Site icon Vistara News

Karnataka Elections : ಪೀಡೆ ತೊಲಗಿತು, ನನಗೆ ಬಹಳ ಸಂತೋಷವಾಗಿದೆ; ಲಕ್ಷ್ಮಣ ಸವದಿ ನಿರ್ಗಮನಕ್ಕೆ ರಮೇಶ್‌ ಜಾರಕಿಹೊಳಿ ಖುಷಿ

#image_title

ಬೆಳಗಾವಿ: ʻನಮ್ಮ ಪಕ್ಷದ ಒಂದು ಪೀಡೆ ಹೋಗಿದೆʼʼ ಹೀಗೆಂದು ಖುಷಿ ಮತ್ತು ಆಕ್ರೋಶದಿಂದ ಹೇಳಿದ್ದಾರೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ. ಅಥಣಿಯ ಬಿಜೆಪಿ ಟಿಕೆಟ್‌ಗಾಗಿ (Karnataka Elections) ಭಾರಿ ಹೋರಾಟ ನಡೆಸಿ ಕೊನೆಗೂ ಸಿಗದೆ ಪಕ್ಷದ ಮೇಲೆ ಸಿಟ್ಟಾಗಿ ಕಾಂಗ್ರೆಸ್‌ ಸೇರಿದ ಲಕ್ಷ್ಮಣ ಸವದಿ ಅವರನ್ನು ಉದ್ದೇಶಿಸಿ ಜಾರಕಿಹೊಳಿ ಈ ಮಾತು ಆಡಿದ್ದಾರೆ.

ಅಥಣಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ ಸವದಿ ವಿರುದ್ಧ ಗುಟುರು ಹಾಕಿದರು.

ʻʻಚುನಾವಣೆಯಲ್ಲಿ ಬಿದ್ದವರನ್ನು ಪಕ್ಷ ಡಿಸಿಎಂ ಮಾಡಿತ್ತು. ಆದರೆ ಅವನು ಪಕ್ಷ ನಿಷ್ಠೆ ಮಾಡ್ಲಿಲ್ಲ, ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಮಗೆ ಒಳ್ಳೆದೇ ಆಯ್ತು. ರಮೇಶ್ ಜಾರಕಿಹೊಳಿ ಮತ್ತೆ ಕಾಂಗ್ರೆಸ್‌ಗೆ ಹೋಗುತ್ತಾನೆ ಎಂದು ಸವದಿ ತಲೆಯಲ್ಲಿ ಇತ್ತು, ಆದರೆ ನನಗೆ ಮಂತ್ರಿ ಸ್ಥಾನ ಇಲ್ಲದಿದ್ದರೂ ನಾನು ಪಕ್ಷದಲ್ಲೇ ಇದ್ದೆ. ಇವತ್ತು ನನಗೆ ಸಂತೋಷವಾಗಿದೆ. ಉದ್ದ ಅಂಗಿ ಹಾಕಿರುವನು ಹೋಗಿದ್ದಾನೆ, ನನಗೆ ಇವತ್ತು ತುಂಬಾ ಸಂತೋಷವಾಗಿದೆʼʼ ಎಂದು ಹೇಳಿದ್ದಾರೆ.

ʻʻಸವದಿ ಒಂದು ವರ್ಷ ಮಂತ್ರಿ ಇದ್ದರೂ ಅಥಣಿ ಅಭಿವೃದ್ಧಿಗೆ ಏನೂ ಮಾಡ್ಲಿಲ್ಲ. ಸವದಿ ತುಂಬಾ ನೀಚ ಇದ್ದಾನೆʼʼ ಎಂದು ನೇರವಾಗಿ ಹೇಳಿದ ಜಾರಕಿಹೊಳಿ, ನಾನು ಅಥಣಿಯಲ್ಲಿ ಇರುತ್ತೇನೆ ಹಾಗೂ ಬೆಳಗಾವಿ ಗ್ರಾಮೀಣ ಭಾಗದಲ್ಲಿ ಇರುತ್ತೇನೆ. ನೀವು ನನಗೆ ಶಕ್ತಿ ಆಗಬೇಕು. ಲಕ್ಷ್ಮಣ್ ಸವದಿ ಸೋಲಬೇಕುʼʼ ಎಂದರು.

ʻʻಬಿಜೆಪಿ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ, ರಾಜ್ಯ ಮತ್ತು ರಾಷ್ಟ್ರ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆʼʼ ಎಂದು ನುಡಿದ ಜಾರಕಿಹೊಳಿ, ʻಉದ್ದ ಅಂಗಿಯನ್ನು ಮನೆಗೆ ಕಳಿಸುವ ಕೆಲಸವನ್ನು ನೀವು ಮಾಡಬೇಕು. ಯಾವುದೇ ದಬ್ಬಾಳಿಕೆ ಅಂಜಬೇಡಿʼʼ ಎಂದು ಧೈರ್ಯ ತುಂಬಿದರು.

ಇದನ್ನೂ ಓದಿ : BJP Karnataka: ಬಿ.ಎಲ್‌. ಸಂತೋಷ್‌ ಬಗ್ಗೆ ಗೌರವವಿದೆ ಎಂದ ಲಕ್ಷ್ಮಣ ಸವದಿ: ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ

ʻʻನಾನು ಅಥಣಿ ಕ್ಷೇತ್ರದಲ್ಲೇ ಇರುತ್ತೇನೆ. ಇಷ್ಟು ದಿನ ಲಕ್ಷ್ಮಣ್ ಸವದಿ ನಮ್ಮ ಪಕ್ಷದಲ್ಲಿ ಇದ್ದದ್ದಕ್ಕೆ ನಾನು ಸುಮ್ಮನೆ ಇದ್ದೇ, ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆʼʼ ಎಂದು ಹೇಳಿದ ಜಾರಕಿಹೊಳಿ, ಕೆಲವು ಸೊಸೈಟಿಗಳಲ್ಲಿ ಅಕ್ರಮವಾಗಿದೆ, ನಾವು ಅಧಿಕಾರಕ್ಕೆ ಬಂದು ಪರಿಶೀಲನೆ ಮಾಡಲಾಗುವುದು ಎಂದರು.

Exit mobile version