ಬೆಂಗಳೂರು: ರಾಜ್ಯದಲ್ಲಿ ಜನವರಿವರೆಗೂ ವಿದ್ಯುತ್ ಸಮಸ್ಯೆ (Karnataka Electricity) ಇಲ್ಲ. ನಂತರ ಸಮಸ್ಯೆ ಬರಬಹುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ (Energy Minister KJ George) ಹೇಳಿದ್ದು, ಜನತೆಗೆ ಶಾಕ್ ನೀಡಿದ್ದಾರೆ. ಹಾಗಾದರೆ, ಜನವರಿ ನಂತರ ವಿದ್ಯುತ್ ಕೊರತೆ (Power shortage) ಎದುರಾದರೆ, ಮುಂದೇನು ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಇದರಿಂದ ಲೋಡ್ ಶೆಡ್ಡಿಂಗ್ (Load shedding) ಪ್ರಾರಂಭವಾಗಲಿದೆಯೇ ಎಂಬ ಆತಂಕ ಎದುರಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ.ಜೆ. ಜಾರ್ಜ್, ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಸಭೆ ಆಗಿದೆ. ಈ ಬಾರಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಮಳೆ ವಾಡಿಕೆಯಂತೆ ಆಗಿಲ್ಲ. ಮಳೆಗಾಲದಲ್ಲಿ ಸಾಮಾನ್ಯವಾಗಿ ಥರ್ಮಲ್ ಪವರ್ ಪ್ಲಾಂಟ್ ಮುಚ್ಚುತ್ತಿದ್ದೆವು. ಈ ಬಾರಿ ಕೂಡ ಮಳೆಗಾಲದಲ್ಲಿ ಮುಚ್ಚಿದ್ದೇವೆ. ಕಳೆದ ವರ್ಷಕ್ಕಿಂತ ಡಬ್ಬಲ್ ಬೇಡಿಕೆಯಿದೆ. 16900 ಮೆಗಾವ್ಯಾಟ್ ಬೇಡಿಕೆ ಈ ಬಾರಿ ಇದೆ ಎಂದು ಹೇಳಿದರು.
ನಮ್ಮದ್ದು ಬ್ಯಾಡ್ ಲಕ್ ಅನ್ನಿಸುತ್ತದೆ. ಥರ್ಮಲ್ ಪ್ಲಾಂಟ್ ರಿಕಾಲ್ ಮಾಡಲು ಸಮಯ ಬೇಕಾಯಿತು. ಇಲ್ಲಿ ಮಳೆ ಆಗಲಿಲ್ಲ, ಥರ್ಮಲ್ ಪ್ಲಾಂಟ್ ಇರೋ ಕಡೆ ಹೆಚ್ಚು ಮಳೆಯಾಯಿತು. ಶೇ. 51ರಷ್ಟು ನವೀಕರಸಿಬಹುದಾದ ವಿದ್ಯುತ್ ಅನ್ನು ನಾವು ಉತ್ಪಾದಿಸುತ್ತಿದ್ದೇವೆ. ಗಾಳಿ ಇಲ್ಲದಿರುವುದು ಸಹ ನಮಗೆ ಹೊಡೆತ ಕೊಡುತ್ತಿದೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ. ಕರ್ನಾಟಕವೇ ಕತ್ತಲಿಗೆ ಹೋಗಿದೆ ಎಂದು ಹೇಳುತ್ತಿದ್ದಾರೆ. ರಾಜಕೀಯಕ್ಕಾಗಿ ಈ ರೀತಿ ಹೇಳಬಾರದು. ನವರಿ ವರೆಗೂ ರಾಜ್ಯಕ್ಕೆ ವಿದ್ಯುತ್ ಸಮಸ್ಯೆ ಇಲ್ಲ. ನಂತರ ಸಮಸ್ಯೆ ಬರಬಹುದು ಎಂದು ಕೆ.ಜೆ. ಜಾರ್ಜ್ ಹೇಳಿದರು.
