Site icon Vistara News

Karnataka Elections : ಒಂದು ಟಿಕೆಟ್‌ಗಾಗಿ ಸಿದ್ಧಾಂತ ಬದಲಿಸ್ತೀರಾ ಶೆಟ್ಟರೇ? ಗೋಹತ್ಯೆ ಬೆಂಬಲಿಸ್ತೀರಾ? ಪಿಎಫ್‌ಐ ಒಪ್ತೀರಾ?: ರಾಜಧರ್ಮ ಬೋಧಿಸಿದ ಈಶ್ವರಪ್ಪ

Tamil Nadu Anthem played at bjp program in shimoga

ಶಿವಮೊಗ್ಗ: ಕೇವಲ ಒಂದು ಚುನಾವಣಾ (Karnataka Elections) ಟಿಕೆಟ್‌ಗಾಗಿ ನಿಮ್ಮೆಲ್ಲ ಸಿದ್ಧಾಂತಗಳು ಬದಲಾಗಿ ಹೋದುವಾ? ನೀವು ಇನ್ನು ಗೋಹತ್ಯೆಯನ್ನು ಬೆಂಬಲಿಸುತ್ತೀರಾ? ಪಿಎಫ್‌ಐಯನ್ನು ಒಪ್ಪುತ್ತೀರಾ?- ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ ಮಾಜಿ ಸಚಿವ, ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹಲವಾರು ಧರ್ಮ ಸಂಬಂಧಿತ, ಭಾವುಕ ಪ್ರಶ್ನೆಗಳನ್ನು ಕೇಳಿದರಲ್ಲದೆ, ಕಾಲ ಈಗಲೂ ಮಿಂಚಿಲ್ಲ, ಕ್ಷಮಾಪಣೆ ಕೇಳಿ ಮತ್ತೆ ಬಿಜೆಪಿಗೆ ಬನ್ನಿ ಎಂದು ಜಗದೀಶ್‌ ಶೆಟ್ಟರ್‌ಗೆ ಕರೆ ನೀಡಿದ್ದಾರೆ. ಕೆ.ಎಸ್‌. ಈಶ್ವರಪ್ಪ ಅವರು ಕೂಡಾ ಜಗದೀಶ್‌ ಶೆಟ್ಟರ್‌ ಅವರ ಪರಿಸ್ಥಿತಿಯನ್ನೇ ಅನುಭವಿಸಿದವರು. ಈ ಬಾರಿ ಸ್ಪರ್ಧೆ ಮಾಡುವುದು ಬೇಡ, ಬೇರೆಯವರಿಗೆ ಅವಕಾಶ ನೀಡಿ ಎಂದು ಹೈಕಮಾಂಡ್‌ ಹೇಳುತ್ತಲೇ ನಿವೃತ್ತಿ ಘೋಷಣೆ ಮಾಡಿದ್ದರು ಈಶ್ವರಪ್ಪ. ಈಗ ಶೆಟ್ಟರ್‌ ಬಂಡೆದ್ದಿರುವುದನ್ನು ಅವರು ಪ್ರಶ್ನಿಸಿದ್ದಾರೆ.

ಅವರೊಬ್ಬ ಸಿದ್ದಾಂತವಾದಿ ಅಂದುಕೊಂಡಿದ್ದೆ

ʻʻಜಗದೀಶ್ ಶೆಟ್ಟರ್ 40 ವರ್ಷ ಬಿಜೆಪಿಯಲ್ಲಿ ಕೆಲಸ ಮಾಡಿದ ವ್ಯಕ್ತಿ. ಅವರೊಬ್ಬ ಸಿದ್ಧಾಂತವಾದಿ ಅಂದುಕೊಂಡಿದ್ದೆ. ಅವರ ತಂದೆ ಶಿವಪ್ಪ ಶೆಟ್ಟರ್ ಮೇಯರ್ ಆಗಿದ್ದರು ಶಾಸಕರಾಗಿದ್ದರು, ಜನಸಂಘದಿಂದ ಬಂದವರಾಗಿದ್ದರು. ಜಗದೀಶ್‌ ಶೆಟ್ಟರ್‌ ಒಬ್ಬ ಸಿದ್ಧಾಂತವಾದಿ ಅಂದುಕೊಂಡಿದ್ದೆ. ಅವರ ತಂದೆ ರಾಜಕಾರಣಕ್ಕೆ ಬಂದಾಗ ನಾವು ಅಧಿಕಾರಕ್ಕೆ ಬರ್ತೇವೆ ಎಂಬ ಕನಸು ಕಂಡಿರಲಿಲ್ಲ. ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲದಂಥ ಕಾಲ ಅದು. ಬಿಜೆಪಿ ಅಧಿಕಾರಕ್ಕೆ ಬಂದಾಗ ಬೇರೆ ಬೇರೆ ಪಕ್ಷದಿಂದ ಬಂದ್ರು. ಕೆಲವರಿಗೆ ಅಧಿಕಾರ ಸಿಗಲಿಲ್ಲ ಬಿಟ್ಟು ಹೋದರು. ಅವರ ಬಗ್ಗೆ ನಾನು ಮಾಡುವುದಿಲ್ಲ. ಆದರೆ, ಶೆಟ್ಟರ್‌ ಶೆಟ್ಟರ್ ಹೋರಾಟ ಮಾಡಿಕೊಂಡು ಬಂದ ವ್ಯಕ್ತಿ. ಅವರು ಹೀಗೆ ಮಾಡಿದ್ದು ಸರಿಯಲ್ಲʼʼ ಎಂದು ಕಾಂಗ್ರೆಸ್‌ ಸೇರುವ ಶೆಟ್ಟರ್‌ ನಿರ್ಧಾರವನ್ನು ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.

ʻʻಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋರಾಟ ಮಾಡಿದ್ದರು. ರಾಷ್ಟ್ರಧ್ವಜ ಹಾರಿಸುವವರೆಗೂ ಬಿಡದೆ ಸಾಧಿಸಿದರು. ಇಂಥ ಜಗದೀಶ್ ಶೆಟ್ಟರ್ ನನಗೆ ಟಿಕೇಟ್ ಕೊಡಲಿಲ್ಲ, ಸರಿಯಾಗಿ ನಡೆಸಿಕೊಡಲಿಲ್ಲ ಎಂದಿದ್ದಾರೆ. ಅವರ ಮಾತು ಕೇಳಿ ನೋವಾಯ್ತುʼʼ ಎಂದಿದ್ದಾರೆ ಈಶ್ವರಪ್ಪ.

ಗೋಹತ್ಯೆ ನಿಷೇಧ ವಿಧೇಯಕ ಹಿಂಪಡೆದರೆ ಒಪ್ಪುತ್ತೀರಾ?

ʻʻಜಗದೀಶ್‌ ಶೆಟ್ಟರ್‌ ಅವರು ಹೋರಾಟದ ಭೂಮಿಯಿಂದ ಬಂದವರು. ಅಂತಹ ಭೂಮಿಯಿಂದ ಬಂದವರು‌ ಕಾಂಗ್ರೆಸ್ ಗೆ ಸೇರಿದ್ದಾರೆ. ಹೋರಾಟ ನಿಮಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ನಿಮಗೆ ಒಂದು ಟಿಕೆಟ್ ‌ಕೊಟ್ಟಿರಬಹುದು. ಆದರೆ ಹೋರಾಟದ ಮಣ್ಣಿನಲ್ಲಿ ನೀವು ಗೆಲ್ಲುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಅಂದುಕೊಳ್ಳಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ಬಿಲ್ ಹಿಂಪಡೆಯುತ್ತೇವೆ ಅಂದಿದ್ದಾರೆ. ನೀವು ಅದನ್ನು ಬೆಂಬಲಿಸುತ್ತೀರಾ. ಒಂದು ಟಿಕೆಟ್ ನಿಮ್ಮ ಇಡೀ ಸಿದ್ಧಾಂತವನ್ನೇ ಬದಲು ಮಾಡಿತಾʼʼ ಎಂದು ಕೇಳಿದ್ದಾರೆ ಈಶ್ವರಪ್ಪ.

ʻʻಅಧಿಕಾರಕ್ಕೆ ಬಂದ್ರೆ ಪಿಎಫ್ಐ ವಿರುದ್ಧದ ನಿಷೇಧ ಹಿಂಪಡೆಯುತ್ತೇವೆ ಎಂದು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದ್ರೆ ನೀವು ಭಯೋತ್ಪಾದನೆಯನ್ನು ಬೆಂಬಲಿಸುತ್ತೀರಾʼʼ ಎಂದು ಖಡಕ್‌ ಆಗಿ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ʻʻಕೇವಲ ಅಧಿಕಾರಕ್ಕಾಗಿ ನೀವು ಕಾಂಗ್ರೆಸ್ ಸೇರ್ತೀರಿ ಅಂದಿದ್ದರೆ ಪಕ್ಷ ನಿಮ್ಮನ್ನು ಇಷ್ಟು ಬೆಳೆಸುತ್ತಿರಲಿಲ್ಲ. ವಿಪಕ್ಷ ನಾಯಕ, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ ಮಾಡಿತು. ಇನ್ನೇನು ಮಾಡಬೇಕು? ಚೆನ್ನಾಗಿ ನಡೆಸಿಕೊಂಡಿಲ್ಲ ಅಂದ್ರೆ ಅರ್ಥ ಏನು? ಸಾಮಾನ್ಯ ಕಾರ್ಯಕರ್ತ ಯಾರ ಮೇಲೆ ಭರವಸೆ ಇಟ್ಟುಕೊಳ್ಳಬೇಕು?ʼʼ ಎಂದು ಈಶ್ವರಪ್ಪ ಕೇಳಿದರು.

