Site icon Vistara News

Karnataka Elections : ಬ್ರಾಹ್ಮಣನೆಂದು ನನಗೆ ಟಿಕೆಟ್‌ ತಪ್ಪಿಸಿದರು; ಕಣ್ಣೀರು ಹಾಕಿದ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್‌

Udupi Raghupati Bhat

#image_title

ಉಡುಪಿ: ಉಡುಪಿಯ ಹಾಲಿ ಶಾಸಕ ರಘುಪತಿ ಭಟ್‌ ಅವರು ಬಿಜೆಪಿ ಟಿಕೆಟ್‌ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಮೂರು ಬಾರಿ ಶಾಸಕನಾಗಿದ್ದ ನನಗೆ ಒಂದು ಮಾತೂ ಹೇಳದೆ ಟಿಕೆಟ್‌ ನಿರಾಕರಿಸಿದ್ದರು ಎಂದು ಬೇಸರವಾಗಿದೆ. ಹಾಗಂತ ನಾನು ಬಂಡಾಯವೇನೂ ಏಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಜತೆಗೆ ಬ್ರಾಹ್ಮಣನೆಂಬ ಕಾರಣಕ್ಕೆ ಟಿಕೆಟ್‌ ತಪ್ಪಿಸಲಾಯಿತು ಎಂದೂ ಆರೋಪಿಸಿದ್ದಾರೆ.

ಉಡುಪಿ ಕ್ಷೇತ್ರದ ಬಿಜೆಪಿ ಟಿಕೆಟನ್ನು ಈ ಬಾರಿ ಮೊಗವೀರ ಮುಖಂಡ ಯಶಪಾಲ್‌ ಸುವರ್ಣ ಅವರಿಗೆ ನೀಡಲಾಗಿದೆ. ಆದರೆ, ಮಂಗಳವಾರ ರಾತ್ರಿ ಪ್ರಕಟವಾದ ಪಟ್ಟಿಯನ್ನು ನೋಡುವವರೆಗೆ ಅವರಿಗೆ ಟಿಕೆಟ್‌ ತಪ್ಪುವ ಯಾವ ಮುನ್ಸೂಚನೆಯೂ ಇರಲಿಲ್ಲ ಎನ್ನಲಾಗಿದೆ.

ಬುಧವಾರ ಮನೆಗೆ ಬಂದ ಮಾಧ್ಯಮಗಳು ಮತ್ತು ಅಭಿಮಾನಿಗಳ ಜತೆ ಮಾತನಾಡಿದ ಅವರು ನನಗೆ ಯಾವ ಮಾಹಿತಿಯನ್ನೂ ಕೊಡದೆ ಟಿಕೆಟ್‌ ನಿರಾಕರಿಸಿದರು ಎನ್ನುವುದು ನನಗೆ ಬೇಸರ ತಂದ ವಿಷಯ ಎಂದರು. ನನಗೆ ಯಾವ ಕಾರಣಕ್ಕಾಗಿ ಟಿಕೆಟ್‌ ನಿರಾಕರಿಸಲಾಯಿತು ಎಂದು ಅವರು ಹೇಳಬಹುದಿತ್ತು. ಒಂದೊಮ್ಮೆ ನನಗೆ ಮೊದಲೇ ಹೇಳುತ್ತಿದ್ದರೆ ನಾನು ಕೂಡಾ ಕೆ.ಎಸ್‌. ಈಶ್ವರಪ್ಪ ಅವರ ಹಾಗೆ ಮೊದಲೇ ನಿವೃತ್ತಿಯನ್ನು ಘೋಷಣೆ ಮಾಡುತ್ತಿದ್ದೆ. ಆದರೆ, ನನ್ನ ನಿವೃತ್ತಿಗೆ ಮಾನದಂಡ ಏನು? ನೀವು ಮೂರು ಸಾರಿ ಗೆದ್ದಿದ್ದೀರಿ.. ನಮ್ಮಲ್ಲಿ ಮೂರು ಸಾರಿಗಿಂತ ಹೆಚ್ಚು ಗೆದ್ದವರಿಗೆ ಅವಕಾಶವಿಲ್ಲ ಎನ್ನುವುದೇ ಮಾನದಂಡವಾಗಿದ್ದರೆ ಅದನ್ನಾದರೂ ಹೇಳಬೇಕಿತ್ತು. ನನಗೆ ಈಗ 53 ವರ್ಷ. 54 ವರ್ಷ ಆದವರಿಗೆ ಟಿಕೆಟ್‌ ಇಲ್ಲ ಎಂದಿದ್ದರೆ ಅದನ್ನಾದರೂ ಹೇಳಬೇಕು ಎಂದು ಅವರು ಹೇಳಿದರು.

ನಾನು ಬ್ರಾಹ್ಮಣನೆಂಬ ಕಾರಣಕ್ಕೆ ಟಿಕೆಟ್‌ ತಪ್ಪಿಸಲಾಗಿದೆ ಎಂದೂ ಅವರು ದೂರಿದರು. ತನ್ನ ಬದಲಿಗೆ ಟಿಕೆಟ್‌ ಪಡೆದಿರುವ ಯಶ್‌ಪಾಲ್‌ ಸುವರ್ಣ ಅವರು ತಮ್ಮ ಗೆಳೆಯ ಮತ್ತು ಅವರ ಗೆಲುವಿಗೆ ಶುಭ ಹಾರೈಸುವುದಾಗಿ ಹೇಳಿದರು ರಘುಪತಿ ಭಟ್‌. ಭಟ್‌ ಅವರ ಆಪ್ತ ಸಹಾಯಕ ಸಂದೀಪ್‌ ಅವರು ಕಣ್ಣೀರು ಸುರಿಸಿದರು.

