ಬೆಂಗಳೂರು: ಇನ್ನು ಮುಂದೆ ರಾಜ್ಯದ ಯಾವುದೇ ಸರ್ಕಾರಿ ಕಚೇರಿ ಒಳಗೆ ಫೋಟೊ, ವಿಡಿಯೊ ಮಾಡುವಂತಿಲ್ಲ. ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ ಈ ಆದೇಶ ಹೊರಡಿಸಲಾಗಿದ್ದು, ಕಚೇರಿ ವೇಳೆಯಲ್ಲಿ ವಿಡಿಯೋ, ಫೋಟೊ ಮಾಡುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿದೆ.
ಕೆಲಸಗಳು ಹಾಗೂ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಸರ್ಕಾರಿ ಕಚೇರಿಗೆ ಆಗಮಿಸುವುದು ಸಾಮಾನ್ಯ. ಈ ರೀತಿ ಕಚೇರಿಗೆ ಆಗಮಿಸುವ ಖಾಸಗಿ ವ್ಯಕ್ತಿಗಳು ಕಚೇರಿ ವೇಳೆಯಲ್ಲಿ ಕಚೇರಿ ಹಾಗೂ ಸಿಬ್ಬಂದಿಯ ಫೋಟೊ, ವಿಡಿಯೋ ಮಾಡುತ್ತಿದ್ದಾರೆ. ಇಂತಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ದುರ್ಬಳಕೆ ಮಾಡಿಕೊಳ್ಳುವುದರ ಜತೆಗೆ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದುಂಟುಮಾಡುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಮುಖ್ಯವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಆಗುತ್ತಿದೆ. ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೊ, ವಿಡಿಯೊ ಮಾಡದಂತೆ ನಿಷೇಧಿಸುವ ಅಥವಾ ನಿರ್ಬಂಧಿಸುವ ನಿರ್ಧಾರ ಮಾಡಬೇಕು ಎಂದು ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ಕಾರವನ್ನು ಮನವಿ ಮಾಡಿತ್ತು.
ಈ ಕುರಿತು ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸರ್ಕಾರ, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೊ, ವಿಡಿಯೊ ಮಾಡದಂತೆ ನಿಷೇಧಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಕಾಂಗ್ರೆಸ್ ವಿರೋಧ
ಫೋಟೊ ಹಾಗೂ ವಿಡಿಯೋ ನಿಷೇಧದ ಕುರಿತು ಟ್ವಿಟರ್ ಮೂಲಕ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ʻಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಿಗಳಿಗೋಸ್ಕರ, ಭ್ರಷ್ಟಾಚಾರಕ್ಕಾಗಿʼ ಎನ್ನುವುದು ಬಿಜೆಪಿಯ 40% ಸರ್ಕಾರದ ಘೋಷವಾಕ್ಯ. ಹಿಂದೆ ಸದನದ ಕಲಾಪಗಳಿಗೆ ಮಾಧ್ಯಮಗಳ ನಿರ್ಬಂಧ, ಇಂದು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟರಿಗೆ ರಕ್ಷಣೆ. ಸರ್ಕಾರಿ ಕಚೇರಿಗಳಲ್ಲಿ ಕ್ಯಾಮೆರಾ ಚಿತ್ರೀಕರಣ ನಿಷೇಧಿಸುವ ಮೂಲಕ ಭ್ರಷ್ಟರ ಬೆಂಬಲಕ್ಕೆ ನಿಂತಿದೆ ಎಂದು ಟೀಕಿಸಿದೆ.
ಜೆಡಿಎಸ್ ವಿರೋಧ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪೂರ, ನಾವು ಸರಿಯಾಗಿದ್ದರೆ ಫೋಟೊ ವಿಡಿಯೊಗೆ ಏಕೆ ಹೆದರಬೇಕು? ಹೀಗೆ ನಿಷೇಧ ಮಾಡಿದರೆ 40% ಆರೋಪ ನಿಜ ಆಗುತ್ತದೆ. ಸರ್ಕಾರ ಪಾರದರ್ಶಕವಾಗಿ ಇದ್ದರೆ ಭಯ ಏಕೆ? ಈ ಆದೇಶವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕಾನೂನು ಮೊರೆ ಹೋಗಲಿದೆ ಕೆಆರ್‌ಎಸ್ ಪಾರ್ಟಿ
ಅನೇಕ ವರ್ಷಗಳಿಂದ ಸರ್ಕಾರಿ ಕಚೇರಿಗಳಲ್ಲಿರುವ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕರ್ನಾಟಕದ ರಾಜ್ಯ ಸಮಿತಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಹೊರಡಿಸಿರುವ ಆದೇಶ ಎಂದು ಕರ್ನಾಟಕದ ರಾಜ್ಯ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಕೆಲವು ಭ್ರಷ್ಟ ಅಧಿಕಾರಿಗಳನ್ನು, ಭ್ರಷ್ಟಾಚಾರದಲ್ಲಿ ಪಾಲುದಾರರಾದವರನ್ನು ರಕ್ಷಿಸುವ ಸಲುವಾಗಿ ಈ ಆದೇಶವನ್ನು ಹೊರಡಿಸಲಾಗಿದೆ. ಸರ್ಕಾರಿ ನೌಕರರು ಮಾಡುವ ಭ್ರಷ್ಟಾಚಾರವನ್ನು ಯಾರೂ ಪ್ರಶ್ನಿಸಬಾರದು ಎಂಬ ದುರುದ್ದೇಶವಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ದುರ್ಬಲಗೊಳಿಸಿತು. ಲೋಕಾಯುಕ್ತವನ್ನು ಬಲಗೊಳಿಸುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ಅದಕ್ಕೆ ತದ್ವಿರುದ್ಧವಾದ ಕೆಲಸ ಮಾಡಿದೆ. ಈ ರೀತಿಯ ಆದೇಶ ಯಾವುದೇ ರಾಜ್ಯದಲ್ಲಿ ಇಲ್ಲ. ಆದರೂ ಈ ಕುರಿತು ವಿವಿಧ ರಾಜ್ಯಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಬೆಳಗಾವಿ ಕಚೇರಿಯಲ್ಲಿ ಮರಾಠಿ ನಾಮಫಲಕಕ್ಕೆ ಎಂಇಎಸ್ ಆಗ್ರಹ: ಕನ್ನಡ ಪರ ಸಂಘಟನೆಗಳ ವಿರೋಧ