Site icon Vistara News

Karnataka Elections : ಸಿದ್ದರಾಮಯ್ಯ ರಾಜ್ಯದಲ್ಲಿ ಎಲ್ಲಿ ನಿಂತ್ರೂ ಗೆಲ್ಲಲ್ಲ; ಪಾಕಿಸ್ತಾನ್, ಅಫಘಾನಿಸ್ತಾನಕ್ಕೆ ಹೋಗ್ಲಿ ಅಂದ್ರು ಆರ್‌. ಅಶೋಕ್‌

Siddaramaiah Ashok congress party is like beggars in the state says ashok

#image_title

ಬಳ್ಳಾರಿ: ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಈ ಬಾರಿಯ ಚುನಾವಣೆಯಲ್ಲಿ (Karnataka Elections) ಕೋಲಾರದಲ್ಲಿ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಪ್ರತಿಪಕ್ಷಗಳ ನಾಯಕರ ಮಾತಿಗೆ ಒಳ್ಳೆಯ ಸರಕಾಗಿದೆ. ಒಂದು ಕಡೆ ಕೆ.ಎಸ್‌. ಈಶ್ವರಪ್ಪ ಅವರು ʻʻಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಲ್ಲʼ ಎಂದು ಮೊದಲೇ ಹೇಳಿದ್ದೆ ಎಂದರೆ, ಸಚಿವ ಆರ್‌ ಅಶೋಕ್‌ ಅವರಂತೂ ಸಿದ್ದರಾಮಯ್ಯ ಅವರು ಗೆಲ್ಲುವ ಕ್ಷೇತ್ರ ಇಡೀ ಕರ್ನಾಟಕದಲ್ಲಿ ಎಲ್ಲೂ ಇಲ್ಲ ಅಂತ ಗೇಲಿ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.‌ ಅಶೋಕ್‌ ಅವರು, ʻʻಸಿದ್ದರಾಮಯ್ಯ ಅವರಿಗೆ ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲೂ ಸ್ಪರ್ಧಿಸಲು ಚಾನ್ಸೇ ಇಲ್ಲ. ಎಲ್ಲಿ ಸ್ಪರ್ಧಿಸಿದರೂ ಅವರು ಸೋಲ್ತಾರೆ, ರಾಜ್ಯದಲ್ಲಿ ಸಿದ್ದು ಸ್ಪರ್ಧೆ ಮಾಡುವುದು ಒಳ್ಳೆಯದಲ್ಲ, ಅವರು ಬೇರೆ ರಾಜ್ಯ ಮತ್ತು ದೇಶ ನೋಡಿಕೊಳ್ಳುವುದು ಒಳ್ಳೆಯದುʼʼ ಎಂದು ಗೇಲಿ ಮಾಡಿದ್ದಾರೆ. ʻʻಸಿದ್ದರಾಮಯ್ಯ ಅವರು ಅಫಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಹೋಗಿ ನಿಲ್ಲಲಿʼʼ ಎಂದು ಸಲಹೆ ನೀಡಿದ್ದಾರೆ.

ʻʻʻಸಿದ್ದರಾಮಯ್ಯ ಅವರನ್ನು ಎಲ್ಲಿಯೂ ಗೆಲ್ಲುವುದಕ್ಕೆ ಬಿಡುವುದಿಲ್ಲ. ಅವರ ಪಾರ್ಟಿಯವರೇ ಅವರಿಗೆ ವಿಲನ್ ಆಗಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರೇ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತಾರೆʼʼ ಎಂದು ಹೇಳಿದ ಅಶೋಕ್‌ ಅವರು, ʻʻಸಿದ್ದರಾಮಯ್ಯ ಅವರು ವರುಣಾದಲ್ಲಿ, ಚಾಮುಂಡೇಶ್ವರಿಯಲ್ಲಿ ಸೋತಿದ್ದಾರೆ. ಬಾದಾಮಿ ಬಿಟ್ಟು ಓಡಿ ಬಂದಿದ್ದಾರೆ. ಈಗ ಕೋಲಾರಕ್ಕೆ ಬಂದಿದ್ದಾರೆ, ಅಲ್ಲಿಯೂ ಕಷ್ಟವಿದೆʼʼʼ ಎಂದು ಅಶೋಕ್‌ ಹೇಳಿದರು.

