ಉಪ್ಪಿನಂಗಡಿ: ಪುತ್ತೂರಿನ ಬಿಜೆಪಿ ಶಾಸಕರು (Karnataka Elections) ಮಹಿಳೆಯೊಬ್ಬರೊಂದಿಗೆ ಆತ್ಮೀಯವಾಗಿರುವ ಫೋಟೊಗಳು ವೈರಲ್ ಆಗುತ್ತಿದ್ದಂತೆಯೇ ಚಿತ್ರದಲ್ಲಿರುವ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಫೋಟೊಗಳನ್ನು ಯಾರೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶಾಸಕರು ಅವರು ಮಹಿಳೆಯೊಂದಿಗೆ ಇರುವ ಚಿತ್ರ ಕಳೆದ ಕೆಲವು ದಿನಗಳಿಂದ ಸುತ್ತಾಡುತ್ತಿದೆ. ಅದರಲ್ಲಿರುವ ಮಹಿಳೆ ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯವರೆಂದು ಗುರುತಿಸಲಾಗುತ್ತಿತ್ತು. ಇದೀಗ ಅದೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಭಾವಚಿತ್ರಗಳನ್ನು ಶಾಸಕರ ಜತೆಗೆ ಇರುವಂತೆ ಎಡಿಟ್ ಮಾಡಿ ಜಾಲತಾಣಗಳಲ್ಲಿ ಹಾಕಲಾಗಿದೆ. ಇದು ಯಾರದೋ ಕುತಂತ್ರವಾಗಿದ್ದು, ತಮ್ಮ ಕೈಚಳಕ ಬಳಸಿ ಈ ರೀತಿ ಮಾಡಿದ್ದಾರೆ. ಒಬ್ಬ ಮಹಿಳೆಯನ್ನು ಅಪಮಾನಿಸುವುದಕ್ಕಾಗಿ ಇದನ್ನು ಮಾಡಲಾಗಿದ್ದು, ಹೆಣ್ಣೆಂಬ ಕರುಣೆಯನ್ನೂ ತೋರಿಸದೆ ಈ ಕೃತ್ಯ ಎಸಗಿದ್ದಾರೆ.
ನಾನು ಶಾಸಕರನ್ನು ಭೇಟಿಯಾಗಿಯೇ ಇಲ್ಲ. ಅವರಿಗೂ ನನಗೂ ಸಂಪರ್ಕವಿಲ್ಲ. ಈ ರೀತಿ ಫೋಟೊಗಳನ್ನು ಬಿಡುಗಡೆ ಮಾಡಿರುವುದರಿಂದ ನನ್ನ ವೈಯಕ್ತಿಕ ಗೌರವಕ್ಕೆ ಹಾನಿಯಾಗಿದೆ. ಕೌಟುಂಬಿಕವಾಗಿಯೂ ಸಮಸ್ಯೆಗಳಾಗಿವೆ. ಹೀಗಾಗಿ ಇದರ ವಿರುದ್ಧ ಕ್ರಮ ಕೈಗೊಂಡು ತಕ್ಷಣವೇ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆ ಎ. 5ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ. ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಫೋಟೊ ಅಸಲಿ/ ಎಡಿಟೆಡ್ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ನಡೆಯಲಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ರಾಜಕೀಯ ವಲಯದಲ್ಲೂ ತಲ್ಲಣ ಮೂಡಿಸಿದೆ. ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಈ ಫೋಟೊಗಳು ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ.
ಪುತ್ತೂರಿನ ಶಾಸಕರಿಗೆ ವಿರೋಧಿಗಳಾಗಿರುವ ಪಕ್ಷದೊಳಗಿನವರು ಮತ್ತು ಬೇರೆ ಪಕ್ಷದವರು ಈ ರೀತಿ ಫೋಟೊಗಳನ್ನು ವೈರಲ್ ಮಾಡಿರಬಹುದು ಎಂಬ ಗುಮಾನಿ ಇದೆ.