ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಂಡ್ಯದಲ್ಲಿ ಅಥವಾ ಅವರ ಹುಟ್ಟೂರಿನಲ್ಲಿ ಟಿಪ್ಪು ಸುಲ್ತಾನ್‌ನ್ನು ಕೊಂದ ವೀರ ಯೋಧರಾದ ಉರಿ ಗೌಡ ಮತ್ತು ನಂಜೇಗೌಡರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಘೋಷಿಸಿದ್ದಾರೆ.
ಶನಿವಾರ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಜೋಶಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉರಿಗೌಡ – ನಂಜೇಗೌಡ ಹೋರಾಟ ಕುರಿತು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಿದೆ. ಆ ಪುಸ್ತಕವನ್ನು ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರೆ ಬಿಡುಗಡೆ ಮಾಡಿದ್ದರು ಎಂದು ನೆನಪಿಸಿದರು.
ʻʻಕಳೆದ ಒಂದು ತಿಂಗಳಿಂದ ಸ್ವಾತಂತ್ರ್ಯ ಹೋರಾಟಗಾರರಾದ, ಧರ್ಮದ ಉಳಿವಿಗಾಗಿ ಹೋರಾಟ ಮಾಡಿದವರಾದ ಉರಿಗೌಡ – ನಂಜೇಗೌಡ ಬಗ್ಗೆ ಚರ್ಚೆ ನಡೆಯುತಿದೆ. ಒಂದು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈ ಇಬ್ಬರು ಹೋರಾಟಗಾರರು ಇರಲೇ ಇಲ್ಲ ಎನ್ನುತ್ತಿದ್ದಾರೆ. ಉರಿಗೌಡ – ನಂಜೇಗೌಡರ ಬಗ್ಗೆ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆʼʼ ಎನ್ನುವ ಅಂಶವನ್ನು ಶೋಭಾ ನೆನಪಿಸಿಕೊಂಡರು.
ʻʻʻಉರಿಗೌಡ ಮತ್ತು ನಂಜೇಗೌಡ ರಾಜ್ಯದ ಕೆಲ ಭಾಗದ ಜನರ ಪಾಲಿಗೆ ಸ್ವಾಭಿಮಾನಿ ಹೋರಾಟಗಾರರು. ಉರಿಗೌಡ – ನಂಜೇಗೌಡ ಹೋರಾಟ ಕುರಿತು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಪುಸ್ತಕವನ್ನು ಈ ಹಿಂದೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರೇ ಬಿಡುಗಡೆ ಮಾಡಿದ್ದಾರೆ. ಆಗ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಚೆಲುವರಾಯಸ್ವಾಮಿ ಸಚಿವರಾಗಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಖ್ಯಾತ ಸಾಹಿತಿಗಳಾದ ದೇ. ಜವರೇಗೌಡ (ದೇಜಗೌ) ಅವರು ಈ ಪುಸ್ತಕ ಬರೆದಿದ್ದಾರೆʼʼ ಎಂದು ವಿವರಿಸಿದರು. ಆ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಯಾವುದೇ ವಿಚಾರವನ್ನು ಮಾತನಾಡದೆ ಇದ್ದ ಕುಮಾರಸ್ವಾಮಿ ಈಗ ಯಾಕೆ ಮಾತನಾಡುತ್ತಿದ್ದಾರೆ ಎಂದರು ಶೋಭಾ ಕರಂದ್ಲಾಜೆ.
ʻʻದೇಜಗೌ ಬಗ್ಗೆ ನಮಗೆ ಅಪಾರ ಗೌರವ ಇದೆ. ಅವರ ಬರೆದ ಸುವರ್ಣ ಮಂಡ್ಯ ಪುಸ್ತಕವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಓದಬೇಕುʼʼ ಎಂದು ಹೇಳಿದರು.