ನಿಮ್ಮ ಅಪ್ಪನಿಗೆ ಏನು ಹೇಳ್ತೀರಾ? ಮೊಮ್ಮಗ ಛೀ ಥೂ ಅಂತಾನೆ!

ʻʻಕಾಂಗ್ರೆಸ್ ಟಿಕೆಟ್‌ ಕೊಟ್ಟ ಕೂಡಲೇ ನೀವೇನೂ ಗೆಲ್ಲುವುದಿಲ್ಲ. ಅದನ್ನು ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಸೇರ್ಪಡೆಯಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ? ಬಿಜೆಪಿಗೆ ಇಷ್ಟೆಲ್ಲಾ ಕೆಲಸ ಮಾಡಿದ್ರಿ. ಕಾಂಗ್ರೆಸ್‌ಗೆ ಏಕೆ ಸೇರಿದ್ರಿ ಅಂತಾ ನಿಮ್ಮ ಮೊಮ್ಮಗ ಕೇಳಿದ್ರೆ ಏನು ಹೇಳ್ತೀರಾ? ಅವನು ಸಹ ಛೀ ಥೂ ಅಂತಾನೆʼʼ ಎಂದಿರುವ ಈಶ್ವರಪ್ಪ, ʻʻನೀವು ಕ್ಷಮೆ ಕೇಳಿ ಧರ್ಮ ಉಳಿಸಿದ, ತತ್ವ ಸಿದ್ಧಾಂತ ಉಳಿಸಿದ ಪಕ್ಷಕ್ಕೆ ವಾಪಸ್ ಬರಬೇಕು. ಈಗಲೂ ಕಾಲ ಮಿಂಚಿಲ್ಲ‌ ನೀವು ವಾಪಸ್ ಬರಬಹುದುʼʼ ಎಂದಿದ್ದಾರೆ.

ಶೆಟ್ಟರ್‌ ಅವರಿಗೆ ಬಹಿರಂಗ ಪತ್ರ ಬರೆಯುತ್ತೇನೆ

ʻʻನಾನು ಶೆಟ್ಟರ್‌ ಅವರಿಗೆ ಬಹಿರಂಗ ಪತ್ರ ಬರೆಯುತ್ತೇನೆ. ನನ್ನ ಪತ್ರಕ್ಕೆ ಅವರು ಉತ್ತರ ಕೊಡಬೇಕು. ಕೇವಲ ಒಂದು ಶಾಸಕ ಟಿಕೇಟ್ ಮುಖ್ಯವಲ್ಲ. ಸಂಸ್ಕಾರ ಕೊಟ್ಟವರು ಇಂತಹ ವ್ಯಕ್ತಿಗೆ ಸಂಸ್ಕಾರ ಕೊಟ್ಟೆವಲ್ಲಾ ಅಂತಾ ಯೋಚನೆ ಮಾಡ್ತಾರೆ. ನಾನು ಬಹಿರಂಗ ಪತ್ರ ಬರೆದಾಗ ನಿಮಗೆ ನೋವು ಆಗಬಹುದುʼʼ ಎಂದೂ ಹೇಳಿದ್ದಾರೆ ಈಶ್ವರಪ್ಪ.

ʻʻಧರ್ಮೇಂದ್ರ ಪ್ರಧಾನ್ ಅವರು ಈಶ್ವರಪ್ಪನವರೇ ನೀವು ನಿವೃತ್ತಿ ತಗೋಬೇಕು ಅಂತಾ ಫೋನ್‌ ಮಾಡಿ ಹೇಳಿದ್ರು. ಅವರು ಫೋನ್‌ ಮಾಡಿದ 10ನಿಮಿಷಕ್ಕೆ ನಾನು‌ ಪತ್ರ ಬರೆದೆ. ನಿವೃತ್ತಿ ತಗೋಬೇಕು ಅಂದಾಗ ಶೆಟ್ಟರ್ ಅವರ ಜೊತೆ ಮಾತನಾಡಿದ್ದೆ. ಟಿಕೇಟ್ ಕೊಡಬೇಕು ಅಂತಾ ಲಕ್ಷ ಲಕ್ಷ ಕಾರ್ಯಕರ್ತರು ಇದ್ದಾರೆ, ನಿಮಗೇ ಏಕೆ ಟಿಕೆಟ್ ಕೊಡಬೇಕು? ಯಾರಿಗೆ ಟಿಕೆಟ್‌ ಕೊಡಬೇಕು, ಏಕೆ ಕೊಡಬೇಕು ಅಂತಾ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಹಿರಿಯರು ನಮಗಿಂತ ಬುದ್ಧಿವಂತರು ಇದ್ದಾರೆ ಅಂತ ಹೇಳಿದ್ದೆ. ಅವರು ರಾಜೀನಾಮೆ ನೀಡಿದ್ದು ನನಗೆ ಆಘಾತವಾಗಿದೆʼʼ ಎಂದಿದ್ದಾರೆ ಈಶ್ವರಪ್ಪ.

