ಕಾರವಾರ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ (Karnataka Elections) ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ (Mankalu Vaidya) ವಿರುದ್ಧ ನಕಲಿ ಫೇಸ್‍ಬುಕ್ ಖಾತೆ ಮೂಲಕ ತೇಜೋವಧೆಗೆ ಯತ್ನಿಸಿದ ಇಬ್ಬರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಟ್ಕಳ ತಾಲ್ಲೂಕಿನ ಶಿರಾಲಿಯ ಗುಮ್ಮನಹಕ್ಕಲದ ನಿವಾಸಿ ಚಂದ್ರು ನಾಯ್ಕ(33), ಮುರ್ಡೇಶ್ವರ ಜನತಾ ಕಾಲೊನಿಯ ನಾಗರಾಜ ಪಟಗಾರ(38) ನಕಲಿ ಫೇಸ್ ಬುಕ್ ಖಾತೆ ತೆರೆದು ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಆರೋಪಿತರಾಗಿದ್ದಾರೆ.
ಆರೋಪಿತರು `ಕಾವೇರಿ ನ್ಯೂಸ್’ ಎಂಬ ನಕಲಿ ಫೇಸ್‍ಬುಕ್ ಖಾತೆಯನ್ನು ತೆರೆದು, ಮಂಕಾಳು ವೈದ್ಯ ವಿರುದ್ಧ ಅವಹೇಳನಕಾರಿ ಸಂದೇಶ ರವಾನಿಸಿದ್ದರು. ಈ ಕುರಿತು ಹೊನ್ನಾವರ ತಾಲ್ಲೂಕಿನ ಹಡಿನಬಾಳ ನಿವಾಸಿ ರಮೇಶ ನಾಯ್ಕ ಅವರು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು.
ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳು ವೈದ್ಯ ಅವರ ಕುಟುಂಬದ ಕುರಿತು ಅವಹೇಳನಕಾರಿಯಾದ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ. ಆರೋಪಿತರು ಯಾವುದೋ ಮಹಿಳೆಯ ನೇಣು ಹಾಕಿಕೊಂಡ ಫೋಟೋವನ್ನು ಎಡಿಟ್ ಮಾಡಿ ಮಂಕಾಳ ವೈದ್ಯರವರು ತಮ್ಮ ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಆರೋಪಿತರು ಈ ಹಿಂದೆಯೂ ಹಲವು ಬಾರಿ ಮಂಕಾಳು ವೈದ್ಯ ಅವರ ಹೆಸರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಡಿಸುವ ಪ್ರಯತ್ನವನ್ನ ಸತತವಾಗಿ ಮಾಡುತ್ತಾ ಬಂದಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಂಕಾಳು ವೈದ್ಯರಿಗೆ ಹಾಗೂ ಮಂಕಾಳು ವೈದ್ಯರ ಅಭಿಮಾನಿ ಬಳಗಕ್ಕೆ ಹೆಸರನ್ನ ಕೆಡಿಸುವ ಹಾಗೂ ಅವರ ತೇಜೋವಧೆಯನ್ನು ಮಾಡುವ ಹುನ್ನಾರವನ್ನೂ ಆರೋಪಿತರು ಮಾಡುತ್ತಿದ್ದಾರೆ. ಅವರ ಹೆಸರನ್ನು ಹಾಳು ಮಾಡಿ, ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯನ್ನುಂಟು ಮಾಡುವುದೇ ಆರೋಪಿತರ ಉದ್ದೇಶವಾಗಿದೆ. ಹೀಗಾಗಿ ಇಬ್ಬರೂ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಡಿನಬಾಳದ ರಮೇಶ ನಾಯ್ಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : Karnataka Elections : ಕಾಂಗ್ರೆಸ್‌ಗೆ 2ನೇ ಪಟ್ಟಿಯಲ್ಲಿ ಭಾರಿ ಒಳಪೆಟ್ಟು: 42 ಕ್ಷೇತ್ರಗಳ ಪೈಕಿ 10ರಲ್ಲಿ ಬಂಡಾಯ