ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ, ಬೆಲೆಯೇರಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರಿಗಿರುವ ಪ್ರೀತಿ, ಬೆಂಬಲದಲ್ಲಿ ಮಾತ್ರ ಕಡಿಮೆಯಾಗಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ನರೇಂದ್ರ ಮೋದಿ ಅವರಿಗೆ ಜನ ಭಾರಿ ಬೆಂಬಲ ವ್ಯಕ್ತಪಡಿಸುತ್ತಾರೆ. ಗಂಟೆಗಟ್ಟಲೆ ನಿಂತು, ಜನರ ಗದ್ದಲದ ಮಧ್ಯೆಯೂ ಮೋದಿ ಅವರನ್ನು ಕಣ್ತುಂಬಿಕೊಳ್ಳುತ್ತಾರೆ. ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಕರ್ನಾಟಕದ ರೈತರೊಬ್ಬರು ಬಸ್ ಮೇಲಿರುವ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
“ಮೊದಲೆಲ್ಲ ಪೋಸ್ಟ್ ಆಫೀಸ್‌ನಲ್ಲಿ ಸಾವಿರ ರೂಪಾಯಿ ಬರುತ್ತಿತ್ತು. ಇನ್ನೂ 500 ರೂಪಾಯಿ ಹೆಚ್ಚಿಸಿದ್ದೀಯಾ. ವರ್ಷಕ್ಕೆ ನಿನ್ನ ಮನೆ ಮುಂದೆ ಹಸಿರಾಗಿರಬೇಕು ಎಂದಿದ್ದೀಯಾ. ಆರೋಗ್ಯ ರಕ್ಷಣೆಗೆ 5 ಲಕ್ಷ ರೂಪಾಯಿ ಕೊಡ್ತೀನಿ ಅಂದಿದ್ದೀಯಾ. ನೀನು ಲೋಕವನ್ನೇ ಗೆದ್ದವನು” ಎಂದು ರೈತರೊಬ್ಬರು ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮೇಲೆ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಅಂಟಿಸಿದ ಮೋದಿ ಭಾವಚಿತ್ರಕ್ಕೆ ವ್ಯಕ್ತಿಯು ಮುತ್ತು ನೀಡಿದ್ದಾರೆ.
ಇಲ್ಲಿದೆ ವೈರಲ್ ಆದ ವಿಡಿಯೊ
“ನಿನ್ನ ಪಾದಕ್ಕೆ ನಮಸ್ಕಾರ. ಬೆಂಗಳೂರು, ಮೈಸೂರು, ತುಮಕೂರು ಅಲ್ಲ, ಲೋಕವನ್ನೇ ಗೆಲ್ಲಲು ಬಂದಿದ್ದೀಯಾ. ಅವರಪ್ಪ, ತಾತ ಅಲ್ಲ, ಮುತ್ತಾತ ಅಲ್ಲ, ಕಾಲದಿಂದಲೂ ಗೆಲ್ಲೋಕೆ ಅಂತ ಬಂದಿದ್ದೀಯಾ” ಎಂದು ಹೇಳಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು, “ತಾತ, ಯಾಕೋ ಮೋದಿಗೆ ಮುತ್ತಿಕ್ಕುತ್ತಿದ್ದೀಯಾ” ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ವ್ಯಕ್ತಿಯು, “ಹೇ, ನನ್ ತಂದೆ ಲೋಕಾನೇ ಗೆದ್ದವ್ನೆ” ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಮೋಹನ್‌ದಾಸ್ ಕಾಮತ್ ಎಂಬುವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವ್ಯಕ್ತಿಯು ಯಾವ ಊರಿನವರು, ಬಸ್ ನಿಲ್ದಾಣ ಯಾವುದು ಎಂಬುದು ಗೊತ್ತಾಗಿಲ್ಲ. ಆದರೆ, ಅವರು ಮಾತನಾಡುವ ಕನ್ನಡ ಗಮನಿಸಿದರೆ, ಅವರು ಹಳೇ ಮೈಸೂರು ಭಾಗದವರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದಾಗ್ಯೂ, ವಿಡಿಯೊ ನೋಡಿದ ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ, ಮೋದಿ ಜನಪ್ರಿಯತೆ ಭಾರತದ ಜಾಲತಾಣಗಳಲ್ಲಿ ಮಾತ್ರವಲ್ಲ, ಚೀನಾದ ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಅದರಲ್ಲೂ, ಭಾರತ ಹಾಗೂ ಚೀನಾದ ಮಧ್ಯೆ ಕಳೆದ ಮೂರ್ನಾಲ್ಕು ವರ್ಷದಿಂದ ಗಡಿ ಬಿಕ್ಕಟ್ಟು ಉಲ್ಬಣವಾಗಿದೆ. ಭಾರತದಲ್ಲಿ ಚೀನಾವನ್ನು ಪಾಕಿಸ್ತಾನದಷ್ಟೇ ವೈರಿ ಎಂದು ಪರಿಗಣಿಸಲಾಗುತ್ತದೆ. ಭಾರತದ ಯೋಧರು ಚೀನಾ ಸೈನಿಕರನ್ನು ಗಡಿಯಲ್ಲಿ ಹಿಮ್ಮೆಟ್ಟಿಸಿದ ವಿಡಿಯೊಗಳು ಲಭ್ಯವಾಗಿದೆ. ಹೀಗಿದ್ದರೂ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಜನಪ್ರಿಯತೆ ಹೆಚ್ಚಿದೆ. ಅದರಲ್ಲೂ, “ಭಾರತದ ಪ್ರಧಾನಿಯನ್ನು ಚೀನಿಯರು “ಮೋದಿ ಲಾವೋಕ್ಸಿಯನ್” ಅಂದರೆ “ಮೋದಿ ಅಮರ” (Modi The Immortal) ಎಂಬ ಅಡ್ಡಹೆಸರಿನಿಂದಲೇ ಕರೆಯುತ್ತಾರೆ” ಎಂದು ಅಮೆರಿಕ ಮೂಲದ ದಿ ಡಿಪ್ಲೋಮ್ಯಾಟ್ ಮ್ಯಾಗಜಿನ್ ವರದಿ ಮಾಡಿದೆ.
ಇದನ್ನೂ ಓದಿ: Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್