ʻʻಲಕ್ಷ್ಮಣ ಸವದಿ ರಾಜೀನಾಮೆ ಕೊಟ್ಟಾಗ ನನಗೆ ಬೇಸರವಾಗಲಿಲ್ಲ. ಅವರು ಸಂಘ ಪರಿವಾರದಿಂದ ಬಂದವರಲ್ಲ. ಹಾಗಾಗಿ ಅವರ ಬಗ್ಗೆ ನಾನು ಅಷ್ಟು ಮಾತನಾಡುವುದಿಲ್ಲ. ಶೆಟ್ಟರ್ ಸಂಘ ಪರಿವಾರದಿಂದ ಬಂದವರು. ಹಾಗಾಗಿಅವರು ಪಕ್ಷ ಬಿಟ್ಟಿದ್ದು ನೋವಾಯ್ತು. ಅವರು ವಾಪಸ್ ಬಂದರೆ ಬಹಳ ಸಂತೋಷ, ಇಲ್ಲದಿದ್ದರೆ ನೋವಾಗುತ್ತದೆ.ʼʼ ಎಂದಿದ್ದಾರೆ ಮಾಜಿ ಸಚಿವರು.

ನಮಗೆ ಸೀಟು ಮುಖ್ಯವಲ್ಲ, ದೇಶ ಉಳಿಯೋದು ಮುಖ್ಯ

ʻʻನಾನು ಒಬ್ಬ ಬಿಜೆಪಿ ನಾಯಕನ ವರ್ತನೆಗಳಿಂದ ಕಾರ್ಯಕರ್ತರಿಗೆ ಆಗಬಹುದಾದ ನೋವಿನ ಬಗ್ಗೆ ಪತ್ರ ಬರೆಯುತ್ತೇನೆ. ಎಲ್ಲಾ ಸೀಟ್ ಕಳೆದುಕೊಂಡರೂ ನಮಗೇನೂ ಬೇಜಾರಿಲ್ಲ. ಈ ದೇಶ ಉಳಿಯಬೇಕು ಅಂತಾ ಅನೇಕರು ಬೆಂಬಲ ಕೊಡ್ತಿದ್ದಾರೆ. ಚುನಾವಣೆ ಹಿನ್ನಡೆ ಬಹಳ ದೊಡ್ಡದಲ್ಲ. ಎರಡು ಸೀಟ್ ಇದ್ದವರು ಅಧಿಕಾರಕ್ಕೆ ಬಂದ ಪಕ್ಷ ನಮ್ಮದುʼʼ ಎಂದು ಹೇಳಿದರು ಈಶ್ವರಪ್ಪ.

ʻʻಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿತು. ವರುಣದಲ್ಲಿ ಬಿಜೆಪಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತದೆʼʼ ಎಂದಿರುವ ಈಶ್ವರಪ್ಪ, ಕಾಂಗ್ರೆಸ್‌ನಲ್ಲೇ ಹಲವು ಗುಂಪುಗಳು ಇವೆ. ಜಗದೀಶ್‌ ಶೆಟಟರ್‌ ಯಾವ ಗುಂಪಿಗೆ ಹೋಗ್ತಾರೋ ಗೊತ್ತಿಲ್ಲ ಎಂದರು.

ʻʻನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧʼʼ ಎನ್ನುವುದು ಈಶ್ವರಪ್ಪ ಸ್ಪಷ್ಟ ಮಾತು.

ಇದನ್ನೂ ಓದಿ : Karnataka Elections : ಕಾಂಗ್ರೆಸ್‌ ಕೈ ಹಿಡಿದ ಸಂಘ ಪರಿವಾರದ ಹಿರಿಯ ನಾಯಕ; ಶೆಟ್ಟರ್‌ ರಾಜಕೀಯ ಮಹಾಪಯಣದ ಹಿನ್ನೋಟ ಇಲ್ಲಿದೆ

Exit mobile version