ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರು ಹೋದಲ್ಲೆಲ್ಲ ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಕರ್ನಾಟಕಕ್ಕೆ ಬಂದಾಗ ಯಾಕೆ ಮೌನವಾಗುತ್ತಾರೆ? ಕರ್ನಾಟಕದಲ್ಲಿ (Karnataka Elections) ಯಾವುದೇ ಕಾಮಗಾರಿ ಮಾಡಬೇಕಾದರೂ ಗುತ್ತಿಗೆದಾರರು 40% ಕಮಿಷನ್ ಕೊಡಲೇಬೇಕಾದ ಪರಿಸ್ಥಿತಿ ಇದೆ ಎಂದು ಗುತ್ತಿಗೆದಾರರ ಸಂಘವೇ ನೇರವಾಗಿ ಪ್ರಧಾನಿಗಳಿಗೆ ಪತ್ರ ಬರೆದರೂ ಯಾಕೆ ಮೋದಿಯವರು ಮೌನವಾಗಿದ್ದಾರೆ?- ಹೀಗೆಂದು ನೇರವಾಗಿ ಪ್ರಶ್ನಿಸಿದರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi).
ಬೀದರ್ ಜಿಲ್ಲೆಯ ಭಾಲ್ಕಿ ಮತ್ತು ಹುಮನಾಬಾದ್‌ನಲ್ಲಿ ನಡೆದ ಜನ ಕ್ರಾಂತಿ ಸಮಾವೇಶದಲ್ಲಿ ಅವರು ಮಾತನಾಡಿ, ಮೋದಿಯವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ರಾಜ್ಯದಲ್ಲಿ ನಡೆದ ಪಿಎಸ್‌ಐ ಹಗರಣ, ಅಸಿಸ್ಟೆಂಟ್ ಪ್ರೊಫೆಸರ್ ನೇಮಕಾತಿ ಹಗರಣ, ಜೆ.ಇಗಳ ನೇಮಕಾತಿ ಹಗರಣ ಮತ್ತು ಮಾಡಾಳ್ ವಿರೂಪಾಕ್ಷಪ್ಪ ಅವರು ಭಾಗಿಯಾಗಿದ್ದಾರೆ ಎನ್ನಲಾದ ಮೈಸೂರ್ ಸ್ಯಾಂಡಲ್ ಸೋಪ್ ಹಗರಣದ ಉಲ್ಲೇಖ ಮಾಡಿದರು.
40% ಸರಕಾರಕ್ಕೆ 40 ಸೀಟುಗಳು ಕೂಡಾ ಬರಲ್ಲ!
40% ಕಮಿಷನ್‌ನಿಂದಲೇ ಬದುಕುತ್ತಿರುವ ಬಿಜೆಪಿ ಸರ್ಕಾರಕ್ಕೆ ಈ ಬಾರಿ 40 ಸ್ಥಾನಗಳು ಕೂಡಾ ಲಭಿಸುವುದಿಲ್ಲ ಎಂದು ರಾಹುಲ್ ಹೇಳಿದರು. ʻʻಕಳೆದ ಚುನಾವಣೆಯಲ್ಲಿ ನರೇಂದ್ರ ಮೋದಿ 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ಜಮೆ ಮಾಡಬಹುದು ಎಂದರು, ಕಾಳಧನ ತರುತ್ತೇನೆ ಎಂದರು. ಉದ್ಯೋಗದ ಭರವಸೆ ನೀಡಿದರು. ಆದರೆ ಒಂದಾದರೂ ಈಡೇರಿಸಿದ್ದಾರಾ? 40% ಕಮಿಷನ್ ಬಗ್ಗೆ ಮಾತನಾಡಿದ್ದಾರಾ? ಎಂದು ರಾಹುಲ್ ಪ್ರಶ್ನಿಸಿದರು.
ಇದರ ಜತೆಗೆ ಎಂದಿನಂತೆ ಅದಾನಿ ಪ್ರಕರಣವನ್ನು ಉಲ್ಲೇಖಿಸಿ ಪ್ರಶ್ನೆಗಳ ಸುರಿಮಳೆ ಸುರಿಸಿದರು. ತನ್ನ ಅನರ್ಹತೆಯ ಬಗ್ಗೆಯೂ ಮಾತನಾಡಿದರು.
