Site icon Vistara News

Karnataka Elections : ಸೆಲ್ಫಿ ವಿತ್‌ ಫಲಾನುಭವಿ; ಮಹಿಳಾ ಮೋರ್ಚಾದಿಂದ ದೇಶಾದ್ಯಂತ ಅಭಿಯಾನ, 1 ಕ್ಷೇತ್ರದಲ್ಲಿ 1000 ಚಿತ್ರ!

Mahila Morcha

#image_title

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಮಹಿಳಾ ಮೋರ್ಚಾಕ್ಕೆ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಅದುವೇ ಸೆಲ್ಫಿ ವಿತ್ ಬೆನಿಫಿಷಿಯರಿ (selfie with beneficiary), ಅಂದರೆ ಸೆಲ್ಫಿ ವಿತ್ ಫಲಾನುಭವಿ!

ಮುಂಬರುವ ಲೋಕಸಭಾ ಚುನಾವಣೆ ಮತ್ತು ಅಸೆಂಬ್ಲಿ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸೂಚನೆ ಮೇರೆಗೆ ರಾಷ್ಟ್ರೀಯ ಮಹಿಳಾ ಮೋರ್ಚಾವು ‘ಸೆಲ್ಫಿ ವಿದ್ ಬೆನೆಫಿಷಿಯರಿ’ ಎಂಬ ಕಾರ್ಯಕ್ರಮವನ್ನು ನಡೆಯಲಿದೆ ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ ಅವರು ತಿಳಿಸಿದರು. ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಮೋದಿ ಆ್ಯಪ್‌ನಲ್ಲಿ ಚಿತ್ರ ಅಪ್‌ಲೋಡ್‌

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಬೇರೆ ರಾಜ್ಯಗಳಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದೆ. ಏಪ್ರಿಲ್‍ನಲ್ಲಿ ನಮ್ಮ ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರದ ವಿವಿಧ ಯೋಜನೆಗಳ 1 ಸಾವಿರ ಫಲಾನುಭವಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲಿದ್ದೇವೆ. ಕೇವಲ ಸೆಲ್ಫಿ ತೆಗೆದುಕೊಂಡು ಫೇಸ್‍ಬುಕ್ ಅಥವಾ ವಾಟ್ಸಪ್‍ನಲ್ಲಿ ಹಾಕುತ್ತಿಲ್ಲ. ನರೇಂದ್ರ ಮೋದಿಜಿ ಅವರ ಆ್ಯಪ್‍ನಲ್ಲಿ ಫಲಾನುಭವಿಯ ಹೆಸರು, ಯೋಜನೆ ವಿವರದೊಂದಿಗೆ ಅಪ್‍ಲೋಡ್ ಮಾಡಲಿದ್ದೇವೆʼʼ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿವೆ. ಮಹಿಳೆಯರಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿವೆ ಎಂದು ಗೀತಾ ವಿವೇಕಾನಂದ ತಿಳಿಸಿದರು.

ಕೇಂದ್ರದ ಜಲಜೀವನ್ ಮಿಷನ್, ಉಜಾಲಾ, ಸ್ವಚ್ಛ ಭಾರತ್ ಅಡಿಯಲ್ಲಿ ಶೌಚಾಲಯ ನಿರ್ಮಾಣದ ಯೋಜನೆಗಳು, ಮಹಿಳೆಯರ ಆರ್ಥಿಕ ಸಬಲೀಕರಣ ಯೋಜನೆಗಳು ಜಾರಿಯಾಗಿವೆ. ರಾಜ್ಯದಲ್ಲಿ ಬಜೆಟ್ ಮಂಡನೆ ವೇಳೆ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಸಿಎಂ ರೈತ ವಿದ್ಯಾನಿಧಿ ಅಡಿಯಲ್ಲಿ ಸ್ಕಾಲರ್‍ಶಿಪ್, ಉದ್ಯೋಗಸ್ಥ ಮಹಿಳೆಯರಿಗೆ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ, ಪ್ರೋತ್ಸಾಹ ಕೊಡುವುದು- ಈ ರೀತಿ ಅನೇಕ ಮಹಿಳಾಪರ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಕ್ಕೆ ತಂದಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ. ಸೈಯದ್ ಜಾಫರ್ ಇಸ್ಲಾಂ, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಜಿಲ್ಲಾ ಅಧ್ಯಕ್ಷೆಯರಾದ ಆಶಾ ರಾವ್, ವಿಜಯಲಕ್ಷ್ಮಿ ಮತ್ತು ರೇಖಾ ಗೋವಿಂದ್ ಅವರು ಉಪಸ್ಥಿತರಿದ್ದರು.

ಇದನ್ನೂ ಓದಿ : Karnataka Elections : ಜೆಡಿಎಸ್‌ಗೆ ಹೊಡೆತ; ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ

Exit mobile version