ನವದೆಹಲಿ: ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲು ರದ್ದು (Muslim Quota Issue) ಆದೇಶದ ಕುರಿತು ಪ್ರತಿಕ್ರಿಯಿಸಲು ಕರ್ನಾಟಕ ಸರ್ಕಾರವು ಕಾಲಾವಕಾಶ ಕೇಳಿದೆ. ಹಾಗಾಗಿ, ಈ ಸಂಬಂಧ ದಾಖಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ಏಪ್ರಿಲ್ 25ಕ್ಕೆ ಮುಂದೂಡಿದೆ. ಕರ್ನಾಟಕದಲ್ಲಿ ಒಬಿಸಿ ಕೋಟಾದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಶೇ.4 ಮೀಸಲಾತಿ ಜಾರಿಯಲ್ಲಿತ್ತು. ಕೆಲವು ವಾರಗಳ ಹಿಂದೆ ಕರ್ನಾಟಕ ಸರ್ಕಾರವು ಮೀಸಲು ರದ್ದುಪಡಿಸಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ.2 ಮೀಸಲು ಹೆಚ್ಚಿಸಿತ್ತು.
ರಾಜ್ಯದಲ್ಲಿ ಮುಸ್ಲಿಮರ ಕೋಟಾವನ್ನು ರದ್ದುಗೊಳಿಸಿದ ಸರ್ಕಾರದ ಆದೇಶವನ್ನು ಪರಿಶೀಲಿಸಿದರೆ, ರದ್ದು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಅಡಿಪಾಯವು ಅಸ್ಥಿರ ಮತ್ತು ದೋಷಪೂರಿತವಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಇದನ್ನೂ ಓದಿ: Supreme Court: ಮುಸ್ಲಿಮ್ ಸಮುದಾಯದ ಶೇ.4 ಮೀಸಲು ರದ್ದು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಕರ್ನಾಟಕದಲ್ಲಿ ಒಬಿಸಿ ಕೆಟಗರಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಜಾರಿಯಲ್ಲಿದ್ದ ಶೇ.4 ಮೀಸಲು ರದ್ದು ಮಾಡಿದ್ದನ್ನು ಪ್ರಶ್ನಿಸಿ ಎಲ್ ಗುಲಾಮ್ ರಸೂಲ್ ಮತ್ತು ಅಂಜುಮನ್ ಇ ಇಸ್ಲಾಮ್, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿಗಳ ವಿಚಾರಣೆಯನ್ನು ಜಸ್ಟೀಸ್ ಕೆ ಎಂ ಜೋಸೆಫ್ ನೇತೃತ್ವದ ಇಬ್ಬರು ನ್ಯಾಯಮೂರ್ತಿಗಳ ಪೀಠವು ನಡೆಸುತ್ತಿದೆ. ಧರ್ಮದ ಆಧಾರದ ಮೇಲೆ ಮೀಸಲು ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರವು ತನ್ನ ಆದೇಶಕ್ಕೆ ಸಮರ್ಥನೆಯನ್ನು ನೀಡಿತ್ತು.
ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು, ಮಧ್ಯಂತರ ವರದಿಯ ಆಧಾರದ ಮೇಲೆ ಒಪ್ಪಿಗೆ ನೀಡುವ ಬದಲು ರಾಜ್ಯವು ಅಂತಿಮ ವರದಿಗಾಗಿ ಕಾಯಬಹುದಿತ್ತು. ಆದರೆ, ಅಂಥ ಮಹಾ ತುರ್ತು ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಮ್ ಸಮುದಾಯದಕ್ಕೆ ನೀಡಲಾದ ಮೀಸಲು ರದ್ದು ಪ್ರಶ್ನಿಸಿ ದಾಖಲಾಗಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಏಪ್ರಿಲ್ 13ರಂದು ಒಪ್ಪಿಗೆ ಸೂಚಿಸಿತ್ತು. ಅಲ್ಲದೇ, ವಿಚಾರಣೆಯನ್ನು ಏಪ್ರಿಲ್ 18ಕ್ಕೆ ನಿಗದಿಪಡಿಸಿತ್ತು. ಇದೀಗ ಕರ್ನಾಟಕ ಸರ್ಕಾರವು ಈ ಕುರಿತು ಪ್ರತಿಕ್ರಿಯಿಸಲು ಕಾಲಾವಕಾಶವನ್ನು ಕೇಳಿದ್ದರಿಂದ, ವಿಚಾರಣೆಯನ್ನು ಏ25ಕ್ಕೆ ಮುಂದೂಡಿದೆ.