Site icon Vistara News

Karnataka Elections 2023 : ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ ವಿ. ಸೋಮಣ್ಣ; ಮತ್ತೆ ಎಲ್ಲಿಂದ?

Siddaramaiah Somanna

#image_title

ಚಾಮರಾಜನಗರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ವರುಣ ಕ್ಷೇತ್ರದಿಂದ ಸಿದ್ಧರಾಮಯ್ಯ ಅವರ ವಿರುದ್ಧ ಸ್ಪರ್ಧಿಸುತ್ತಿಲ್ಲ ಎಂದು ಸಚಿವ ವಿ. ಸೋಮಣ್ಣ (V Somanna) ಸ್ಪಷ್ಟಪಡಿಸಿದ್ದಾರೆ. ಚಾಮರಾಜ ನಗರದಲ್ಲಿ ನಡೆದ ರೈತ ಮೋರ್ಚಾ ಸಭೆಯಲ್ಲಿ ಮಾತನಾಡಿದ ಸಚಿವರು, ವರುಣದಲ್ಲಿ ನನ್ನ ಸ್ಪರ್ಧೆಯ ವಿಚಾರ ಚರ್ಚೆ ಆಗಿರುವುದು ನಿಜ. ಆದರೆ, ನಾನು ನಾನು ವರುಣದಿಂದ ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ʻʻನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ಪಕ್ಷದ ಅಭಿಪ್ರಾಯ ಏನಿದೆಯೋ ಅದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆʼʼ ಎಂದು ಹೇಳಿದ ಸೋಮಣ್ಣ ಅವರು, ಚಾಮರಾಜ ನಗರದಿಂದ ಸ್ಪರ್ಧೆ ಮಾಡುವುದಾಗಿ ಸುಳಿವು ನೀಡಿದ್ದಾರೆ.

ʻʻಮಲೈ ಮಹದೇಶ್ವರ ಆಶೀರ್ವಾದ ಪಡೆದು ಮಾದರಿ ಜಿಲ್ಲೆ ಮಾಡಬೇಕು ಎಂಬುದು ನನ್ನ ಆಸೆ. ಚುನಾವಣೆ ಗಿಮಿಕ್ ಗಾಗಿ ನಾನು ಮಾತನಾಡುತ್ತಿಲ್ಲ. ಚಾಮರಾಜ ನಗರ ಜಿಲ್ಲಾ ಕೇಂದ್ರವು ತಾಲೂಕೂ ಅಲ್ಲದ ಸ್ಥಿತಿಯಲ್ಲಿದೆ. ಚಾಮರಾಜ ನಗರ ಅಭಿವೃದ್ಧಿ ಮಾಡಬೇಕು. ಭಗವಂತನ ಆಶೀರ್ವಾದದಿಂದ ಒಳ್ಳೆಯ ಕಾಲ ಬರುತ್ತಿದೆ. ಒಳ್ಳೆ ಕಾಲ ಬರುತ್ತಿದೆ ಅಂತ ಕೈ ಕಟ್ಟಿ ಕುಳಿತುಕೊಳ್ಳಬಾರದು. ನಿಮ್ಮ ಹತ್ತು ವರ್ಷದ ಅಭಿವೃದ್ಧಿ ಕನಸುಗಳನ್ನು ನನಸು ಮಾಡೋಣʼʼ ಎಂದು ಹೇಳುವ ಮೂಲಕ ಚಾಮರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಹೇಳಿಕೊಂಡರು.

ಗೋವಿಂದರಾಜ ನಗರದ ಕಥೆ ಹೇಳಿದ ಸೋಮಣ್ಣ

ಬೆಳಗ್ಗೆ ಗೋವಿಂದರಾಜನಗರದ ಮನೆಯಿಂದ ಹೊರಟು ಚಾಮರಾಜ ನಗರಕ್ಕೆ ಬಂದಿದ್ದ ಅವರು, ಮನೆಯ ವಾತಾವರಣವನ್ನು ವಿವರಿಸಿದರು. ʻʻʻಮನೆಯ ಎದುರಿನ ಬೆಳಗ್ಗಿನ ಸೀನ್ ನೆನಪು ಮಾಡಿಕೊಂಡರೆ ಒಂಥರಾ ಫೀಲ್ ಆಗುತ್ತೆ. ಬೆಳಗ್ಗೆ ಆರು ಗಂಟೆಗೆ ನನ್ನ ಮನೆ ಮುಂದೆ ಸಾವಿರಾರು ಜನ ಕುಳಿತಿದ್ದರು. ಮುಸಲ್ಮಾನರ ಆದಿಯಾಗಿ ಎಲ್ಲರೂ ಇದ್ದರು. ಅವರನ್ನೆಲ್ಲ ಮಾತನಾಡಿಸಿ ಆಚೆ ಬರುವಷ್ಟರಲ್ಲಿ 8.10 ಆಯ್ತು. ಜನರಿಗೆ, ಬಡವರಿಗೆ ಕೃತಜ್ಞತೆ ಎಷ್ಟಿದೆ ಎಂಬುದು 45 ವರ್ಷ ಆದಮೇಲೆ ಇವತ್ತೇ ಗೊತ್ತಾಗಿದ್ದು. ಅದಾದ ಮೇಲೆ ನಾನು ಎಲ್ಲೂ ಮಾತನಾಡಲಿಲ್ಲ. ಎಲ್ಲೋ ಒಂದು ಕಡೆ ನನಗೆ ನೋವು ಕಾಡುತ್ತಿದೆ. ಸಾಯಂಕಾಲ ಬರ್ತೀನಿ ಅಂತ ಹೇಳಿದ್ದೇನೆ, ಹೋಗ್ತೇನೆʼʼ ಎಂದು ಗೋವಿಂದರಾಜ ನಗರದ ಟಿಕೆಟ್‌ ಸಿಗುತ್ತಿಲ್ಲ ಎಂಬ ಬಗ್ಗೆ ನೋವಿನಿಂದಲೇ ಮಾತನಾಡಿದರು.

