Site icon Vistara News

Karnataka Elections : ಕೈ ತಪ್ಪಿದ ಟಿಕೆಟ್‌; ಮುಂದಿನ ತೀರ್ಮಾನಕ್ಕೆ ವೈಎಸ್‌ವಿ ದತ್ತ ನಾಳೆ ಸಭೆ; ಜೆಡಿಎಸ್‌ ಮರು ಸೇರ್ಪಡೆ ಡೌಟ್‌

YSV Datta

#image_title

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಟಿಕೆಟ್‌ನ ಭರವಸೆಯೊಂದಿಗೆ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದ ವೈಎಸ್‌ವಿ ದತ್ತ (YSV Datta) ಅವರು ಈಗ ಟಿಕೆಟ್‌ ವಂಚಿತರಾಗಿ ಬೇಸರದಲ್ಲಿದ್ದಾರೆ. ಇದೀಗ ಮುಂದೇನು ಮಾಡಬೇಕು ಎನ್ನುವುದನ್ನು ತೀರ್ಮಾನಿಸುವುದಕ್ಕಾಗಿ ಭಾನುವಾರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದಿದ್ದಾರೆ. ಒಂದು ಹಂತದಲ್ಲಿ ಅವರು ಜೆಡಿಎಸ್‌ಗೆ ಮರು ಸೇರ್ಪಡೆಯಾಗಬಹುದು ಎಂಬ ಮಾತಿದೆಯಾದರೂ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಅಷ್ಟೇನೂ ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಮಾನಸ ಪುತ್ರನೆಂದೇ ಜನಜನಿತರಾಗಿದ್ದ ವೈಎಸ್‌ವಿ ದತ್ತ ಅವರು ಇತ್ತೀಚೆಗೆ ದಳಪತಿಗಳೊಂದಿಗೆ ಅಷ್ಟೇನೂ ಉತ್ತಮ ಒಡನಾಟ ಹೊಂದಿರಲಿಲ್ಲ. ಬಳಿಕ ಕಡೂರಿನಿಂದ ಸೀಟು ದೃಢಪಡಿಸಿಕೊಂಡು ಅವರು ಕಾಂಗ್ರೆಸ್‌ ಸೇರಿದ್ದರು. ಆದರೆ, ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಕಡೂರು ಕ್ಷೇತ್ರಕ್ಕೆ ಕಳೆದ ಬಾರಿ ಸ್ಪರ್ಧಿಸಿದ್ದ ಆನಂದ್‌ ಎ.ಎಸ್‌. ಅವರಿಗೇ ಟಿಕೆಟ್‌ ನೀಡಲಾಗಿದೆ.

ಇದು ದತ್ತ ಮತ್ತು ಅವರ ಅಭಿಮಾನಿಗಳಲ್ಲಿ ಭಾರಿ ಬೇಸರ ಮೂಡಿಸಿದೆ ಮತ್ತು ಕಾಂಗ್ರೆಸ್‌ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ. ಗುರುವಾರ ರಾತ್ರಿ ಕಡೂರಿನ ಯಗಟಿಯಲ್ಲಿರುವ ನಿವಾಸಕ್ಕೆ ಬಂದ ದತ್ತ ಅವರನ್ನು ಯಾವುದಾದರೂ ಪಕ್ಷದ ಮೂಲಕ ಅಥವಾ ಪಕ್ಷೇತರರಾಗಿ ಚುನಾವಣೆ ಕಣಕ್ಕೆ ಇಳಿಯಲೇಬೇಕು ಎಂದು ಒತ್ತಡ ಹೇರಲಾಯಿತು.

ಭಾನುವಾರ ಸಭೆ ಕರೆದ ದತ್ತ

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರಗೊಂಡ ವೈ.ಎಸ್.ವಿ.ದತ್ತಾ ಅವರು ತಮ್ಮ ಅಭಿಮಾನಿಗಳಿಗೆ ಪತ್ರವೊಂದನ್ನು ಬರೆದಿದ್ದು ಭಾನುವಾರ ಬೆಳಗ್ಗೆ ಕಡೂರಿನಲ್ಲಿ ಸಭೆಯನ್ನು ಕರೆದಿದ್ದಾರೆ.