ಬಾರ್ಟರ್ ಸಿಸ್ಟಂ ಮೂಲಕ ವಿದ್ಯುತ್ ಖರೀದಿ
ಅನೇಕ ಬೆಳೆ ಕಟಾವಿಗೆ ಬಂದಿದೆ. ರೈತರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದೇವೆ. ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಹೆಚ್ಚು ಒತ್ತು ನೀಡಿದ್ದೇವೆ. ವಿದ್ಯುತ್ ಖರೀದಿಗೆ ಸಿಎಂ ಸಿದ್ದರಾಮಯ್ಯ ಹೆಚ್ಚು ಒತ್ತು ನೀಡಿದ್ದಾರೆ. ನಮ್ಮ ಭಾರತದಲ್ಲಿ ಕಲ್ಲಿದ್ದಲಿನ ಉತ್ಪಾದನೆ ಹೆಚ್ಚು ಇಲ್ಲ. ಬಳ್ಳಾರಿ ಥರ್ಮಲ್ ಪ್ಲಾಂಟ್‌ನಲ್ಲಿ ಒಳ್ಳೆ ಕೋಲ್ ಆಮದು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಪಂಜಾಬ್, ಉತ್ತರ ಪ್ರದೇಶ ರಾಜ್ಯಗಳಿಂದ ಬಾರ್ಟರ್ ಸಿಸ್ಟಂ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶದಿಂದ ಹಣ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಹೀಗಾಗಿ ಜನವರಿ ವರೆಗೂ ರಾಜ್ಯಕ್ಕೆ ವಿದ್ಯುತ್ ಸಮಸ್ಯೆ ಇಲ್ಲ ಎಂದು ಕೆ.ಜೆ. ಜಾರ್ಜ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಯಲಹಂಕದಲ್ಲಿ 370 ಮೆಗಾವ್ಯಾಟ್ ಪ್ಲಾಂಟ್ ಪುನಾರಂಭ
ಗೃಹಜ್ಯೋತಿ ಯೋಜನೆಯಡಿ ಭಾಗ್ಯ ಜ್ಯೋತಿ, ಅಮೃತ್ ಜ್ಯೋತಿಯನ್ನು ವಿಲೀನ ಮಾಡಲಾಗಿದೆ. ರಾಜ್ಯದಲ್ಲಿ 1300 ಸಬ್ ಸ್ಟೇಷನ್ ಇದೆ. ಇದರ ಬಳಿಯೇ ಸೋಲಾರ್ ಪಾರ್ಕ್ ಮಾಡಲಾಗುತ್ತದೆ. ಗ್ರಿಡ್‌ನಿಂದ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಬಹುದು. ಸೋಲಾರ್ ಸಬ್ ಸ್ಟೇಶನ್ ಟೆಂಡರ್ ಕರೆಯಲಾಗಿದೆ. 750 ಮೆ.ವ್ಯಾ. ಬಿಡ್ ಆಗಿದೆ. ನಾವು ಅದನ್ನು ಆರಂಭಿಸಿದ ನಂತರ ಭೂಮಿ ನೀಡಲಾಗುತ್ತದೆ. ಕೆಲವೇ ತಿಂಗಳಲ್ಲಿ ಯಲಹಂಕದಲ್ಲಿ 370 ಮೆಗಾವ್ಯಾಟ್ ಪ್ಲಾಂಟ್ ಅನ್ನು ಪುನಾರಂಭ ಮಾಡುತ್ತೇವೆ. ಬಿಡದಿಯ ಪ್ಲಾಂಟ್ ಕೂಡ 3 ತಿಂಗಳಲ್ಲಿ ಆರಂಭಗೊಳ್ಳಲಿದೆ. ರಾಜ್ಯದಲ್ಲಿ ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಚಿಂತನೆ ನಡೆಯುತ್ತಿದೆ ಎಂದು ಕೆ.ಜೆ. ಜಾರ್ಜ್ ತಿಳಿಸಿದರು.
ರೈತರಿಗೆ ಹಗಲಿನಲ್ಲೂ ಕರೆಂಟ್ ನೀಡಲಾಗುತ್ತದೆ. ದಸರಾಗೂ ಅತ್ಯುತ್ತಮವಾಗಿ ಲೈಟಿಂಗ್ ವ್ಯವಸ್ಥೆಯನ್ನು ಮಾಡಿದ್ದೇವೆ.
ಇಲಾಖೆಯ ಅಧಿಕಾರಿಗಳು ಎಲ್ಲ ಕೆಲಸಗಳಿಗೂ ಸಹಕಾರ ನೀಡುತ್ತಿದ್ದಾರೆ ಎಂದು ಕೆ.ಜೆ. ಜಾರ್ಜ್ ಹೇಳಿದರು.
ಇದನ್ನೂ ಓದಿ: Electricuted Case : ವಿದ್ಯುತ್ ಸ್ಪರ್ಶದಿಂದ ತಾಯಿ-ಮಗು ಸಾವಿಗೆ ಇಲಿ ಕಾರಣ ಎಂದ ಸಚಿವ ಜಾರ್ಜ್!
ಒಎಫ್‌ಸಿ ಕೇಬಲ್ ಭೂಗತಕ್ಕೆ 15 ದಿನ ಗಡುವು
ರೈತರ ಪಂಪ್‌ಸೆಟ್ ಅಕ್ರಮ – ಸಕ್ರಮ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆ.ಜೆ. ಜಾರ್ಜ್, 4 ಲಕ್ಷ ಪಂಪ್‌ಗಳು ಈಗಾಗಲೇ ಇವೆ. ಅವುಗಳ ಸಾಮರ್ಥ್ಯ ಸೇರಿದಂತೆ ಇತರೆ ಮಾಹಿತಿಯ ಸಂಗ್ರಹ ಆಗಬೇಕು ಎಂದು ಹೇಳಿದರು. ಅಲ್ಲದೆ, ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಒಎಫ್‌ಸಿ (OFC) ಕೇಬಲ್‌ಗಳನ್ನು ಭೂಗತವಾಗಿ ಅಳವಡಿಸಲು 15 ದಿನಗಳ ಗಡುವು ನೀಡಲಾಗಿದೆ ಎಂದು ಕೆ.ಜೆ. ಜಾರ್ಜ್ ಹೇಳಿದರು.