ಸೋಮಣ್ಣ ಅವರಿಂದ ಟಿಕೆಟ್ ವಿಳಂಬವಾಗುತ್ತಿದೆ ಎನ್ನುವ ವಿಚಾರ ಪ್ರಸ್ತಾಪವಾದಾಗ, ʻʻಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಅವರನ್ನ ಯಾಕೆ ಇದರ ಮಧ್ಯ ಎಳೆದು ನಮ್ಮ ನಡುವೆ ಕಂದಕ ಸೃಷ್ಟಿ ಮಾಡ್ತೀರಾ? ರಾಷ್ಟ್ರೀಯ ನಾಯಕರು ಸಂದರ್ಭ ಅರ್ಥ ಮಾಡಿಕೊಂಡು ಏನೇನು ಮಾಡಬೇಕೋ ಮಾಡುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ಪಟ್ಟಿ ಬಿಡುಗಡೆಯಾಗುತ್ತದೆʼʼ ಎಂದರು.

ಸ್ಥಳೀಯರಿಗೆ ಟಿಕೆಟ್‌ ನೀಡಲು ಬಿಜೆಪಿ ಕಾರ್ಯಕರ್ತರ ಆಗ್ರಹ

ಸಚಿವ ಸೋಮಣ್ಣ ಅವರು ತಾನು ಚಾಮರಾಜ ನಗರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರೂ ಅವರಿಗೆ ಅದು ಸುಲಭದ ತುತ್ತಲ್ಲ. ಯಾಕೆಂದರೆ, ಈಗಾಗಲೇ ಎಂ. ರುದ್ರೇಶ್‌ ಅವರು ಇಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಇದರ ನಡುವೆ, ಚಾಮರಾಜನಗರ ಕ್ಷೇತ್ರಕ್ಕೆ ನಾಗಶ್ರೀ ಪ್ರತಾಪ್‌ಗೆ ಟಿಕೆಟ್ ನೀಡಲು ಬಿಜೆಪಿ ಕಾರ್ಯಕರ್ತರ ಆಗ್ರಹಿಸುತ್ತಿದ್ದಾರೆ.

ರೈತಮೋರ್ಚಾ ಸಮಾವೇಶದ ನಂತರ ಬಿಜೆಪಿ ಕಾರ್ಯಕರ್ತರು ನಾಗಶ್ರೀ ಪ್ರತಾಪ್ ಪರ ಬ್ಯಾಟಿಂಗ್ ನಡೆಸಿದರು. ʻʻನಾಗಶ್ರೀ ಪ್ರತಾಪ್‌ಗೆ ಟಿಕೆಟ್ ನೀಡಿದರೆ ಬಿಜೆಪಿ ಪರ ಕೆಲಸ ಮಾಡ್ತೀವಿ. ಹೊರಗಿನವರಿಗೆ ಟಿಕೆಟ್ ನೀಡಿದರೆ ಬಿಜೆಪಿ ವಿರುದ್ಧವಾಗಿ ಪ್ರಚಾರ ಮಾಡುತ್ತೇವೆ. ಚಾಮರಾಜನಗರದಲ್ಲಿ ಹೊರಗಿನವರಿಗೆ ಟಿಕೆಟ್ ನೀಡಿದ್ರೆ ಬಿಜೆಪಿ ಖಂಡಿತ ಗೆಲ್ಲಲ್ಲ. ಚಾಮರಾಜನಗರದಲ್ಲಿ ಬದಲಾವಣೆ ಬೇಕು ಅಂದ್ರೆ ನಾಗಶ್ರೀಪ್ರತಾಪ್ ಗೆ ಟಿಕೆಟ್ ನೀಡಬೇಕುʼʼ ಎಂದರು.

ಇದನ್ನೂ ಓದಿ Karnataka Elections : ಜಾರಕಿಹೊಳಿ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬ್ರೇಕ್‌ ಹಾಕಲು ಬಿಜೆಪಿ ಹೈಕಮಾಂಡ್‌ ಪ್ಲ್ಯಾನ್‌?

Exit mobile version