Site icon Vistara News

Karnataka Elections : ಯಾರೋ ಒಬ್ಬರು ಬಿಜೆಪಿ ಬಿಟ್ಟು ಹೋದರೆ ಲಿಂಗಾಯತರು ಮೂಲೆಗುಂಪು ಅಂತಾಗುತ್ತಾ?; ಬಿ.ವೈ ವಿಜಯೇಂದ್ರ

vijayendra

#image_title

ಚಾಮರಾಜನಗರ: ಚುನಾವಣೆಯ (Karnataka Elections) ಸಂದರ್ಭದಲ್ಲಿ ಯಾರೋ ಒಬ್ಬರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದರೆ ಅದು ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂದು ಹೇಳಲು ಸಾಧ್ಯವೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಬಿಜೆಪಿಯಲ್ಲಿ ಲಿಂಗಾಯತರು ಮೂಲೆಗುಂಪು ಆಗುತ್ತಿದ್ದಾರೆಂದು ಕಾಂಗ್ರೆಸ್ ಬಿಂಬಿಸಲು ಹೊರಟಿದೆ. ಕಾಂಗ್ರೆಸ್‌ ನಾಯಕರ ವಾದವನ್ನು ಯಾರೂ ಒಪ್ಪುವುದಿಲ್ಲ ಎಂದು ಹೇಳಿದರು. ಅವರು ಚಾಮರಾಜ ನಗರ ಮತ್ತು ವರುಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಇಲ್ಲಿಗೆ ಆಗಮಿಸಿದ ವೇಳೆ ಹನೂರಿನಲ್ಲಿ ಮಾತನಾಡಿದರು.

ʻʻವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಪಕ್ಷ ಯಾವ ರೀತಿ ನಡೆಸಿಕೊಂಡಿದೆ ಎನ್ನುವುದು ಜನರಿಗೆ ಗೊತ್ತು. ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್‌ಗೆ ಬಂದಿದ್ದಾರೆ ಅಂತ ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಅಂತ ಬಿಂಬಿಸಲು ಹೊರಟಿದ್ದಾರೆʼʼ ಎಂದರು.

ʻʻಬಿಜೆಪಿ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುತ್ತಿದೆ. ಹಾಗಾಗಿಯೇ 2019ರ ಚುನಾವಣೆಯಲ್ಲಿ 25 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿದೆʼʼ ಎಂದು ಹೇಳಿದರು ವಿಜಯೇಂದ್ರ. ಕಾಂಗ್ರೆಸ್‌ ತಾನು 140 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸದ ಅವರು, ಮೇ 13ಕ್ಕೆ ಎಲ್ಲವೂ ಗೊತ್ತಾಗುತ್ತದೆ ಎಂದರು.

ಬಿಜೆಪಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರು 81ನೇ ವರ್ಷದಲ್ಲೂ ಕೆಲಸ ಮಾಡ್ತಿದಾರೆ, ಓಡಾಡುತ್ತಿದ್ದಾರೆ. ಅವರ ರಟ್ಟೆ ಇನ್ನೂ ಗಟ್ಟಿಯಿದೆ, ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋ ತನಕ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲʼʼ ಎಂದು ಹೇಳಿದರು. ಯಡಿಯೂರಪ್ಪ ಒಂದು ಹೆಜ್ಜೆ ಮುಂದೆ ಇಟ್ಟರೆ ಅದರ ಪರಿಣಾಮ ಏನಾಗುತ್ತದೆ ಅನ್ನೋದು ವಿರೋಧ ಪಕ್ಷದವರಿಗೆ ಗೊತ್ತಿದೆ ಎಂದೂ ಹೇಳಿದರು.

ವರುಣದಲ್ಲಿ ಸೋಮಣ್ಣನನ್ನು ಗೆಲ್ಲಿಸುತ್ತೇವೆ

ʻʻಬಿಜೆಪಿಯ ಹಿರಿಯರು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ವರುಣಾದಲ್ಲಿ ದೇವರು ಮೆಚ್ಚುವ ರೀತಿಯಲ್ಲಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸೋಮಣ್ಣ ಅವರು ವರುಣಗೆ ಬರಬೇಕು ಎಂದು ಪಕ್ಷ ನಿರ್ಧಾರ ಮಾಡಿದೆ. ಎಲ್ಲ ನಾಯಕರು ಶ್ರಮ ಹಾಕಿ ಸೋಮಣ್ಣ ಅವರನ್ನ ಗೆಲ್ಲಿಸುತ್ತೇವೆʼʼ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ : Karnataka Elections 2023 : ಅಪ್ಪನಂತೆ ನಾನೂ ರೈತರ ಸೇವಕನಾಗುತ್ತೇನೆ; ಶಿಕಾರಿಪುರ ಕಣಕ್ಕಿಳಿದ ಬಿವೈ ವಿಜಯೇಂದ್ರ

Exit mobile version