Site icon Vistara News

Karnataka Elections : ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಹುದು ಎಂದ ಕೋರ್ಟ್‌

high court gives bail to rape accused boy

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ (Karnataka Elections)ಆಗಿದೆ, ಹೀಗಾಗಿ ಇನ್ನು ಮತದಾರರ ಪಟ್ಟಿಯಲ್ಲಿ ಬದಲಾವಣೆ ಆಗುತ್ತದೋ ಇಲ್ಲವೋ? ಬೇರೆ ಕಡೆಯಿಂದ ವರ್ಗಾವಣೆ ಮಾಡುವುದು ಮೊದಲಾದ ಕೆಲಸ ಮಾಡಬಹುದಾ ಎಂಬ ಗೊಂದಲ ನಿಮ್ಮಲ್ಲಿದೆಯಾ? ಹೈಕೋರ್ಟ್‌ ಹೇಳಿರುವ ಪ್ರಕಾರ, ಚುನಾವಣೆಯ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶವಿದೆ. ಅಂದರೆ, ಕರ್ನಾಟಕದ ಈ ಬಾರಿಯ ಚುನಾವಣೆಗೆ ಸಂಬಂಧಿಸಿ ಹೇಳುವುದಾದರೆ ಏಪ್ರಿಲ್‌ 20ರವರೆಗೂ ಪರಿಷ್ಕರಣೆ ಮಾಡಬಹುದು.

ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಶಿವಾಜಿನರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅಹರ್ಷದ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿದ ವೇಳೆ ಈ ತೀರ್ಪು ನೀಡಲಾಗಿದೆ.

ಚುನಾವಣೆಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬಹುದು. ಅಲ್ಲದೇ, ಶಾಸಕರ ಹೆಸರನ್ನೇ ಪಟ್ಟಿಯಿಂದ ತೆಗೆದು ಹಾಕುವ ಪ್ರಸಂಗಗಳು ಎದುರಾಗದಂತೆ ಕ್ರಮ ವಹಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ.

ಕಾನೂನು ಹೇಳುವುದೇನು?

-ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 22ರ ಪ್ರಕಾರ ಮತದಾರರ ಪಟ್ಟಿ ನಾಮ ನಿರ್ದೇಶನ ಮಾಡುವುದಕ್ಕಾಗಿ ಕೊನೆಯ ದಿನಾಂಕದವರೆಗೂ ತಿದ್ದುಪಡಿ ಮಾಡುವುದಕ್ಕೆ ಅನುಮತಿ ನೀಡುತ್ತದೆ. ಹೀಗಾಗಿ ಮತದಾರರ ಅಂತಿಮ ಪಟ್ಟಿ ಪ್ರಕಟದ ಆದ ನಂತರ ಪಟ್ಟಿಯನ್ನು ಮತ್ತಷ್ಟು ಪರಿಷ್ಕರಿಸಲು ಅವಕಾಶವಿಲ್ಲ.
-ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ ಸ್ಥಳಾಂತರಗೊಂಡವರು ಮತ್ತು ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಚುನಾವಣಾ ಆಯೋಗಕ್ಕೆ ಅವಕಾಶವಿದೆ.

-ಮತದಾರರ ಪಟ್ಟಿಯಿಂದ ತಮ್ಮ ಹೆಸರು ಬಿಟ್ಟು ಹೋಗಿರುವ ವ್ಯಕ್ತಿಗಳು ಯಾವ ಸಂದರ್ಭದಲ್ಲಿ ಬೇಕಾದರೂ ತಮ್ಮ ಹೆಸರನ್ನು ನೋಂದಣಿ ಅಧಿಕಾರಿಯ ಮುಂದೆ ಅರ್ಜಿ ಸಲ್ಲಿಸಿ ಸೇರ್ಪಡೆ ಮಾಡಿಕೊಳ್ಳಬಹುದು.
-ನಿರ್ದಿಷ್ಟ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡುವುದು ಮತ್ತು ಅಂತಹ ಕ್ಷೇತ್ರದಿಂದ ವರ್ಗಾವಣೆ ಹಾಗೂ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡಬಹುದಾಗಿದೆ.

ಹಾಲಿ ಪ್ರಕರಣದ ಹಿನ್ನೆಲೆ ಏನು?

ಶಿವಾಜಿನಗರ ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಇತರ ಕ್ಷೇತ್ರಗಳಲ್ಲಿ ವಾಸಿಸುವ ಮತದಾರರ ಹೆಸರುಗಳು ಸೇರ್ಪಡೆಗೊಂಡಿವೆ ಎಂಬುದಾಗಿ ಈ ಹಿಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ನ್ಯಾಯಾಲಯದ ಸೂಚನೆ ಮೇರೆಗೆ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯ ಹೊರಡಿಸಿತ್ತು. ಆಗ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಹೆಸರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿತ್ತು. ಇದನ್ನು ಪ್ರಶ್ನಿಸಿ ರಿಜ್ವಾನ್ ಅರ್ಷದ್ ಸೇರಿದಂತೆ ಕ್ಷೇತ್ರದ ಮತದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಚುನಾವಣಾ ದಿನಾಂಕದ ವಿವರ

ಗೆಜೆಟ್ ನೋಟಿಫಿಕೇಷನ್ 13ನೇ ಏಪ್ರಿಲ್‌ರಂದು ಹೊರಡಿಸಲಾಗುತ್ತದೆ. 20ನೇ ಏಪ್ರಿಲ್ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏಪ್ರಿಲ್ 21 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ : Satyameva Jayate: ಏ.9ರ ರಾಹುಲ್ ಗಾಂಧಿ ಕೋಲಾರ ಸಮಾವೇಶ ಮತ್ತೆ ಮುಂದೂಡಿಕೆ

Exit mobile version