Site icon Vistara News

Karnataka Elections : ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣೆ ಸರಕು: ಸಿದ್ದು, ಬಿಜೆಪಿ ನಡುವೆ ರಾಮನವಮಿ ಫೈಟ್‌

siddramaiah Rama navami

#image_title

ಬೆಂಗಳೂರು: ಶ್ರೀ ರಾಮನವಮಿಯ ದಿನವಾದ ಗುರುವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ರಾಮಾಯಣವೇ ನಡೆದಿದೆ! ಸಿದ್ದರಾಮಯ್ಯ ಅವರು ರಾಮನವಮಿ ಶುಭಾಶಯ ಹೇಳಿದ್ದನ್ನೇ ಗುರಿಯಾಗಿಟ್ಟುಕೊಂಡು ಬಿಜೆಪಿ ಅವರ ನಿಲುವುಗಳನ್ನು ಖಂಡತುಂಡವಾಗಿ ಖಂಡಿಸಿದೆ. ಇದಕ್ಕೆ ಸಿದ್ದರಾಮಯ್ಯ ಅವರೂ ತಿರುಗೇಟು ನೀಡಿದ್ದಾರೆ. ಜತೆಗೆ ನೆಟ್ಟಿಗರು ಕೂಡಾ ಬಿಜೆಪಿಯೇ ಪ್ರಮುಖವಾಗಿ ರಾಜಕಾರಣಿಗಳಿಗೆ ಸೌಹಾರ್ದದ ಪಾಠ ಮಾಡಿದ್ದಾರೆ.

ಸಿದ್ದರಾಮಯ್ಯ ಸಂದೇಶ ಏನಿತ್ತು?

ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಶ್ರೀರಾಮ ನವಮಿ ಶುಭಾಶಯ ಹೇಳಿದ್ದರು.
ʻʻಆದರ್ಶ ಪುರುಷ ಶ್ರೀರಾಮನು ಹಾಕಿಕೊಟ್ಟ ಪ್ರೀತಿ, ಸಹಾನುಭೂತಿ, ಅಂತಃಕರಣ, ನ್ಯಾಯಪರಿಪಾಲನೆಯ ಹಾದಿಯಲ್ಲಿ ಮುನ್ನಡೆಯೋಣ. ಪಾನಕ, ಕೋಸಂಬರಿಯ ಜೊತೆ ಸ್ನೇಹ, ಸೌಹಾರ್ದತೆ ಮಿಳಿತಗೊಳ್ಳಲಿ, ಮನುಷ್ಯ ಪ್ರೇಮದ ಬೆಳಕು ಜಗದಗಲ ಬೆಳಗಲಿ. ನಾಡಿನ ಸಮಸ್ತ ಜನತೆಗೆ ರಾಮನವಮಿಯ ಶುಭಹಾರೈಕೆಗಳುʼʼ ಎಂದು ಅವರು ಹೇಳಿದ್ದರು.

ಬಿಜೆಪಿಯಿಂದ ಕೌಂಟರ್‌ ಟ್ವೀಟ್‌

ಇದಕ್ಕೆ ಬಿಜೆಪಿ ಟ್ವೀಟ್‌ ಮೂಲಕವೇ ತಿರುಗೇಟು ನೀಡಿತು. ಅಧಿಕೃತ ಟ್ವಿಟರ್‌ ಖಾತೆಯ ಮೂಲಕವೇ ಸಿದ್ದರಾಮಯ್ಯ ಅವರ ನಿಲುವುಗಳನ್ನು ನೆನಪಿಸಿ ತರಾಟೆಗೆ ತೆಗೆದುಕೊಂಡಿತು.