ʻʻನಾನು ಮೋದಿ ಅವರನ್ನು ಕೆಲವು ಸರಳ ಪ್ರಶ್ನೆಗಳನ್ನು ಕೇಳಿದ್ದೇನೆ. ಗೌತಮ್ ಅದಾನಿ ಮತ್ತು ನಿಮಗೂ ಇರುವ ಸಂಬಂಧ ಏನು? ದೇಶದ ಎಲ್ಲ ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಅವರ ಕೈಗೇ ಕೊಡಲಾಗುತ್ತಿದೆಯಲ್ಲಾ? ಇದು ಹೇಗೆ ಸಾಧ್ಯ? ಅದಾನಿ ಅವರ ಶೆಲ್ ಕಂಪನಿಗಳಲ್ಲಿ ತೊಡಗಿಸಲಾಗಿರುವ 20000 ಕೋಟಿ ರೂ. ಯಾರದ್ದು? ನಾನು ಈ ಪ್ರಶ್ನೆಗಳನ್ನು ಕೇಳಿದ ಕೂಡಲೇ ಸಂಸತ್ತಿನಲ್ಲಿ ನನ್ನ ಮೈಕ್ ಆಫ್ ಮಾಡಲಾಯಿತು. ಬಳಿಕ ಈಗ ನನ್ನನ್ನು ಸಂಸತ್ತಿನಿಂದಲೇ ಹೊರಗೆ ಅಟ್ಟಲಾಗಿದೆ. ಆದರೆ, ನಾನು ಮಾತು ನಿಲ್ಲಿಸುವುದಿಲ್ಲ. ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲʼʼ ಎಂದು ರಾಹುಲ್ ಹೇಳಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಬಸವಣ್ಣನ ವಿರೋಧಿಗಳು
ʻʻಬೀದರ್ ಬಸವಣ್ಣನವರ ಕರ್ಮಭೂಮಿ. ಇಲ್ಲಿಂದಲೇ ಕ್ರಾಂತಿಯ ಕಹಳೆ ಮೊಳಗಿಸಬೇಕಾಗಿದೆʼʼ ಎಂದು ಹೇಳಿದ ರಾಹುಲ್, ಆರ್ ಎಸ್ ಎಸ್ ಹಾಗೂ ಬಿಜೆಪಿ ದೇಶವನ್ನು ಆಕ್ರಮಣ ಮಾಡಿಕೊಳ್ಳುತ್ತಿವೆ, ಎಂದರು. ಬಿಜೆಪಿ ಮತ್ತು ಆರೆಸ್ಸೆಸ್ ಬಸವ ತತ್ವದ ವಿರೋಧಿಗಳು ಎಂದು ಅವರು ಹೇಳಿದರು.
ಎಷ್ಟು ಮಂದಿ ಒಬಿಸಿಗಳಿದ್ದಾರೆ ಅಂತ ಮೋದಿಗೆ ಗೊತ್ತಾ?
ʻನಾನು ಹಿಂದುಳಿದ ವರ್ಗದವರಿಗೆ ಅವಮಾನ ಮಾಡಿದೆ ಎಂದು ಮೋದಿ ಹೇಳುತ್ತಾರೆ. ನಾನು ಮೋದಿ ಎಂಬ ಹೆಸರು ಬಳಸಿದ್ದಕ್ಕಾಗಿ ನನ್ನನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ. ಆದರೆ, ಒಬಿಸಿಗಳು ಎಷ್ಟು ಇದ್ದಾರೆ ಮೋದಿಗೆ ಗೊತ್ತಿದೆಯಾ? ಒಬಿಸಿಯವರಿಗೆ ರಾಜಕೀಯ, ಆರ್ಥಿಕ ಶಕ್ತಿ ನೀಡಬೇಕು ಎಂದು ಕಾಳಜಿ ತೋರಿಸಿದ್ದಾರಾ? ಅರ್ಥಿಕ ಮತ್ತು ರಾಜಕೀಯ ಶಕ್ತಿ ನೀಡಬೇಕು ಎಂದು ಗಣತಿಯನ್ನು ಬಿಡುಗಡೆ ಮಾಡಬೇಕು. ಅದನ್ನು ಬಿಡುಗಡೆ ಮಾಡಿ ತೋರಿಸಲಿ. ಮೋದಿ ಅಧಿಕಾರಕ್ಕೆ ಬಂದು 9 ವರ್ಷ ಕಳೆದಿದೆ. ಅವರು ಒಬಿಸಿ ಮತ ಪಡೆಯುತ್ತಾರೆಯೇ ಹೊರತು ಅವರಿಗೆ ಆರ್ಥಿಕ ಶಕ್ತಿ ನೀಡುವುದಿಲ್ಲʼʼʼ ಎಂದು ರಾಹುಲ್ ಹೇಳಿದರು.
