Site icon Vistara News

Karnataka Elections : ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯಗೆ ಚಿನಕುರುಳಿ ಗ್ರಾಮಸ್ಥರಿಂದ 3.25 ಲಕ್ಷ ರೂ. ದೇಣಿಗೆ

Darshan puttannayya

#image_title

ಮಂಡ್ಯ: ಹಿಂದಿನ ಕಾಲದಲ್ಲಿ ಕೆಲವು ಅಭ್ಯರ್ಥಿಗಳಿಗೆ ಜನರೇ ದುಡ್ಡು ಸಂಗ್ರಹಿಸಿಕೊಟ್ಟು ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂಬ ಸುದ್ದಿಯನ್ನು ಕೇಳಿದ್ದೇವೆ. ಅಂಥ ಕೆಲವು ಘಟನೆಗಳು ಈಗಲೂ ನಡೆಯುತ್ತಿವೆ. ಮೇಲುಕೋಟೆ ಕ್ಷೇತ್ರದಲ್ಲಿ (Karnataka Elections) ಸರ್ವೋದಯ ಪಕ್ಷದಿಂದ ಸ್ಪರ್ಧಿಸುತ್ತಿರುವ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಈ ರೀತಿಯ ಗೌರವ ಸಂದಿದೆ.

ಚುನಾವಣಾ ವೆಚ್ಚಕ್ಕಾಗಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಚಿನಕುರುಳಿ ಗ್ರಾಮಸ್ಥರು 3.25 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದಾರೆ. ಚಿನಕುರುಳಿ ಎಂದರೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಒಂದು ಗ್ರಾಮ. ಇದು ಮೇಲುಕೋಟೆಯ ಹಾಲಿಯ ಶಾಸಕ, ಜೆಡಿಎಸ್‌ನ ಸಿ.ಎಸ್ ಪುಟ್ಟರಾಜು ಹುಟ್ಟೂರು.

ದೇವನೂರು ಮಹಾದೇವ ಅವರು ರೈತರ ಸಂಘ ಮತ್ತಿತರ ಸಂಘಟನೆಗಳನ್ನು ಸೇರಿಸಿಕೊಂಡು ಸ್ಥಾಪಿಸಿದ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣಯ್ಯ ಕಣದಲ್ಲಿದ್ದಾರೆ. ಇವರು ರೈತ ಸಂಘದ ಕೆ.ಎಸ್‌. ಪುಟ್ಟಣ್ಣಯ್ಯ ಅವರ ಪುತ್ರ. ತಂದೆಯ ಮರಣಾನಂತರ ರಾಜಕೀಯ ಪ್ರವೇಶಿಸಿದ್ದಾರೆ.

ದರ್ಶನ್‌ ಅವರು ಪ್ರಚಾರಕ್ಕೆ ಬಂದಕೂಡಲೇ ಗ್ರಾಮದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಸಂಗ್ರಹಿಸಿದ್ದ ದೇಣಿಗೆಯನ್ನು ಅವರಿಗೆ ನೀಡಿದ್ದಾರೆ. ಮತ್ತು ಚುನಾವಣೆಯಲ್ಲಿ ಗೆದ್ದು ಬರುವಂತೆ ಗ್ರಾಮದ ಹಿರಿಯರು ಹಾರೈಸಿದ್ದಾರೆ.

ಮೇಲುಕೋಟೆಯಲ್ಲಿ ಕಾಂಗ್ರೆಸ್‌ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸರ್ವೋದಯ ಪಕ್ಷವು ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರನ್ನು ಬೆಂಬಲಿಸಿತ್ತು. ಈಗ ಸುಮಲತಾ ಅವರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಅವರು ದರ್ಶನ್‌ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುತ್ತಾರಾ ಎನ್ನುವ ಕುತೂಹಲವಿದೆ.

2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಿ.ಎಸ್‌. ಪುಟ್ಟರಾಜು ಅವರಿಗೆ 96003 ಮತಗಳು ಬಂದಿದ್ದರೆ, ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ 73,779 ಮತಗಳು ಬಂದಿದ್ದವು.

ಇದನ್ನೂ ಓದಿ : Karnataka Election 2023: ಮಂಡ್ಯದಲ್ಲಿ ಎಚ್‌ಡಿಕೆ, ಸುಮಲತಾ ಸ್ಪರ್ಧೆ ಫಿಕ್ಸ್?; ‌ಬ್ಯಾಂಕ್‌ ಖಾತೆ ತೆರೆದ ಮಾಜಿ ಸಿಎಂ, ಸಂಸದೆ!

Exit mobile version