Site icon Vistara News

Karnataka Elections : ಶಾಮನೂರು ನೀಡಿದ ಸೀರೆಗೆ ಬೆಂಕಿ ಹಚ್ಚಿ ಮಹಿಳೆಯರ ಆಕ್ರೋಶ, ಚಿಲ್ರೆ 60 ರೂ. ಸೀರೆ ಕೊಟ್ಟು ಯಾಮಾರಿಸಿದ್ರಾ?

Shamanuru saree

#image_title

ದಾವಣಗೆರೆ: ಚುನಾವಣೆ ಘೋಷಣೆಯಾಗಿ (Karnataka Elections) ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಆಡಳಿತ ಮತ್ತು ಜನರು ಎರಡೂ ಕಡೆಯಿಂದ ಬಿಸಿ ಮುಟ್ಟಿದೆ.

ಒಂದು ಕಡೆ ಅಪ್ಪ, ಮಗ ಹಂಚುತ್ತಿದ್ದ ಗಿಫ್ಟ್‌ಗಳನ್ನು ವಶಪಡಿಸಿಕೊಂಡು ಅಧಿಕಾರಿಗಳು ಕೇಸು ದಾಖಲಿಸಿದ್ದರೆ ಇನ್ನೊಂದು ಕಡೆಯಲ್ಲಿ ಶಾಮನೂರು ಅವರು ಹಂಚಿದ ಸೀರೆಗಳನ್ನು ಮಹಿಳೆಯರು ಸುಟ್ಟು ಹಾಕಿದ್ದಾರೆ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಎಸ್.ಮಲ್ಲಿಕಾರ್ಜುನ್ ಅವರು ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿ ಬಳಗದ ಹೆಸರಿನಲ್ಲಿ ಹಂಚುತ್ತಿದ್ದ ಗಿಫ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 7.19 ಲಕ್ಷ ರೂ. ಮೌಲ್ಯದ ದೋಸೆ ಹಂಚು ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಜನರಿಗೆ ಆಮಿಷ ತೋರಿಸಿ ಗಿಫ್ಟ್ ಹಂಚುತ್ತಿದ್ದ ಬಗ್ಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎ1, ಎಸ್.ಎಸ್.ಮಲ್ಲಿಕಾರ್ಜುನ್ ಎ2 ಆರೋಪಿಗಳನ್ನಾಗಿಸಿ ದಾವಣಗೆರೆಯ ಕೆಟಿಜೆ ನಗರದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲು ಮಾಡಲಾಗಿದೆ.

ಸೀರೆಗೆ ಬೆಂಕಿ ಹಚ್ಚುತ್ತಿರುವ ಮಹಿಳೆ

ಇದರ ನಡುವೆಯೇ ಶುರುವಾಗಿದೆ ಬೆಂಕಿ ಕಥೆ. ಶಾಮನೂರು ಶಿವಶಂಕರಪ್ಪ ನೀಡಿದ ಸೀರೆಗಳಿಗೆ ದಕ್ಷಿಣ ಕ್ಷೇತ್ರದ ಮಹಿಳೆಯರು ಬೆಂಕಿ ಇಟ್ಟ ವಿಡಿಯೊಗಳು ವೈರಲ್‌ ಆಗಿದ್ದು, ʻʻನಿಮ್ಮ 60 ರೂಪಾಯಿ ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ ಭಾವಚಿತ್ರವಿರುವ ಬ್ಯಾಗ್‌ನಲ್ಲಿ ಸೀರೆಗಳನ್ನು ಮನೆಗಳಿಗೆ ಹಂಚಲಾಗಿತ್ತು. ಎಸ್ ಎಸ್ ಹಾಗೂ ಎಸ್ಎಸ್ ಎಂ ಅಭಿಮಾನಿ ಬಳಗ ಎನ್ನುವ ಹೆಸರಿನಲ್ಲಿ ಸೀರೆ ಹಂಚಿಕೆ ನಡೆದಿತ್ತು.

ಆದರೆ, ಸೀರೆ ನೋಡಿದ ಮಹಿಳೆಯರ ಪಿತ್ತ ನೆತ್ತಿಗೇರಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಈಗ ಸೀರೆ ಹಂಚಿ ವಂಚಿಸಲು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು ನಡು ರಸ್ತೆಯಲ್ಲಿ ಸೀರೆಗಳನ್ನು ಹಾಕಿ ಬೆಂಕಿದ್ದಾರೆ.

ಅಷ್ಟಕ್ಕೂ ಅವರ ಸಿಟ್ಟಿಗೆ ಇನ್ನೊಂದು ಕಾರಣವೇನೆಂದರೆ, ಕೊಟ್ಟಿರುವ ಸೀರೆಯೂ ಮೌಲ್ಯಯುತವಾದುದೇನೂ ಅಲ್ಲ. ಅದರ ರೇಟು ಕೇವಲ 60 ರೂ. ಎನ್ನುವುದು ಮಹಿಳೆಯರ ಅಭಿಮತ. ಒಟ್ಟಿನಲ್ಲಿ ಮತದಾರರು ಬುದ್ಧಿವಂತರಾಗುತ್ತಿದ್ದಾರೆ. ತಮ್ಮವರು ಕೊಟ್ಟರೆ, ಒಳ್ಳೆಯ ಗಿಫ್ಟ್‌ ಕೊಟ್ಟರೆ ಸದ್ದಿಲ್ಲದೆ ಒಳಗಿಟ್ಟುಕೊಳ್ಳುವ ಅವರು, ವಿರೋಧಿ ಪಾಳಯದ್ದಾದರೆ, ಕಡಿಮೆ ಹಣದ್ದಾದರೆ ಬೀದಿಗೆ ಬಂದು ಪ್ರದರ್ಶಿಸುತ್ತಾರೆ ಎಂಬಂತಾಗಿದೆ.

ಬೆಂಕಿ ಹಚ್ಚಲು ಎರಡು ಕಾರಣ

ನಿಜವೆಂದರೆ, ಕಾಂಗ್ರೆಸ್‌ ಮತಗಳೇ ಹೆಚ್ಚಾಗಿರುವ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲೇ ಈ ರೀತಿ ಸೀರೆಗೆ ಬೆಂಕಿ ಹಚ್ಚಲಾಗಿದೆ. ಶಾಮನೂರು ಅವರು ತಮ್ಮ ಭಾಗವನ್ನು ಅಭಿವೃದ್ಧಿ ಪಡಿಸಿಲ್ಲ ಎನ್ನುವುದು ಇವರ ಆಕ್ರೋಶಕ್ಕೆ ಒಂದು ಕಾರಣವಾದರೆ, ಇನ್ನೊಂದು 93 ವರ್ಷ ಆದರೂ ಇನ್ನೂ ಸ್ಪರ್ಧಿಸುತ್ತಿದ್ದಾರೆ ಎಂಬುದು!

ಇದನ್ನೂ ಓದಿ: Karnataka Elections 2023 : ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ

Exit mobile version