ʻʻಹಿಂದುಳಿದ ವರ್ಗದ ಜನರಿಗೆ ನೀವೇನು ಮಾಡಿದ್ದೀರಿ ಎಂದು ಮೊದಲು ತಿಳಿಸಿ ಮೋದಿಜೀ. ಒಂಬತ್ತು ವರ್ಷದಲ್ಲಿ ದೇಶದ ಜನರಿಗೆ ಏನು ಮಾಡಿದ್ದೀರಿ ಎಂದು ಮೊದಲು ಜನರ ಮುಂದೆ ಇಡಿ. ನಿಮ್ಮಿಂದ ಆಗಲ್ಲ ಅಂದ್ರೆ ಅಧಿಕಾರದಿಂದ ಕೆಳಗೆ ಇಳಿಯಿರಿ, ನಾವು ಮಾಡಿ ತೊರಿಸುತ್ತೇವೆʼʼ ಎಂದು ಸವಾಲು ಹಾಕಿದರು ರಾಹುಲ್ ಗಾಂಧಿ.
ರಾಹುಲ್ ಗಾಂಧಿ ಅವರು ಸೋಮವಾರ ಮಧ್ಯಾಹ್ನ ಭಾಲ್ಕಿಗೆ ಬಂದು ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಹುಮನಾಬಾದ್‌ಗೆ ತೆರಳಿದರು. ಭಾಲ್ಕಿಯಲ್ಲಿ ಈಶ್ವರ ಖಂಡ್ರೆ, ಹುಮ್ನಾಬಾದ್‌ನಲ್ಲಿ ರಾಜಶೇಖರ್ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದು, ಸೋಮವಾರವೇ ನಾಮಪತ್ರ ಸಲ್ಲಿಸಿದರು. ಎರಡೂ ಕಡೆ ಸಮಾವೇಶದ ಬಳಿಕ ಬೃಹತ್ ರ‍್ಯಾಲಿ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಾಯಿತು.
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮಾಜಿ ಸಚಿವ ರಹೀಂ ಖಾನ್, ಮಾಜಿ ಶಾಸಕ ಅಶೋಕ್ ಖೇಣಿ, ಮಾಜಿ ಎಂಎಲ್ಸಿ ವಿಜಯ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಹುಮ್ನಾಬಾದ ಪಟ್ಟಣದಲ್ಲಿ ಸ್ವೀಟ್ ಸವಿದ ರಾಹುಲ್ ಗಾಂಧಿ
ಹುಮ್ನಾಬಾದ್‌ನ ಎಸ್ ಎಂ ಸ್ವಿಟ್ ಮತ್ತು ಟಿಫಿನ್ ಸೆಂಟರ್‌ಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಅಲ್ಲಿ ಜಾಮೂನು ಸವಿದು ಖುಷಿಪಟ್ಟರು. ಅವರು ಸ್ಪೆಷಲ್ ಗಂಗಾ ಜಮುನಾ ಜಾಮೂನ್ ಕಲಾಕಾನ ಸವಿದರು.
ಹುಮ್ನಾಬಾದ್‌ನ ಹಳೆ ತಹಸೀಲ್ದಾರರ ಕಚೇರಿ ಎದುರುಗಡೆ ಇರುವ ಟಿಫಿನ್ ಸೆಂಟರ್ ಇದಾಗಿದ್ದು, ಸ್ವೀಟ್ ಸವಿದ ಬಳಿಕ ಜಿ ಎಸ್ಟಿ ಬಗ್ಗೆ ವಿಚಾರಿಸಿದರು. ಸ್ವೀಟ್ ತುಂಬಾ ಚೆನ್ನಾಗಿದೆ ಎಂದು ಮಾಲೀಕ ಮೋಹಿನ್ ಅವರಿಗೆ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ, ಅನ್ನಭಾಗ್ಯದ ಅಕ್ಕಿಯ ಪ್ರಮಾಣ ಹತ್ತು ಕೆಜಿಗೇರಲಿದೆ, ನಿರುದ್ಯೋಗ ಭತ್ತೆ ನೀಡುತ್ತೇವೆʼʼ ಎಂದು ಅವರು ಹೇಳಿದರು.
ಇದನ್ನೂ ಓದಿ : Karnataka Elections : ಬಸವಣ್ಣರ ಮಾತು ಮೀರಿ ದುರ್ಜನರ ಸಂಗ ಮಾಡಿದ ಶೆಟ್ಟರ್; ರಾಜೀನಾಮೆಯಿಂದ ಸಮಸ್ಯೆ ಇಲ್ಲ ಎಂದ ಸಿಎಂ