ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಮಂಗಳೂರು ಕ್ಷೇತ್ರದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ವಿರುದ್ಧ ಎಸ್‌ಡಿಪಿಐ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸೋಮವಾರ ನಾಮಪತ್ರ ಸಲಿಸಿರುವ ರಿಯಾಜ್ ಫರಂಗಿಪೇಟೆ ಅವರ ವಿರುದ್ಧ ದೇಶದ್ರೋಹವೂ ಸೇರಿದಂತೆ ಹಲವು ಕೇಸುಗಳು ದಾಖಲಾಗಿವೆ. ದೇಶದ ಹಲವು ಭಾಗಗಳಲ್ಲಿ ಅವರ ವಿರುದ್ಧ ಕೇಸುಗಳಿದ್ದು, ಅವರೀಗ ರಾಷ್ಟ್ರೀಯ ತನಿಖಾ ದಳ (NIA) ಕಣ್ಗಾವಲಿನಲ್ಲಿದ್ದಾರೆ!
ರಿಯಾಜ್ ಫರಂಗಿಪೇಟೆ ಅವರು ಕಳೆದ ಹಲವು ವರ್ಷಗಳಿಂದ ಎಸ್‌ಡಿಪಿಐಯನ್ನು ಮುನ್ನಡೆಸುತ್ತಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಬಣವಾಗಿರುವ ಎಸ್‌ಡಿಪಿಐನ ನೇತೃತ್ವ ವಹಿಸಿರುವ ಅವರು ಪಿಎಫ್‌ಐನ ಚಟುವಟಿಕೆಗಳಲ್ಲೂ ಈ ಹಿಂದೆ ಭಾಗಿಯಾದ ಬಗ್ಗೆ ಆರೋಪಗಳಿವೆ. ತಮ್ಮ ವಿರುದ್ಧ ದೇಶದ್ರೋಹದ ಕೇಸ್‌ಗಳು ಇರುವುದನ್ನು ಸ್ವತಃ ಅಭ್ಯರ್ಥಿ ರಿಯಾಜ್ ಫರಂಗೀಪೇಟೆ ಅವರೇ ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಸದ್ಯ ಈ ಕೇಸಿನ ಹಿನ್ನೆಲೆ ರಿಯಾಜ್ ಪರಂಗೀಪೇಟೆ ರಾಷ್ಟ್ರೀಯ ತನಿಖಾ ದಳದ ಕಣ್ಗಾವಲಿನಲ್ಲಿದ್ದಾರೆ. ಅವರ ಹೆಸರಲ್ಲಿ ಹಲವು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ.
ಮೋದಿ ಭಾಗವಹಿಸಿದ ಸಭೆಯಲ್ಲಿ ಗಲಭೆ ಸಂಚು
2022ರ ಜುಲೈ 12ರಂದು ಬಿಹಾರದ ಪುಲ್ವಾಮಾ ಷರೀಫ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ವೇಳೆ ಗಲಭೆಗೆ ಸಂಚು ರೂಪಿಸಿದ ಮಾಹಿತಿಯ ಆಧಾರದಲ್ಲಿ ಜುಲೈ 11ರಂದು ಪಿಎಫ್ ಐ ಸೇರಿದ ಹಲವರನ್ನು ಬಿಹಾರ ಪೊಲೀಸರು ಬಂಧಿಸಿದ್ದರು. ಈ ಕೇಸಿನ ನಂಟಿನ ಹಿನ್ನೆಲೆಯಲ್ಲಿ ಎನ್‌ಐಎಯಿಂದ ರಿಯಾಜ್ ವಿರುದ್ಧವೂ ಎಫ್ಐಆರ್ ದಾಖಲಾಗಿ ರಿಯಾಜ್ ಮನೆಗೂ ದಾಳಿ ನಡೆದಿತ್ತು. ಈ ಗಲಭೆ ಸಂಬಂಧ ನಡೆದ ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸಿದ ಆರೋಪವಿದೆ. 2022ರಲ್ಲಿ ಎನ್ಐಎ ದೆಹಲಿ ಠಾಣೆಯಲ್ಲಿ ರಿಯಾಜ್ ವಿರುದ್ಧ ದೇಶದ್ರೋಹದ ಕೇಸು ದಾಖಲಾಗಿತ್ತು. Sec 120,120(B),121, 121(A),1s3(A),1s3(B) R/W 34 IPC ಅಡಿ ವಿಚಾರಣೆಯಲ್ಲಿರೋ ಪ್ರಕರಣ ಇದಾಗಿದೆ.
ಈ ನಡುವೆ ಎನ್ಐಎ ಸೇರಿ ದ.ಕ ಜಿಲ್ಲೆಯ ಹಲವು ಠಾಣೆಗಳಲ್ಲಿ ಬೇರೆ ಬೇರೆ ಪ್ರಕರಣಗಳಲ್ಲಿ ರಿಯಾಜ್ ವಿರುದ್ದ ಎಫ್ ಐಆರ್ ದಾಖಲಾಗಿದೆ. ಬೆಳ್ತಂಗಡಿ, ಮಂಗಳೂರು ದಕ್ಷಿಣ, ಕೊಣಾಜೆ, ಮಂಗಳೂರು ಉತ್ತರ, ಪೂರ್ವ ಠಾಣೆಗಳಲ್ಲಿ ಕೇಸುಗಳಿವೆ. ಗುಂಪುಗಳ ಮಧ್ಯೆ ದ್ವೇಷ ಹರಡುವುದು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಎನ್.ಆರ್‌ಸಿ ಪ್ರತಿಭಟನೆ ಸಂಬಂಧಿಸಿದ ಕೇಸುಗಳು ಸದ್ಯ ನ್ಯಾಯಾಲಯದ ವಿಚಾರಣೆಯಲ್ಲಿದೆ.
ರಿಯಾಜ್ ಫರಂಗಿಪೇಟೆ ಅವರು ಸೋಮವಾರ ಬೃಹತ್ ಸಮಾವೇಶ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ ಯು.ಟಿ. ಖಾದರ್ ಅವರು ಸತತವಾಗಿ ಗೆಲ್ಲುತ್ತಿದ್ದು, ಅವರನ್ನು ಸೋಲಿಸಲು ಪಣ ತೊಟ್ಟಿರುವ ಎಸ್‌ಡಿಪಿಐ ಈ ಬಾರಿ ಪ್ರಬಲ ಅಭ್ಯರ್ಥಿಯಾಗಿ ರಿಯಾಜ್ ಅವರನ್ನೇ ಕಣಕ್ಕಿಳಿಸಿದೆ ಎನ್ನಲಾಗಿದೆ.
ಇದನ್ನೂ ಓದಿ : Karnataka Elections : ಯು.ಟಿ. ಖಾದರ್ 3,500 ಕೋಟಿ ಒಡೆಯ; SDPI ಅಭ್ಯರ್ಥಿ ರಿಯಾಜ್ ಫರಂಗಿಪೇಟೆ ಆರೋಪ