Site icon Vistara News

Karnataka Elections | ಒಂದೇ ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ನಡ್ಡಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌

Modi yogi nadda

ಬೆಂಗಳೂರು: ರಾಜ್ಯದಲ್ಲಿ ೨೦೨೩ರ ವಿಧಾನಸಭಾ ಚುನಾವಣೆಗೆ (Karnataka Elections) ತೀವ್ರಗತಿಯ ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿ ಸಂಕಲ್ಪ ಯಾತ್ರೆ, ಜೆಡಿಎಸ್‌ ಪಂಚರತ್ನ ಯಾತ್ರೆ, ಕಾಂಗ್ರೆಸ್‌ ಬಸ್‌ ಯಾತ್ರೆಯ ಪ್ಲ್ಯಾನ್‌ನಲ್ಲಿ ಬ್ಯುಸಿಯಾಗಿದೆ. ಇದರ ನಡುವೆಯೇ ಬಿಜೆಪಿ ತನಗಿರುವ ರಾಷ್ಟ್ರೀಯ ಚರಿಷ್ಮಾವನ್ನು ಚೆನ್ನಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರ ದಂಡನ್ನೇ ರಾಜ್ಯಕ್ಕೆ ಕರೆಸಿಕೊಳ್ಳುತ್ತಿದೆ.

ಡಿಸೆಂಬರ್‌ ೧೫ರಿಂದ ಆರಂಭಗೊಂಡು ಜನವರಿ ೧೨ರೊಳಗಿನ ಅವಧಿಯಲ್ಲಿ ಮೂವರು ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರಲಿದ್ದಾರೆ. ಅವರೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಜ್ಯದಲ್ಲಿ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಮೂಲಕ ಎಲೆಕ್ಷನ್‌ ಟ್ರೆಂಡ್‌ ಸೆಟ್‌ ಮಾಡಲಿದ್ದಾರೆ.

ಡಿಸೆಂಬರ್‌ ೧೫ಕ್ಕೆ ಜೆ.ಪಿ. ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಡಿಸೆಂಬರ್‌ 15ಕ್ಕೆ ಕರ್ನಾಟಕಕ್ಕೆ ಆಗಮಿಸಿ, ರಾಜ್ಯದ 10 ಕಡೆಗಳಲ್ಲಿ ವರ್ಚುವಲ್‌ ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಅಂದಿನ (2016) ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು ಅದರಂತೆ ಕರ್ನಾಟಕದ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ 34 ಕಟ್ಟಡಗಳನ್ನು ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಈಗಾಗಲೆ ಸ್ವಂತ ಕಟ್ಟಡ ಇರುವ ಜಿಲ್ಲೆಗಳನ್ನು ಹೊರತುಪಡಿಸಿ 11 ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಿಸುವ ಘೋಷಣೆ ಮಾಡಿ ಕೆಲಸ ಆರಂಭಿಸಲಾಗಿತ್ತು. ಇದೀಗ 11 ರಲ್ಲಿ 10 ಜಿಲ್ಲೆಗಳಲ್ಲಿ ಜಿಲ್ಲಾ ಬಿಜೆಪಿ ಕಚೇರಿಗಳ ನಿರ್ಮಾಣ ಸಂಫೂರ್ಣವಾಗಿದೆ. ಕಚೇರಿಗಳನ್ನು ಉದ್ಘಾಟಿಸುವ ಸಲುವಾಗಿ ಜೆ.ಪಿ. ನಡ್ಡಾ ಕೊಪ್ಪಳಕ್ಕೆ ಡಿ.15ರಂದು ಆಗಮಿಸಲಿದ್ದಾರೆ.

ಕೊಪ್ಪಳದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಬೀದರ್‌, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಹಾವೇರಿ, ಕೋಲಾರ ಹಾಗೂ ಚಾಮರಾಜನಗರ ಕಚೇರಿಗಳು ಉದ್ಘಾಟನೆ ಆಗಲಿವೆ. ಅಲ್ಲಿ ನಡ್ಡಾ ಭಾಷಣವನ್ನು ವರ್ಚುವಲ್‌ ಆಗಿ ತೋರಿಸಲಾಗುತ್ತದೆ.

ಜನವರಿ ಮೊದಲ ವಾರ ಮೋದಿ ಎಂಟ್ರಿ
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯಕ್ರಮ ಹಾಗು ರೈತ ಮೋರ್ಚಾ ರ‍್ಯಾಲಿಯಲ್ಲಿ ಅವರು ಭಾಗಿಯಾಗಲಿದ್ದಾರೆ. ರೈತ ಮೋರ್ಚ್ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆಯಲಿದೆ.

ಎರಡು ಬಾರಿ ಯೋಗಿ ಆದಿತ್ಯನಾಥ್‌
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಡಿಸೆಂಬರ್‌ ತಿಂಗಳಿನಲ್ಲೇ ಉಡುಪಿಯಲ್ಲಿ ನಡೆಯಲಿರುವ ಅಟಲ್ ಉತ್ಸವ ಯುವ ಸಂಗಮದಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ, ಜನವರಿ ೧೨ರಂದು ನಡೆಯಲಿರುವ ವಿವೇಕಾನಂದ ಜನ್ಮ ದಿನೋತ್ಸವದಂದೇ ಯುವ ಮೋರ್ಚಾ ಸಮಾವೇಶದಲ್ಲಿ ಅವರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ | ವಿಸ್ತಾರ Exclusive | ಡಿ.15 ರಂದು ರಾಜ್ಯಕ್ಕೆ ಜೆ.ಪಿ. ನಡ್ಡಾ ಆಗಮನ; 10 ವರ್ಚುವಲ್‌ ರ‍್ಯಾಲಿ

Exit mobile version