ʻʻಟಿಪ್ಪುವಿನ ಕ್ರೌರ್ಯಕ್ಕೆ ಒಳಗಾದ ಮೇಲುಕೋಟೆಯಲ್ಲಿ ಇಂದಿಗೂ ದೀಪಾವಳಿ ಆಚರಣೆ ಮಾಡುವುದಿಲ್ಲ. ಮಂಗಳೂರಿಗೆ ದಾಳಿ ಮಾಡಿದ ವೇಳೆ ಟಿಪ್ಪು ಗರ್ಭಿಣಿ ಸ್ತ್ರೀಯರನ್ನು ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡು ಬಂದಿರುವುದಕ್ಕೆ ಉಲ್ಲೇಖಗಳಿವೆ. ಜನರನ್ನು ಕೊಂದು ತಲೆಕೆಳಗಾಗಿ ನೇತು ಹಾಕಿದವನು ಪಾಪಿ ಟಿಪ್ಪು. ಇಸ್ಲಾಂ ನಂಬಿಕೆಗಳನ್ನು ಒಪ್ಪದವರನ್ನು ನಂಬಿ ಬೆಟ್ಟದ ಟಿಪ್ಪು ಡ್ರಾಪ್‌ನಿಂದ ಕೆಳಗೆ ತಳ್ಳಲಾಗುತ್ತಿತ್ತುʼʼ ಎಂದು ಟಿಪ್ಪುವಿನ ಕ್ರೌರ್ಯಗಳನ್ನು ನೆನಸಿಸಿಕೊಂಡ ಶೋಭಾ ಅವರು, ಇಂಥ ಕ್ರೌರ್ಯಗಳ ವಿರುದ್ಧದ ಆಕ್ರೋಶದ ಪ್ರತಿರೂಪವಾಗಿ ಅಂದು ಉರಿಗೌಡ ಮತ್ತು ನಂಜೇಗೌಡ ಮೂಡಿ ಬಂದರು ಎಂದರು.
ಅವರ ಪ್ರತಿಮೆ ಸ್ಥಾಪಿಸುತ್ತೇವೆ
ಉರಿ ಗೌಡ, ನಂಜೇಗೌಡರ ಬಗ್ಗೆ ನಮಗೆ ಹೆಮ್ಮೆ ಇದೆ. ನಾವು ಇನ್ನೂ ಕೂಡಾ ಅವರ ಫ್ಲೆಕ್ಸ್ ಗಳನ್ನು ಹಾಕುತ್ತೇವೆ, ನಾವು ಅವರನ್ನು ಪೂಜೆ ಮಾಡುತ್ತೇವೆ. ದೇಜಗೌ ಅವರ ಪುಸ್ತಕವನ್ನು ನಾವೇ ಮುದ್ರಿಸಿ ಹಂಚುತ್ತೇವೆ ಎಂದು ಹೇಳಿದ ಶೋಭಾ ಕರಂದ್ಲಾಜೆ ಅವರು, ಮುಂದೆ ಬಿಜೆಪಿಗೆ ಅವಕಾಶ ಸಿಕ್ಕಿದ್ರೆ ಉರಿಗೌಡ – ನಂಜೇಗೌಡ ಪ್ರತಿಮೆಯನ್ನು ಮಂಡ್ಯ ಭಾಗದಲ್ಲಿ ನಿರ್ಮಾಣ ಮಾಡುತ್ತೇವೆ ಎಂದರು. ಮಂಡ್ಯ ಅಥವಾ ಅವರ ಹುಟ್ಟೂರಿನಲ್ಲಿ ನಮ್ಮ ಸರ್ಕಾರ ಬಂದಾಗ ಉರಿಗೌಡ, ನಂಜೇಗೌಡ ಪ್ರತಿಮೆ ಮಾಡುತ್ತೇವೆ ಎಂದು ತಿಳಿಸಿದರು.
ದೇಜಗೌ ಅವರು ಬರೆದಿರುವ ಸುವರ್ಣ ಮಂಡ್ಯ ಪುಸ್ತಕವನ್ನು ನಾವು ಖರೀದಿ ಮಾಡುತ್ತೇವೆ, ಮರುಮುದ್ರಣ ಮಾಡುತ್ತೇವೆ. ಪ್ರತಿಯೊಬ್ಬರೂ ಓದುವಂತೆ ಹೇಳುತ್ತೇವೆ. ಪುಸ್ತಕವನ್ನು ಭಾಷಾಂತರ ಮಾಡಿ ಇಡೀ ದೇಶದಲ್ಲಿ ಹಂಚುವ ಸ್ಥಿತಿಯೂ ಮುಂದೆ ನಿರ್ಮಾಣವಾಗಬಹುದು ಎಂದು ಹೇಳಿದರು ಶೋಭಾ.
ಇದನ್ನೂ ಓದಿ : CT Ravi : ಉರಿ ಗೌಡ, ದೊಡ್ಡ ನಂಜೇ ಗೌಡರು ಟಿಪ್ಪುವನ್ನು ಕೊಂದಿದ್ದಕ್ಕೆ ಐತಿಹಾಸಿಕ ದಾಖಲೆ ಇದೆ ಎಂದ ಸಿ.ಟಿ. ರವಿ