Site icon Vistara News

Karnataka Elections : ಬೊಮ್ಮಾಯಿ ಬಿಡಿ, ಮೋದಿನೇ ನನ್ನೆದುರು ನಿಂತರೂ ಗೆಲ್ಲೋದು ನಾನೇ: ಎಸ್ಸೆಸ್‌ ಮಲ್ಲಿಕಾರ್ಜುನ!

SS Mallikarjuna Modi

#image_title

ದಾವಣಗೆರೆ: ನನ್ನ ಎದುರು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಿಡಿ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ನಿಂತರೂ…. ಚುನಾವಣೆಯಲ್ಲಿ (Karnataka Elections) ಗೆಲ್ಲುವುದು ನಾನೇ: ಹೀಗೆಂದು ಧೈರ್ಯದಿಂದ ಹೇಳಿದವರು ಮಾಜಿ ಸಚಿವ ಎಸ್ಸೆಸ್‌ ಮಲ್ಲಿಕಾರ್ಜುನ್‌.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಅವರು ದಾವಣಗೆರೆಯಲ್ಲಿ ಮಾತನಾಡುತ್ತಾ ಹೀಗೆ ಹೇಳಿದರು. ಸಿಎಂ ಬಸವರಾಜ್ ಬೊಮ್ಮಾಯಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಇದೆಯಂತಲ್ಲ ಎಂದು ಯಾರೋ ಕೇಳಿದ್ದೇ ತಡ ಮಲ್ಲಿಕಾರ್ಜುನ್‌ ಅವರು ಬೊಮ್ಮಾಯಿಯವರ ಜತೆ ಮೋದಿಯವರನ್ನೂ ಎಳೆದುಕೊಂಡು ಬಂದು ಒಂದೇ ಏಟಿಗೆ ಸೋಲಿಸಿಬಿಟ್ಟರು.

ಮೋದಿ ಬಂದರೂ ನಾನೇ ಗೆಲ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುವ ಮಲ್ಲಿಕಾರ್ಜುನ್‌ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಇದೇ ದಾವಣಗೆರಗೆ ಉತ್ತರ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಈ ವಿಚಾರವನ್ನು ಕೂಡಾ ಅವರೇ ಒಪ್ಪಿಕೊಂಡಿದ್ದಾರೆ!

ʻʻಕಳೆದ ಚುನಾವಣೆಯಲ್ಲಿ ಸ್ವಲ್ಪ ಜಾಸ್ತಿ ಹುಮ್ಮಸಿನಲ್ಲಿದ್ದ ಹಿನ್ನೆಲೆಯಲ್ಲಿ ಸೋಲಾಗಿದೆ. ಈ ಸಲ ಹಾಗೇ ಆಗಲು ಸಾಧ್ಯವಿಲ್ಲʼʼ ಎಂದರು. ಕಳೆದ ಚುನಾವಣೆಯಲ್ಲಿ ಅಭಿಮಾನಿಗಳು ನೀವು ನಾಮಪತ್ರ ಹಾಕಿ ಮನೆಯಲ್ಲಿರಿ, ನಾವು ಗೆಲ್ಲಿಸಿಕೊಂಡು ಬರ್ತೀವಿ ಅಂತೆಲ್ಲ ಹೇಳಿ ಉಬ್ಬಿಸಿದ್ದರು ಎಂಬ ಮಾತುಗಳಿದ್ದವು. ಇದನ್ನು ನಂಬಿದ ಮಲ್ಲಿಕಾರ್ಜುನ ಅವರು ಹೆಚ್ಚು ಪ್ರಚಾರದ ಗೊಡವೆಗೆ ಹೋಗದೆ ಸೋಲಾಯಿತು ಎಂಬ ಮಾತುಗಳಿವೆ.

