಲಾರದ ಅದೇ ಮೈದಾನದಿಂದ ಪ್ರತಿಭಟನೆಯ ಕೂಗನ್ನು ಎಬ್ಬಿಸಲು, ಆ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಅದರ ಲಾಭ ಎತ್ತಲು ಪ್ರಯತ್ನಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಯಶಸ್ವಿಗೊಳಿಸಲು ಬೇಕಾದ ಯೋಜನೆಗಳು, ಜನರನ್ನು ಸೇರಿಸುವುದು, ಕಾರ್ಯಕ್ರಮದ ಸ್ವರೂಪ ಸೇರಿದಂತೆ ಎಲ್ಲ ವಿಚಾರಗಳ ಚರ್ಚೆಗೆ ಸಭೆಯನ್ನು ಕರೆಯಲಾಗಿತ್ತು.

ಅದರ ನಡುವೆಯೇ ರಾಹುಲ್‌ ಗಾಂಧಿ ಅವರ ಕೋಲಾರ ಭೇಟಿ ಏಪ್ರಿಲ್‌ 5ಕ್ಕೆ ಬದಲಾಗಿ 9ಕ್ಕೆ ಮರುನಿಗದಿಯಾಗಿದ್ದರ ಮಾಹಿತಿ ಬಂದಿದೆ. ಹೀಗಾಗಿ ಸಭೆಯನ್ನು ಅರ್ಧದಲ್ಲೇ ಮೊಟಕುಗೊಳಿಸಲಾಯಿತು.

ನಮ್ಮ ಮನೆಯೇ ನಿಮ್ಮ ಮನೆ ಅಭಿಯಾನ

ರಾಹುಲ್‌ ಗಾಂಧಿ ಅವರನ್ನು ದಿಲ್ಲಿಯ ಸರ್ಕಾರಿ ಬಂಗಲೆಯಿಂದ ಹೊರಹೋಗುವಂತೆ ಸೂಚಿಸಿದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್‌ ಶಾಸಕರು ಬೆಂಗಳೂರಿನಲ್ಲಿ ವಿನೂತನ ಅಭಿಯಾನ ನಡೆಸಿದರು.

ʻʻನಮ್ಮ ಮನೆಯೇ ನಿಮ್ಮ ಮನೆ ಅಭಿಯಾನʼʼ ಆರಂಭಿಸಿರುವ ಕಾಂಗ್ರೆಸ್ ಶಾಸಕರು ರಾಹುಲ್ ಗಾಂಧಿ ಅವರನ್ನು ತಮ್ಮ ತಮ್ಮ ನಿವಾಸಕ್ಕೆ ಆಹ್ವಾನ‌ ನೀಡುತ್ತಿರುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.

ಇದನ್ನೂ ಓದಿ :Karnataka Election: ಯಡಿಯೂರಪ್ಪ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಿ ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್‌: ಕಾಂಗ್ರೆಸ್‌ ಆರೋಪ

Exit mobile version