ʻʻʻಬಿಜೆಪಿಯಲ್ಲಿ ಬಹಳಷ್ಟು ಮಂದಿ ಕೇಂದ್ರ ಮತ್ತು ರಾಜ್ಯ ನಾಯಕರು ಇದ್ದಾರೆ. ಆದರೆ ಕಾಂಗ್ರೆಸ್ ಗೆ ಇಬ್ಬರೇ ಇಬ್ಬರು ನಾಯಕರು , ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಬಿಟ್ಟರೆ ಮೂರನೇ ಲೀಡರ್ ಇಲ್ಲ. ಅವರ ಕೂಡ 224 ಕ್ಷೇತ್ರಗಳಿಗೆ ಹೋಗಿಲ್ಲ. ಅವರು ಟಿಕೆಟ್ ಹಂಚಿಕೆಗೆ ದೆಹಲಿಗೆ ಹೋಗಿದ್ದಾರೆʼʼ ಎಂದು ತುಲನೆ ಮಾಡಿದರು ಆರ್‌. ಅಶೋಕ್‌.

ʻʻನಾವು ರಾಜ್ಯ ಮತ್ತು ಕೇಂದ್ರ ಸರಕಾರದ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಂಡು ಜನರ ಮಧ್ಯ ಹೋಗುತ್ತಿದ್ದೇವೆ. ವಿಜಯ ಸಂಕಲ್ಪ ಯಾತ್ರೆ ಮುಖಾಂತರ ಜನಜಾಗೃತಿ ಮೂಡಿಸುತ್ತಿದ್ದೇವೆʼʼ ಎಂದ ಅವರು, ರಾಜ್ಯದ ಎಲ್ಲ 224 ಕ್ಷೇತ್ರಗಳನ್ನು ತಲುಪಿರುವ ಯಾವುದಾದರೂ ಪಾರ್ಟಿ ಇದ್ದರೆ ಅದು ಬಿಜೆಪಿ ಮಾತ್ರ ಎಂದು ಹೇಳಿದರು.

ʻʻಕಾಂಗ್ರೆಸ್ ನವರು ಇಲ್ಲ ಸಲ್ಲದ ಆರೋಪ ಮಾಡಿ ಆಧಿಕಾರ ಪಡೆಯಲು ಮುಂದಾಗಿದ್ದಾರೆ, ಕಾಂಗ್ರೆಸ್‌ನ 50 ವರ್ಷದ ಆಡಳಿತ ನೋಡಿ ಜನರು ಬದಲಾವಣೆ ಬಯಸಿದ್ದಾರೆʼʼ ಎಂದು ಅಶೋಕ್‌ ನುಡಿದರು.

ʻʻಸಚಿವ ಸೋಮಣ್ಣ ಅವರ ಅಸಮಾಧಾನ ತಣ್ಣಗಾಗಿದೆ. ಸೋಮಣ್ಣ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲʼʼ ಎಂದು ಹೇಳಿದ ಅಶೋಕ್‌, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ದೊಡ್ಡ ಸಂಖ್ಯೆಯಲ್ಲಿ ನಾಯಕರು ಬಂದು ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ನುಡಿದರು ಅಶೋಕ್‌.

ಇತ್ತ ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಅವರು ಕೂಡಾ ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Karnataka Elections : ಈಗಲೂ ಹೇಳುತ್ತೇನೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ, ಸ್ಪರ್ಧಿಸಲ್ಲ; ಈಶ್ವರಪ್ಪ

Exit mobile version