ʻʻಪ್ರಭು ಶ್ರೀ ರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುವ.. ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ವಿರುದ್ಧವೇ ಸಮರ ಸಾರಿದ… ಪ್ರಭು ಶ್ರೀ ರಾಮಚಂದ್ರನ ರಾಮರಾಜ್ಯವನ್ನು ಟೀಕಿಸುವ… ಅಲ್ಪರ ಗುಂಪಿನ ‘Poster Boy’ ಸಿದ್ದರಾಮಯ್ಯನವರು ಇಂದು ‘ರಾಮಭಕ್ತನ’ ವೇಷ ತೊಟ್ಟು, ‘ಚುನಾವಣಾ ನಿಮಿತ್ತ ಬಹುಕೃತವೇಷ’ವೆಂಬ ನುಡಿಯ ಗೌರವ ಹೆಚ್ಚಿಸಿದ್ದಾರೆʼʼ ಎಂದು ಬಿಜೆಪಿ ಹೇಳಿತು.

ತಿರುಗೇಟು ನೀಡಿದ ಸಿದ್ದರಾಮಯ್ಯ

ಬಿಜೆಪಿಯ ಕುಹಕದ ಟ್ವೀಟ್‌ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮತ್ತೊಂದು ಟ್ವೀಟ್‌ ಮಾಡಿದ ಸಿದ್ದರಾಮಯ್ಯ, ʻʻನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕುʼ ಎಂದಿದ್ದಾರೆ.

ʻʻಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು. ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು. ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕು. ಶ್ರೀರಾಮನೇ ನಿಮಗೆ ಸದ್ಬುದ್ಧಿ ನೀಡಲಿʼʼ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವಿನ ಈ ಟ್ವೀಟ್‌ ಯುದ್ಧಕ್ಕೆ ನೆಟ್ಟಿಗರು ಕೂಡಾ ಮಧ್ಯ ಪ್ರವೇಶ ಮಾಡಿದ್ದಾರೆ. ಕೆಲವರು ಸಿದ್ದರಾಮಯ್ಯ ಅವರಿಗೆ ಈಗಲಾದರೂ ಬುದ್ಧಿ ಬಂತಲ್ಲ ಎಂದು ಹೇಳಿದರೆ, ಹೆಚ್ಚಿನವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಮನವಮಿಯ ದಿನವಾದರೂ ಜಗಳ ಮಾಡದೆ ಸುಮ್ಮನಿರಬಾರದಾ ಎನ್ನುವುದು ಕೆಲವರ ಕಳಕಳಿ. ರಾಮನನ್ನು ಬಿಜೆಪಿಗೆ ಗುತ್ತಿಗೆ ಕೊಡಲಾಗಿದೆಯಾ ಎಂದು ಕೆಲವರು ಕೇಳಿದ್ದಾರೆ. ಸಿದ್ದರಾಮಯ್ಯ ಅವರು ರಾಮ ದೇವಾಲಯ ಕಟ್ಟಿದ್ದನ್ನು ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲೇ ಟ್ಯಾಗ್‌ ಮಾಡಿ ಇದಕ್ಕಿಂತ ಏನು ಬೇಕು ಎಂದು ಒಬ್ಬರು ಹೇಳಿದ್ದಾರೆ. ಇದಕ್ಕೆ ಸಚಿವ ಮುರುಗೇಶ್‌ ನಿರಾಣಿ ಅವರು ಮಾಡಿದ್ದಾರೆನ್ನಲಾದ ಅಶ್ಲೀಲ ವಾಟ್ಸ್‌ ಆಪ್‌ ಮೆಸೇಜ್‌ಗಳು, ತ್ರಿಪುರಾ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೊ ನೋಡುತ್ತಿರುವ ಬಿಜೆಪಿ ಶಾಸಕನ ವಿಡಿಯವನ್ನು ಟ್ಯಾಗ್‌ ಮಾಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಿದ್ದರಾಮಯ್ಯ ಅವರನ್ನ ಹೊಗಳಿರುವ ಹೇಳಿಕೆಗಳನ್ನೂ ಹಾಕಲಾಗಿದೆ.

ಇದನ್ನೂ ಓದಿ :Vijay Sethupathi: ಸಿದ್ದರಾಮಯ್ಯ ಜೀವನಾಧರಿತ ಸಿನಿಮಾ ಪೋಸ್ಟರ್‌ ಔಟ್‌: ವಿಜಯ್ ಸೇತುಪತಿ ಗ್ರೀನ್‌ ಸಿಗ್ನಲ್‌?

Exit mobile version