ಅದರೆ, ಈ ಸಾರಿ ಮೈಮರೆಯುವುದಿಲ್ಲ ಎನ್ನುವುದು ಮಲ್ಲಿಕಾರ್ಜುನ ವಾಕ್ಯ. ʻʻನಾನು ಶಾಸಕನಾಗಿ ತಂದ ಕಾಮಗಾರಿಗಳೇ ಈಗ ನಡೆಯುತ್ತಿವೆ. ರಾಜ್ಯದಲ್ಲಿ ಹೇಗೆ 40 ಪರ್ಸೆಂಟ್ ಸರ್ಕಾರ ಇದೆಯೋ ದಾವಣಗೆರೆಯಲ್ಲಿ ಸಹ ಇದೆ. ಈ ಭ್ರಷ್ಟಚಾರದಿಂದ ಜನ ಬೇಸತ್ತಿದ್ದಾರೆʼʼ ಎಂದರು ಮಲ್ಲಿಕಾರ್ಜುನ್‌ ಎಸ್ಸೆಸ್‌.

ʻʻಕೇಂದ್ರ ಹಾಗೂ ರಾಜ್ಯದಲ್ಲಿ ಹಿಟ್ಲರ್ ರೀತಿ ನಡೆಸಲಾಗುತ್ತಿದೆʼʼ ಎಂದು ತಮ್ಮ ಆಕ್ರೋಶ ಹೊರಗೆಡವಿದರು ಮಲ್ಲಿಕಾರ್ಜುನ್‌.

ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ ಟಿಕೆಟ್‌ ಪಡೆದಿದ್ದರೆ, ಉತ್ತರದಿಂದ ಪುತ್ರ ಮಲ್ಲಿಕಾರ್ಜುನ್‌ ಸ್ಪರ್ಧಿಸುತ್ತಿದ್ದಾರೆ. ದಾವಣಗೆರೆಯ ಇನ್ನೂ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಆಗಬೇಕು. ಇಷ್ಟರಲ್ಲಿಯೇ ಘೋಷಣೆಯಾಗುತ್ತದೆ ಎಂದರು ಎಸ್ ಎಸ್ ಮಲ್ಲಿಕಾರ್ಜುನ್.

ಮಲ್ಲಿಕಾರ್ಜುನ್‌ ಅವರು ಕೆಲಸಗಾರ ಎಂಬ ಅಭಿಪ್ರಾಯ ದಾವಣಗೆರೆಯಲ್ಲಿದೆ. ಆದರೆ, ಭೇಟಿ ಮಾಡುವುದೇ ಕಷ್ಟ! ಹಿಂದೆ ಕ್ರೀಡಾ ಸಚಿವರಾಗಿದ್ದ ಮಲ್ಲಿಕಾರ್ಜುನ್‌ ಎಲ್ಲರ ಕೈಗೆ ಸಿಗುವಂತಾದರೆ ಸೋಲುವ ಚಾನ್ಸೇ ಇಲ್ಲ ಎನ್ನುವುದು ಜನರ ಮಾತು.

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಲ್ಲಿಕಾರ್ಜುನ್‌ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಜನರನ್ನು ಉದ್ದೇಶಿಸಿ, ʻʻದಾವಣಗೆರೆ ಅಭಿವೃದ್ಧಿ ಆಗಬೇಕು ಎನ್ನುವ ಚರ್ಚೆ ಆದಾಗಲೆಲ್ಲ ಮಲ್ಲಿಕಾರ್ಜುನ ಅವರ ಹೆಸರು ನೆನಪಾಗುತ್ತದೆ. ಅದೇ ಮತದಾನದ ವಿಷಯ ಬಂದಾಗ ನೀವು ಮಲ್ಲಿಕಾರ್ಜುನ ಅವರನ್ನು ಮರೆಯುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ : Karnataka Elections : ಶಾಮನೂರು ನೀಡಿದ ಸೀರೆಗೆ ಬೆಂಕಿ ಹಚ್ಚಿ ಮಹಿಳೆಯರ ಆಕ್ರೋಶ, ಚಿಲ್ರೆ 60 ರೂ. ಸೀರೆ ಕೊಟ್ಟು ಯಾಮಾರಿಸಿದ್ರಾ?

Exit mobile version