Site icon Vistara News

Karnataka Elections : ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಮಂಜುನಾಥ್ ಕುನ್ನೂರುಗೆ ಇಲ್ಲ, ವಿನಯ ಕುಲಕರ್ಣಿಯೇ ಪಕ್ಕಾ?

Anil kulkarni Khadri

#image_title

ಹಾವೇರಿ:‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವನ್ನು (Karnataka Elections) ಹೇಗಾದರೂ ಗೆದ್ದುಕೊಳ್ಳಬೇಕು ಎಂಬ ಪ್ರಯತ್ನದಲ್ಲಿರುವ ಕಾಂಗ್ರೆಸ್‌ ಹಲವು ರೀತಿಯಲ್ಲಿ ತಂತ್ರಗಳನ್ನು ಹೆಣೆಯುತ್ತಿದೆ. ಹಲವು ಸುತ್ತಿನ ತಂತ್ರಗಾರಿಕೆ ಬಳಿಕ ಈಗ ಕಾಂಗ್ರೆಸ್‌ನ ಪ್ರಭಾವಿ ನಾಯಕ ವಿನಯ ಕುಲಕರ್ಣಿ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಆರಂಭಿಕ ಹಂತದಲ್ಲಿ ಇದುವರೆಗೆ ನಿರಂತರವಾಗಿ ಬೊಮ್ಮಾಯಿ ವಿರುದ್ಧ ಸೋಲು ಕಾಣುತ್ತಿದ್ದ ಅಜ್ಜಂ ಪೀರ್‌ ಖಾದ್ರಿ ಅವರ ಬದಲಿಗೆ ಪ್ರಬಲ ಪಂಚಮಸಾಲಿ ಲಿಂಗಾಯತ ಮುಖಂಡನನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿತ್ತು. ಒಂದು ಹಂತದಲ್ಲಿ ಈ ವಾದವನ್ನು ಒಪ್ಪದ ಖಾದ್ರಿ ಅವರು ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಹಠ ಹಿಡಿದಿದ್ದರು. ಅದರೆ, ಯಾವಾಗ ಧಾರವಾಡದ ಮಾಜಿ ಶಾಸಕ ವಿನಯ ಕುಲಕರ್ಣಿ ಅವರನ್ನು ಶಿಗ್ಗಾಂವಿಯಿಂದ ಕಣಕ್ಕಿಳಿಸಲು ನಿರ್ಧರಿಸಿದಾಗ ಖಾದ್ರಿ ಅವರು ಬೆಂಬಲ ಘೋಷಿಸಿದರು.

ಈ ನಡುವೆ, ವಿನಯ ಕುಲಕರ್ಣಿ ಅವರು ತಾನು ಧಾರವಾಡದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಶಿಗ್ಗಾಂವಿ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ ಎಂದು ಹೇಳಿದ್ದರು. ಆಗ ಖಾದ್ರಿ ಅವರು ವಿನಯ ಕುಲಕರ್ಣಿ ಹೊರತುಪಡಿಸಿ ಬೇರೆ ಯಾರೇ ಬಂದರೂ ತಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಪ್ರಕಟಿಸಿದ್ದರು.

ಇದೆಲ್ಲದರ ಮಧ್ಯೆಯೇ ಮೂರು ಬಾರಿ ಶಾಸಕರಾಗಿದ್ದ, ಒಮ್ಮೆ ಧಾರವಾಡ ಕ್ಷೇತ್ರದ ಸಂಸದರೂ ಆಗಿದ್ದ, ಸಿಎಂ ಬೊಮ್ಮಾಯಿ ಅವರ ಬಲಗೈ ಬಂಟ ಎಂದೇ ಹೇಳಲಾಗುತ್ತಿದ್ದ, ಮಂಜುನಾಥ ಕುನ್ನೂರು ಮತ್ತು ಅವರ ಪುತ್ರ ರಾಜು ಕುನ್ನೂರು ಅವರು ಕಾಂಗ್ರೆಸ್‌ ಪಾಳಯ ಸೇರಿದ್ದಾರೆ. ಒಂದು ಹಂತದಲ್ಲಿ ಮಂಜುನಾಥ ಕುನ್ನೂರು ಅಥವಾ ಪುತ್ರನಿಗೆ ಶಿಗ್ಗಾಂವಿ ಟಿಕೆಟ್‌ ಸಿಗಬಹುದು ಎಂಬ ಚರ್ಚೆ ಇತ್ತು.

ಆದರೆ, ಈ ಹಂತದಲ್ಲಿ ವಿನಯ ಕುಲಕರ್ಣಿ ಮತ್ತು ಫುಟ್‌ ಆಕ್ಟಿವ್‌ ಆಗಿದ್ದಾರೆ. ಅವರು ಸೋಮವಾರ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದು, ಮಠಕ್ಕೆ ಭೇಟಿ, ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿದ್ದರು. ಕ್ಷೇತ್ರದಲ್ಲಿ ಒಂದೇ ದಿನ ನಾಲ್ಕು ಮದುವೆಗಳಲ್ಲಿ ಭಾಗವಹಿಸಿದ್ದ ಕುಲಕರ್ಣಿ ಅವರು, ಸಂಜೆ ವೇಳೆ ಮಾಜಿ ಶಾಸಕ‌ ಅಜ್ಜಂ ಪೀರ ಖಾದ್ರಿ ಜೊತೆ ಎರಡು ಗಂಟೆಗಳ ಕಾಲ ಗೌಪ್ಯ ಸಭೆ ಮಾಡಿದ್ದರು.

