Site icon Vistara News

Karnataka Elections : ಕೋಲಾರದಲ್ಲಿ ಮತದಾರರಿಗೆ ಹಂಚಲು ಶೇಖರಿಸಿದ್ದ ಅಕ್ಕಿ, ಬೇಳೆ, ಬೆಲ್ಲ ವಶಕ್ಕೆ

Kolara congress

#image_title

ಕೋಲಾರ: ಕೋಲಾರ ಜಿಲ್ಲೆಯ ನಾನಾ ವಿಧಾನಸಭಾ ಕ್ಷೇತ್ರಗಳಲ್ಲಿ (Karnataka Elections) ಕಾಂಗ್ರೆಸ್‌ ಪರವಾಗಿ ಮತದಾರರಿಗೆ ಹಂಚಲು ಶೇಖರಿಸಿದ್ದು ಎನ್ನಲಾದ ದೊಡ್ಡ ಪ್ರಮಾಣದ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಪ್ರಮುಖವಾಗಿ ಕೆಜಿಎಫ್‌ ಶಾಸಕಿ ರೂಪಾ ಶಶಿಧರ್‌ ಅವರ ಪರವಾಗಿ ಹಂಚಲು ಶೇಖರಿಸಿದ್ದು ಎಂದು ಹೇಳಲಾಗಿದೆ.

ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದ ಗೌಡ ಅವರಿಗೆ ಸೇರಿದ ಕುರಿ ಶೆಡ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಬ್ಯಾಲಹಳ್ಳಿ ಗ್ರಾಮದ ಕುರಿ ಶೆಡ್‌ಗೆ ಪೊಲೀಸರು ದಾಳಿ ನಡೆಸಿದಾಗ ಇದು ಪತ್ತೆಯಾಗಿದೆ.

ಗೋದಾಮಿನಲ್ಲಿ ಸಂಗ್ರಹಿಸಿರುವ ಆಹಾರ ಧಾನ್ಯಗಳು

ಟನ್‌ಗಟ್ಟಲೆ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ಸಂಗ್ರಹಿಸಲಾಗಿದ್ದು, ಯುಗಾದಿ ಹಬ್ಬದ ಉಡುಗೊರೆಯಾಗಿ ಇವುಗಳನ್ನು ಮನೆ ಮನೆಗೆ ಹಂಚಲು ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಕುಕ್ಕರ್‌, ಸೀರೆ, ಸ್ಟವ್‌ ಮತ್ತಿತರ ವಸ್ತುಗಳ ವಿತರಣೆ ನಾನಾ ಪಕ್ಷಗಳಿಂದ ಯಾವುದೇ ತೊಂದರೆ ಇಲ್ಲದೆ ಹಂಚಿಕೆಯಾಗುತ್ತಿದೆ. ಅದರ ನಡುವೆ ಕೋಲಾರದಲ್ಲಿ ಈ ಸಂಗ್ರಹ ಪತ್ತೆ ಹಚ್ಚಲಾಗಿದೆ.

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಹಂಚಲು ಇವುಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಪೊಲೀಸರು ಅನುಮಾನಪಟ್ಟಿದ್ದಾರೆ. ಪ್ರಸಕ್ತ ಆಹಾರ ಪದಾರ್ಥಗಳು ಪತ್ತೆಯಾಗಿರುವ ಗೋದಾಮು ಬ್ಯಾಲಹಳ್ಳಿ ಗೋವಿಂದ ಗೌಡ ಅವರಿಗೆ ಸೇರಿದ್ದು. ಅವರು ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ವಿ. ಮುನಿಯಪ್ಪ ಅವರು ಹಾಲಿ ಶಾಸಕರಾಗಿದ್ದು, ಅವರು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ, ಗೋವಿಂದ ಗೌಡರಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ.

ಗೋದಾಮಿನಲ್ಲಿ ಸಂಗ್ರಹಿಸಲಾದ ಅಕ್ಕಿ ಮತ್ತು ಇತರ ಸಾಮಗ್ರಿಗಳ ಮೂಟೆಗಳ ನೋಟ

ಇಲ್ಲಿ ಸಂಗ್ರಹದಲ್ಲಿರುವ ಅಕ್ಕಿ ಮತ್ತು ಬೇಳೆ, ಬೆಲ್ಲ ಮೊದಲಾದ ಸಾಮಗ್ರಿಗಳನ್ನು ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರೂಪಾ ಶಶಿಧರ್ ಅವರ ಪರವಾಗಿಯೂ ಮತದಾರರಿಗೆ ನೀಡಲಾಗುತ್ತಿದೆ ಎನ್ನಲಾಗಿದೆ.

ಆಹಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿರುವ ಎಲ್ಲಾ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಗೋದಾಮಿನಲ್ಲಿರುವ ಯಾವುದೇ ಸಾಮಗ್ರಿಗಳನ್ನು ತೆಗೆಯಲು ಸಾಧ್ಯವಾಗದಂತೆ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

Exit mobile version