ಬೆಂಗಳೂರು: ಪರಿಶಿಷ್ಟ ಜಾತಿ(ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಹೆಚ್ಚಳ(SC, ST Reservation)ವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆಯಿತು. ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು, ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ 17 ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿತ್ತು. ಅದನ್ನೀಗ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳಿಗೆ ಮಾಧ್ಯಮಗಳಿಗೆ ಸಚಿವ ಮಾಧುಸ್ವಾಮಿ ಅವರು ಮಾಹಿತಿ ನೀಡಿದರು. ಎಸ್‌ಸಿ ಮತ್ತು ಎಸ್‌ಟಿ ಮೀಸಲು ಹೆಚ್ಚಳ ಜಾರಿ ನಿರ್ಧಾರವನ್ನು ರಾಜ್ಯಪಾಲರಿಗೆ ಕಳುಹಿಸಿ ಒಪ್ಪಿಗೆ ಪಡೆದುಕೊಳ್ಳಲಾಗುವುದು. ಈ ಸಂಬಂಧ ಆರ್ಟಿಕಲ್ 14, 15 ಮತ್ತು 35 ಎಲ್ಲವನ್ನೂ ಪರಿಶೀಲಿಸಿಯೇ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮುಸ್ಲಿಮ್ ಮೀಸಲಿಗೆ ಕತ್ತರಿ?
ಎಸ್‌ಸಿಯಲ್ಲಿ 103 ಜಾತಿಗಳಿವೆ ಮತ್ತು ಎಸ್‌ಟಿಯಲ್ಲಿ 56 ಜಾತಿಗಳಿವೆ. need based(ಅಗತ್ಯಕ್ಕೆ ಅನುಗುಣವಾಗಿ) ಮೀಸಲು ಜಾರಿ ಮಾಡಲಾಗುವುದು. ಮೀಸಲಾತಿ ಹೆಚ್ಚಳದ ಫಲವು ಇಡಬ್ಲ್ಯೂಎಸ್(ಆರ್ಥಿಕವಾಗಿ ಹಿಂದುಳಿದ ವರ್ಗ) ರೀತಿಯಲ್ಲಿ ಇರಲಿದ್ದು, ಸಾಂವಿಧಾನಿಕ ಮಾನ್ಯತೆ ಕೂಡ ದೊರೆಯಲಿದೆ. ಸಂವಿಧಾನ ಪ್ರಕಾರವೇ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಿದ್ದೇವೆ ಎಂದು ಮಾಧುಸ್ವಾಮಿ ಅವರು ಹೇಳಿದರು.
ಹೆಚ್ಚುವರಿಯಾಗಿ ಒದಗಿಸಲಾಗುತ್ತಿರುವ ಮೀಸಲಾತಿಯನ್ನು ಯಾವ ಮೂಲದಿಂದ ಕೊಡುತ್ತೀರಿ ಎಂಬ ಪ್ರಶ್ನೆಗೆ ಮಾಧುಸ್ವಾಮಿ ಅವರು ಸ್ಪಷ್ಟವಾದ ಉತ್ತರ ನೀಡಲಿಲ್ಲ. ಜತೆಗೆ, ಮೀಸಲಾತಿ ಹೆಚ್ಚಳವು ರಾಜಕೀಯವಾಗಿ ರಕ್ಷಣೆ ಮಾಡಿಕೊಳ್ಳುತ್ತಿರುವುದೇ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡದೇ ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಮುಸ್ಲಿಮ್ ಮೀಸಲಾತಿಗೆ ಕತ್ತರಿ ಹಾಕಿ, ಎಸ್‌ಸಿ ಮತ್ತು ಎಸ್‌ಟಿ ಹೆಚ್ಚುವರಿ ಮೀಸಲಾತಿಯನ್ನು ಒದಗಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಕೆಲವೊಂದನ್ನು ನನ್ನ ಬಾಯಿಂದ ಯಾಕೆ ಹೇಳಿಸ್ತೀರಾ ಎಂದು ಹೇಳಿದ್ದು, ಮೀಸಲು ಹೆಚ್ಚಳಕ್ಕೆ ಸಂಬಂಧಿಸಿದಂತೆ ಗೊಂದಲ ಹೆಚ್ಚಾಗಿದೆ.
ಇದನ್ನೂ ಓದಿ | ಬಿಜೆಪಿಯ SCST ಮೀಸಲಾತಿ ಮಾಸ್ಟರ್ ಸ್ಟ್ರೋಕ್‌ಗೆ ಕಾಂಗ್ರೆಸ್ ಉತ್ತರ ಮಲ್ಲಿಕಾರ್ಜುನ ಖರ್ಗೆ?