ಬ್ರಾಹ್ಮಣನೆಂಬ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಯಿತೇ?

ರಘುಪತಿ ಭಟ್‌ ಅವರು ತನಗೆ ಬ್ರಾಹ್ಮಣ ಎಂಬ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಯಿತು ಎಂದು ಹೇಳಿದ್ದಾರೆ. ಇದರಲ್ಲಿ ಸತ್ಯವೂ ಇದೆ. ಕುಂದಾಪುರದಲ್ಲಿ ಈ ಬಾರಿ ಶ್ರೀನಿವಾಸ ಶೆಟ್ಟರ ಬದಲಿಗೆ ಬ್ರಾಹ್ಮಣರಾಗಿರುವ ಕಿರಣ್‌ ಕೊಡ್ಗಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಇನ್ನೊಂದು ಟಿಕೆಟ್‌ ಬ್ರಾಹ್ಮಣರಿಗೆ ಕೊಡುವುದು ಕಷ್ಟ ಎಂಬ ಕಾರಣಕ್ಕಾಗಿಯೂ ರಘುಪತಿ ಭಟ್‌ ಅವರ ಟಿಕೆಟ್‌ ತಪ್ಪಿದೆ ಎನ್ನಲಾಗಿದೆ.

ರಘುಪತಿ ಭಟ್ಟರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇನೆ ಎಂದ ಯಶ್ಪಾಲ್‌

ಈ ನಡುವೆ, ಉಡುಪಿ ಬಿಜೆಪಿ ಟಿಕೆಟ್‌ ಪಡೆದಿರುವ ಮೊಗವೀರ ಮುಖಂಡ ಯಶ್ಪಾಲ್‌ ಸುವರ್ಣ ಅವರು ತಾನು ರಘುಪತಿ ಭಟ್‌ ಅವರ ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಹೋರಾಡುವುದಾಗಿ ಪ್ರಕಟಿಸಿದರು. ʻʻಶಾಸಕ ರಘುಪತಿ ಭಟ್ ಅವರನ್ನು ಇವತ್ತು ಭೇಟಿಯಾಗುತ್ತೇನೆ. ಬಹಳ ವರ್ಷಗಳಿಂದ ಅವರ ಜೊತೆ ಕೆಲಸ ಮಾಡುತ್ತಾ ಇದ್ದೇನೆ. ರಘುಪತಿ ಭಟ್ ಮಾರ್ಗದರ್ಶನ, ಸಹಕಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇನೆ. ಶಾಸಕರ ಜೊತೆ ಜನಗಳ ಬಳಿ ಹೋಗಿ ಪ್ರಚಾರ ಮಾಡುತ್ತೇನೆʼʼ ಎಂದರು.

ʻʻಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಪಕ್ಷ ಗುರುತಿಸಿರುವುದಕ್ಕೆ ನಾನೇ ಉದಾಹರಣೆ, ಪಕ್ಷ ಕೊಟ್ಟ ಸಲಹೆ ಸೂಚನೆಯನ್ನು ಪಾಲಿಸುತ್ತೇನೆ. ಕರಾವಳಿ ಭಾಗದ ಉದ್ದಗಲ ಓಡಾಡುತ್ತೇನೆ. ರಾಷ್ಟ್ರೀಯ ಚಿಂತನೆ ಹಿಂದೂ ಸಮಾಜದ ರಕ್ಷಣೆ ನನ್ನ ಧ್ಯೇಯ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತೇನೆʼʼ ಎಂದು ಅವರು ಹೇಳಿದರು.

ʻʻನಾನು ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಪಕ್ಷದ ಚಟುವಟಿಕೆಗಳನ್ನು ಬಹಳ ಪ್ರಾಮಾಣಿಕವಾಗಿ ನಾನು ಮಾಡಿದ್ದೇನೆ. ನಾನು ಹಿಂದೂ – ನಾನು ಒಂದು ಜಾತಿಗೆ ಸೀಮಿತವಾಗಿಲ್ಲ. ನಾನು ಹುಟ್ಟುವಾಗ ಮೊಗವೀರ ಜಾತಿಯಲ್ಲಿ ಹುಟ್ಟಿದ್ದೇನೆ ಅದಕ್ಕೆ ನ್ಯಾಯ ಕೊಡುತ್ತೇನೆ. ಮೀನುಗಾರಿಕೆ ಸಹಕಾರಿ ಹಿಂದು ಸಂಘಟನೆ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುತ್ತೇನೆʼʼ ಎಂದು ಹೇಳಿದರು.

ಇದನ್ನೂ ಓದಿ : BJP Ticket surprize : ಕರಾವಳಿಯಲ್ಲಿ ಭಾರಿ ತಲ್ಲಣ, ಅಂಗಾರ, ಮಠಂದೂರು, ರಘುಪತಿ ಭಟ್‌, ಲಾಲಾಜಿಗೆ ಟಿಕೆಟ್‌ ಇಲ್ಲ; ಇಬ್ಬರು ಮಹಿಳೆಯರಿಗೆ ಸೀಟ್‌

Exit mobile version