ʻʻಇದು ನನ್ನ-ನಿಮ್ಮ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನʼʼ ಎಂದಿರುವ ದತ್ತ ಅವರು, ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಅಭಿಮಾನಿಗಳ ಸಭೆಯನ್ನು ಕರೆದಿದ್ದಾರೆ.

ʻʻನನ್ನ ಬಳಿ ಹಣ-ಜಾತಿ ಇಲ್ಲದಿದ್ದರೂ ದತ್ತಣ್ಣ ಎಂದು ಕರೆದಿದ್ದೀರಾ.. ಆತ್ಮೀಯತೆಯಿಂದ ತಬ್ಬಿಕೊಂಡು ಬೆಳೆಸಿದ್ದೀರಾ.. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಒಬ್ಬರ ಜೊತೆ ಒಬ್ಬರಿರಬೇಕು.. ನನ್ನ ಜೊತೆ ನೀವು, ನಿಮ್ಮ ಜೊತೆ ನಾನಿರಬೇಕುʼʼ ಎಂದು ಹೇಳಿರುವ ದತ್ತ ಅವರು ಕಡೂರು ಮತದಾರರ ಸ್ವಾಭಿಮಾನಕ್ಕಾಗಿ, ಮತದಾರರ ಆಶೀರ್ವಾದಕ್ಕಾಗಿ ಸಭೆ ಕರೆದಿದ್ದೇನೆ ಎಂದಿದ್ದಾರೆ.

ಅವರದು ಇಂಟರ್‌ನ್ಯಾಷನಲ್‌ ಪಕ್ಷ ಎಂದ ಎಚ್‌ಡಿಕೆ

ವೈಎಸ್‌ವಿ ದತ್ತ ಅವರು ಸ್ಪರ್ಧೆ ಮಾಡಲೇಬೇಕು ಎಂಬ ಒತ್ತಡ ಹೆಚ್ಚಿದೆ. ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿ ಎನ್ನುತ್ತಿದ್ದರೆ, ಕೆಲವರು ಆಮ್‌ ಆದ್ಮಿ ಪಾರ್ಟಿಯಂಥ ಮಾನ್ಯತೆ ಪಡೆದ ಪಕ್ಷ ಒಳ್ಳೆಯದು ಎನ್ನುತ್ತಿದ್ದಾರೆ. ಇತ್ತ ಜಾತ್ಯತೀತ ಜನತಾದಳದಿಂದಲೂ ಮರು ಆಹ್ವಾನ ಬಂದಿದೆ ಎನ್ನಲಾಗುತ್ತಿದೆ. ಕಡೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಧನಂಜಯ, ಎಚ್‌.ಡಿ. ರೇವಣ್ಣ, ಪ್ರಜ್ವಲ್‌ ರೇವಣ್ಣ ಅವರು ವೈಎಸ್‌ವಿ ದತ್ತ ಮರಳಿ ಜೆಡಿಎಸ್‌ಗೆ ಬರಬಹುದು ಎಂದಿದ್ದಾರೆ.

ಆದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಕಾರಾತ್ಮಕವಾಗಿ ಮಾತನಾಡಿದ್ದಾರೆ.

ಬೀರೂರಿನಲ್ಲಿ ಮಾತನಾಡಿದ ಎಚ್‌.ಡಿ ಕುಮಾರಸ್ವಾಮಿ ಅವರು, ʻʻನಮ್ಮದು ಸಣ್ಣ ಪಕ್ಷ, ಅವರು ಇಂಟರ್ನ್ಯಾಷನಲ್ ಪಕ್ಷದ ಜೊತೆ ಹೋಗಿದ್ದಾರೆ. ನಮ್ಮ ಸಣ್ಣ ಪಕ್ಷದಲ್ಲಿ ಅವರಿಗೆ ಎಲ್ಲಿದೆ ಜಾಗ? ಅವರ ಬಗ್ಗೆ ನಾನು ಇಲ್ಲಿ ಏನು ಚರ್ಚೆ ಮಾಡಲ್ಲʼʼ ಎಂದು ಹೇಳುವ ಮೂಲಕ ಜೆಡಿಎಸ್‌ ಬಾಗಿಲು ಮುಚ್ಚಿದಂತೆ ಮಾತನಾಡಿದ್ದಾರೆ.

Exit mobile version