Site icon Vistara News

Karnataka Elections : ಹುಲಿ ಎದುರು ಹುಲಿಯೇ ಫೈಟ್‌ ಮಾಡ್ಬೇಕು; ವರುಣದಿಂದಲೇ ಸ್ಪರ್ಧಿಸಲು ವಿಜಯೇಂದ್ರಗೆ ಕಾರ್ಯಕರ್ತರ ಒತ್ತಡ

BY Vijayendra

#image_title

ಮೈಸೂರು: ಮುಂದಿನ ಚುನಾವಣೆಯಲ್ಲಿ (Karnataka Elections) ಬಿ.ವೈ ವಿಜಯೇಂದ್ರ ಅವರು ವರುಣದಿಂದ ಸ್ಪರ್ಧಿಸುವುದಿಲ್ಲ. ಅವರಿಗೆ ಶಿಕಾರಿಪುರದಿಂದಲೇ ಟಿಕೆಟ್‌ ಕೊಡಬೇಕು ಎಂದು ನಾನು ಹೈಕಮಾಂಡ್‌ಗೆ ಒತ್ತಾಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಬಹಿರಂಗವಾಗಿ ಹೇಳಿದ್ದರೂ ವರುಣಕ್ಕೆ ಬನ್ನಿ ಎಂದು ಬಿಜೆಪಿ ಕಾರ್ಯಕರ್ತರು ದುಂಬಾಲು ಬೀಳುವುದು ನಿಂತಿಲ್ಲ.

ʻʻನೀವು ಬನ್ನಿ, ಇಲ್ಲವಾದರೆ ಊಟಕ್ಕೆ ವಿಷ ಹಾಕಿ ಕೊಡಿʼʼ ಎಂದು ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರು ಹೇಳಿದ ಘಟನೆ ಶುಕ್ರವಾರ ಮೈಸೂರಿನಲ್ಲಿ ನಡೆದ ವರುಣ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಕಂಡುಬಂತು.

ʻʻಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ಹೊಡೆತ ತಡೆಯಲು ಆಗುತ್ತಿಲ್ಲ. 15 ವರ್ಷದಿಂದ ಕಾರ್ಯಕರ್ತರು ತಬ್ಬಲಿ ಆಗಿದ್ದೇವೆ. ನೀವು ರಾಜ್ಯ ನಾಯಕರು. ಶಿಕಾರಿಪುರ ಮತ್ತು ಎರಡೂ ಕಡೆ ಸ್ಪರ್ಧಿಸಿ ಆದರೆ ಯಾವ ಕಾರಣಕ್ಕೂ ವರುಣ ಮಾತ್ರ ಕೈಬಿಡಬೇಡಿʼʼ ಎಂದು ಅವರೆಲ್ಲ ಮನವಿ ಮಾಡಿದರು.

ʻʻʻನೀವಲ್ಲದೆ ಬೇರೆ ಯಾರೇ ಬಂದರೂ ಗೆಲ್ಲಲ್ಲ. ಹುಲಿ ಜತೆಯಲ್ಲಿ ಹುಲಿಯೇ ಫೈಟ್ ಮಾಡಬೇಕು. ಆಡು ಕಟ್ಟಿದರೆ ಹುಲಿ ಅದನ್ನು ತಿಂದುಕೊಂಡು ಹೋಗುತ್ತದೆ. ವಿಜಯೇಂದ್ರ ಬಂದರೆ 50 ಸಾವಿರ ಮತದ ಅಂತರದಲ್ಲಿ ಗೆಲ್ಲುತ್ತಾರೆʼʼ ಎಂದು ಕಾರ್ಯಕರ್ತರು ಹೇಳಿದರು.

ವರುಣ ಬೇರೆ ಅಲ್ಲ, ಶಿಕಾರಿಪುರ ಬೇರೆ ಅಲ್ಲ ಎಂದ ವಿಜಯೇಂದ್ರ

ʻʻನನಗೆ ಶಿಕಾರಿಪುರ ಬೇರೆಯಲ್ಲ, ವರುಣ ಬೇರೆಯಲ್ಲ. ಶಿಕಾರಿಪುರ ನಮ್ಮ ತಂದೆಯವರಿಗೆ ರಾಜಕೀಯ ಜನ್ಮ ನೀಡಿದೆ. ನಾನು ಇವತ್ತು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಆಗಿದ್ದೇನೆ. ಇದಕ್ಕೆ ಮುಖ್ಯ ಕಾರಣ ವರುಣ. ವರುಣ ರಾಜಕೀಯವಾಗಿ ನನಗೆ ಪರಿಚಯ ಮಾಡಿಕೊಟ್ಟಿದೆ. ಇಲ್ಲಿಂದ ಆರಂಭವಾದ ಪಯಣ ಈಗ ಇಲ್ಲಿವರೆಗೆ ಬಂದಿದೆʼʼ ಎಂದು ವಿಜಯೇಂದ್ರ ಹೇಳಿದರು.

ʻʻವರುಣದಲ್ಲಿ ಬಿಜೆಪಿ ಗೆಲ್ಲುವುದಕ್ಕೆ ತೊಂದರೆ ಇಲ್ಲ. ನಮ್ಮ ಪಕ್ಷದ ಮುಖಂಡರು ಪ್ರತಿಯೊಬ್ಬರೂ ಬಿಜೆಪಿ ಗೆಲ್ಲಬೇಕು ಅಂತ ಕೆಲಸ ಮಾಡಬೇಕು. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾನೂ ಬರುತ್ತೇನೆ.ʼʼ ಎಂದು ಹೇಳಿದರು ವಿಜಯೇಂದ್ರ.

ಯಡಿಯೂರಪ್ಪ ಅವರ ಹೇಳಿಕೆಗಳನ್ನು ಗಮನಿಸುತ್ತೇನೆ. ಹೈಕಮಾಂಡ್ ನಾಯಕರು ಏನು ತೀರ್ಮಾನ ಮಾಡುತ್ತಾರೆ ನೋಡುತ್ತೇನೆ ಎಂದು ವರುಣದ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದರು.

ʻʻನಾನು ವರುಣ ಕ್ಷೇತ್ರಕ್ಕೆ ವೀರಶೈವ- ಲಿಂಗಾಯತ ಸಮುದಾಯದ ಮತ ಇವೆ ಅಂತ ಬಂದಿಲ್ಲ. ಒಂದು ಸಮುದಾಯ ನಂಬಿಕೊಂಡು ಚುನಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ರಾಜಕಾರಣಿ ಯಶಸ್ಸು ಗಳಿಸಲು ಸಾಧ್ಯ.. ಇದು ಯಡಿಯೂರಪ್ಪ ಅವರ ನಂಬಿಕೆ. ನಾನೂ ಇದನ್ನು ನಂಬಿದ್ದೇನೆʼʼ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ : B.Y. Vijayendra: ಯಾವುದೇ ಕಾರಣಕ್ಕೆ ವರುಣಾದಿಂದ ವಿಜಯೇಂದ್ರ ಸ್ಪರ್ಧಿಸಲ್ಲ: ಗೊಂದಲಕ್ಕೆ ತೆರೆಯೆಳೆದ ಯಡಿಯೂರಪ್ಪ

Exit mobile version