ವಿನಯ್ ಕುಲಕರ್ಣಿ ಜೊತೆಗಿನ‌ ಸಭೆ ಬಳಿಕ ಕಾಂಗ್ರೆಸ್ ಗೆಲುವು, ಬಿಜೆಪಿ ಸೋಲಿನ ಬಗ್ಗೆ ಜಪ ಶುರು ಮಾಡಿದ್ದಾರೆ ಖಾದ್ರಿ. ಖಾದ್ರಿ ಅವರ ಮನವೊಲಿಸುವಲ್ಲಿ ಸಫಲರಾಗಿರುವ ವಿನಯ ಕುಲಕರ್ಣಿ ತಮ್ಮ ವೋಟ್‌ ಬ್ಯಾಂಕ್‌ ಭದ್ರಗೊಳಿಸಲು ಮುಂದಿನ ದಿನಗಳಲ್ಲಿ ನಿರಂತರ ಭೇಟಿ ನೀಡುವ ಸಾಧ್ಯತೆ ಇದೆ.

ಹೈವೋಲ್ಟೇಜ್‌ನಲ್ಲಿ ಮಾತನಾಡಿದ ಖಾದ್ರಿ

ʻʻಸಲೀಂ ಅಹ್ಮದ್ ನಮ್ಮ ನಾಯಕರು ಅವರಿಗೆ ಟಿಕೆಟ್ ಕೊಟ್ರೆ ಲೀಡಲ್ಲಿ ಗೆಲ್ಲಿಸುತ್ತೇವೆ. ವಿನಯ್ ಕುಲಕರ್ಣಿಗೆ ಟಿಕೆಟ್ ಕೊಟ್ರೆ ಹೆಚ್ಚಿನ ಲೀಡಲ್ಲಿ ಗೆಲ್ಲಿಸುತ್ತೇವೆ. ಇಡೀ ಶಿಗ್ಗಾಂವಿ ಕ್ಷೇತ್ರದಲ್ಲಿ ಇವರಿಬ್ಬರದ್ದೇ ಹವಾ ಬೇರೆಯ ಯಾರದ್ದೂ ಇಲ್ಲ. ಇದು ಹೈವೋಲ್ಟೇಜ್ ಕ್ಷೇತ್ರ , ಜೀರೋ ವೋಲ್ಟೇಜ್ ಮಾಡೋಕೆ ಆಗುತ್ತಾ, ಡಬಲ್ ಹೈವೋಲ್ಟೇಜ್ ಮಾಡಬೇಕು. ಶಿಗ್ಗಾಂವಿಯಲ್ಲಿ ಖಾದ್ರಿ ಪೈನಲ್ ಆಗೋದು ಮುಖ್ಯವಲ್ಲ, ಕಾಂಗ್ರೆಸ್ ಗೆಲ್ಲಬೇಕು. ಖಾದ್ರಿ ಎಂಎಲ್ ಎ ಆಗ್ತಾನೋ ಬಿಡ್ತಾನೋ ಸೆಕಂಡರಿ. ಕಾಂಗ್ರೆಸ್ ಗೆಲ್ಲಬೇಕು, ಬಿಜೆಪಿ ಸೋಲಬೇಕು ಅದು ನಮ್ಮ ಉದ್ದೇಶ , ಅದು ನಮ್ಮ ವಿಜನ್, ಅದು ನಮ್ಮ ಸಂಕಲ್ಪʼʼ ಎಂದು ಹೇಳಿದರು ಖಾದ್ರಿ.

ʻʻಶಿಗ್ಗಾವಿಯಲ್ಲಿ 23 ವರ್ಷದ ಶ್ರಮವಿದೆ, ಅದನ್ನು ವ್ಯರ್ಥವಾಗಲು ಬಿಡಲ್ಲ. ಈ ಸಲ‌ ಬಿಜೆಪಿಯನ್ನು ಸೋಲಿಸುತ್ತೇವೆ. ಬಿಜೆಪಿ ಸೋಲಿಸುವುದು ಕಾಂಗ್ರೆಸ್ ಗೆಲ್ಲಿಸುವುದು ನನ್ನ ಅಜೆಂಡಾʼʼ ಎಂದ ಖಾದ್ರಿ ಅವರು ಯಾವ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದರು.

ʻʻವಿನಯ ಕುಲಕರ್ಣಿಯವರು ಕ್ಷೇತ್ರಕ್ಕೆ ಹೊಸಬರಲ್ಲ, ಚಿರಪರಿಚಿತರು. ಹೈಕಮಾಂಡ್ ವಿನಯ್ ಕುಲಕರ್ಣಿ ಹೆಸರು ಸೂಚಿಸಿದೆ, ಹೈಕಮಾಂಡ್ ಏನು ಆದೇಶ ಮಾಡುತ್ತದೆ ಅದನ್ನ ಶಿರಸಾವಹಿಸಿ ಪಾಲಿಸುತ್ತೇವೆʼʼ ಎಂದು ಹೇಳಿದ ಖಾದ್ರಿ ಅವರು ಮಂಜುನಾಥ ಕುನ್ನೂರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅಷ್ಟೇನೂ ಖುಷಿಯಿಂದ ಮಾತನಾಡಲಿಲ್ಲ. ಕುನ್ನೂರ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಲಾಭವಿಲ್ಲ, ಬಿಜೆಪಿಗೆ ಲುಕ್ಸಾನೂ ಇಲ್ಲ ಎಂದರು.

ಇದನ್ನೂ ಓದಿ : Karnataka Election: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಹಿಂದೇಟು ಹಾಕುತ್ತಿಲ್ಲ: ವಿನಯ್‌ ಕುಲಕರ್ಣಿ

Exit mobile version