ಬೆಂಗಳೂರು: 2019ಕ್ಕಿಂತ ಹಿಂದೆ ಮಾರುಕಟ್ಟೆಗೆ ಇಳಿದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಸಂಖ್ಯೆ ಫಲಕ (HSRP Number Plate) ಕಡ್ಡಾಯವಾಗಿ ಅಳವಡಿಸಬೇಕೆಂಬ ಗಡುವನ್ನು ಸೆಪ್ಟೆಂಬರ್ 15ರವರೆಗೆ ವಿಸ್ತರಣೆ ಮಾಡಲಾಗಿದೆ. ಜುಲೈ 4ರವರೆಗೆ ವಿಸ್ತರಣೆ ಮಾಡಲಾಗಿದ್ದ ಅವಧಿಯನ್ನು ಈಗ ರಾಜ್ಯ ಸರ್ಕಾರವು (Karnataka Government) ಮತ್ತೆ ವಿಸ್ತರಣೆ (HSRP Number Plate Deadline) ಮಾಡಿದೆ. ಹೀಗಾಗಿ ನಾನಾ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ನಂಬರ್ಪ್ಲೇಟ್ ಅಳವಡಿಸದ ವಾಹನಗಳ ಮಾಲೀಕರಿಗೆ ನೆಮ್ಮದಿ ಸಿಕ್ಕಿದೆ.
ಹೊಸ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕೈಗೊಳ್ಳಬಾರದು ಎಂದು ಹೈಕೋರ್ಟ್ ಮೇ 21ರಂದು ಹೊರಡಿಸಿದ್ದ ಆದೇಶ ಜುಲೈ 4ರವರೆಗೆ ವಿಸ್ತರಣೆಯಾಗಿರುವುದರಿಂದ ವಾಹನ ಮಾಲೀಕರಿಗೆ ತೊಂದರೆ ತಪ್ಪಿತ್ತು. ಈಗ ಜುಲೈ 4 ಕೂಡ ಹತ್ತಿರ ಬಂದಿದ್ದು, ಇನ್ನೂ ಲಕ್ಷಾಂತರ ವಾಹನಗಳ ಮಾಲೀಕರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದ ಕಾರಣ ಸೆಪ್ಟೆಂಬರ್ 15ರವರೆಗೆ ಗಡುವನ್ನು ವಿಸ್ತರಣೆ ಮಾಡಲಾಗಿದೆ.
ಹೊಸ ಮಾದರಿಯ ಸುರಕ್ಷಿತ ನಂಬರ್ ಪ್ಲೇಟ್ ಅಳವಡಿಕೆಗೆ ನೀಡಲಾಗಿರುವ ಗಡುವು ವಿಸ್ತರಿರಣೆಗೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಎಚ್ಎಸ್ಆರ್ಪಿ ತಯಾರಿಕಾ ಕಂಪನಿ ಬಿಎನ್ಡಿ ಎನರ್ಜಿ ಲಿಮಿಟೆಡ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು .ಅದನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎನ್ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರಿದ್ದ ವಿಭಾಗೀಯ ಪೀಠ ಜುಲೈ 4ರ ವರೆಗೆ ವಿಸ್ತರಣೆ ಮಾಡುವಂತೆ ಹೇಳಿತ್ತು.
ಸೆ.15ರ ಬಳಿಕ ವಿಸ್ತರಣೆ ಇಲ್ಲ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ವಿಷಯ ತಿಳಿಸಿದರು. “ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಸೆಪ್ಟೆಂಬರ್ 15ರ ಬಳಿಕ ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಣೆ ಮಾಡುವುದಿಲ್ಲ” ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮುನ್ನ ನೋಂದಣಿಯಾದ ಎಲ್ಲ ಮಾದರಿಯ ವಾಹನಗಳಿಗೆ ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್ಗಳ ಮೂಲಕ ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ 2023ರ ಆಗಸ್ಟ್ 17ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ವಿತರಣೆ, ಅಳವಡಿಕೆ ಸೇರಿದಂತೆ ನಾನಾ ಸಮಸ್ಯೆಗಳಿಂದ ಈ ಯೋಜನೆಗೆ ಸಮಸ್ಯೆಯಾಗುತ್ತಿದೆ. ಸುರಕ್ಷಿತ ನಂಬರ್ ಪ್ಲೇಟ್ ಅಳವಡಿಸಲು ಸುಮಾರು ಅರ್ಧದಷ್ಟು ವಾಹನ ಮಾಲೀಕರಿಗೆ ಇನ್ನೂ ಆಗಿಲ್ಲ. ಹೀಗಾಗಿ ಗಡುವು ವಿಸ್ತರಣೆ ಆಗುತ್ತಲೇ ಇದೆ.
ಇದನ್ನೂ ಓದಿ: HSRP Number Plate ಅಪ್ಲೈ ಮಾಡುವಾಗ ಹುಷಾರ್; ನಕಲಿ ಲಿಂಕ್ಗಳಿಂದ ಮೋಸ ಹೋಗದಿರಿ!